ಬಿಗ್ ಬಾಸ್ ಮೂಲಕ ಮನೆ ಮಾತಾಗಿರುವ ದಿವ್ಯ ಉರುಡುಗ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೌದು, ದಿವ್ಯ ಇದೀಗ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ. ಅತ್ಯಂತ ಜನಪ್ರಿಯ ಎಸ್‍ಯುವಿ ಟಾಟಾ ಹ್ಯಾರಿಯರ್ ಕಾರು ಖರೀದಿಸಿದ್ದಾರೆ. ಬ್ಲಾಕ್ ಎಡಿಶನ್ ಕಾರು ಇದಾಗಿದೆ. ಇದೀಗ ದಿವ್ಯ ಹೊಸ ಕಾರಿನಲ್ಲಿ ಮಿಂಚುತ್ತಿದ್ದಾರೆ.
ವಿಶೇಷ ಅಂದರೆ ದಿವ್ಯ ಉರುಡುಗ ಕಾರು ಡೆಲಿವರಿಯನ್ನು ಆಪ್ತ ಗೆಳೆಯ, ಬಿಗ್ ಬಾಸ್ ಮೂಲಕ ಜೊತೆಯಾದ ಅರವಿಂದ್ ಕೆಪಿ ಜೊತೆ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ರಿಯಾಲಾಟಿ ಶೋನಿಂದ ಅರವಿಂದ್ ಕೆಪಿ ಹಾಗೂ ದಿವ್ಯ ಉರುಡುಗ ಆತ್ಮೀಯರಾಗಿದ್ದಾರೆ. ಇದೀಗ ಅವರ ಹೊಸ ಕಾರು ಖರೀದಿ ಪಯಣದಲ್ಲೂ ಅರವಿಂದ್ ಜೊತೆಯಾಗಿದ್ದಾರೆ.
ಅರವಿಂದ್ ಮಾತ್ರವಲ್ಲ, ದಿವ್ಯ ಉರುಡುಗ ಆಪ್ತರು ಕಾರು ಡೆಲಿವರಿ ವೇಳೆ ಹಾಜರಿದ್ದರು. ಹೊಸ ಕಾರಿನ ಹಲವು ಫೋಟೋ, ವಿಡಿಯೋಗಳನ್ನು ದಿವ್ಯ ಉರುಡುಗ ಹಂಚಿಕೊಂಡಿದ್ದಾರೆ. ತಮ್ಮ ಬ್ಲಾಕ್ ಎಡಿಶನ್ ಕಾರಿಗೆ ತಕ್ಕಂತೆ ದಿವ್ಯ ಉರುಡುಗ ಡ್ರೆಸ್ ಮಾಡಿದ್ದಾರೆ. ಬ್ಲಾಕ್ ನೈಕಿ ಟೀ ಶರ್ಟ್ ಧರಿಸಿದ್ದಾರೆ.
ಬಿಗ್ ಬಾಸ್ ಶೋ ಬಳಿಕ ದಿವ್ಯ ಉರುಡುಗ ಹಲವು ಧಾರವಾಹಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಿಯಾಲಿಟಿ ಶೋ ಮೂಲಕ ಜನರ ಮನಸ್ಸು ಗೆದ್ದ ದಿವ್ಯ ಉರುಡುಗ ಇದೀಗ ಸೀರಿಯಲ್ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಸದ್ಯ ನಿನಗಾಗಿ ಸೀರಿಯಲ್ ಮೂಲಕ ದಿವ್ಯ ಉರುಡುಗ ತಮ್ಮ ಅಭಿನಯ ಹಾಗೂ ಪಾತ್ರಗಳಿಂದ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.
ಹೊಸ ಕಾರು ಖರೀದಿಸಿದ ದಿವ್ಯಾಗೆ ಅರವಿಂದ್ ಶುಭಾಶಯ ಕೋರಿದ್ದಾರೆ. ಅಭಿನಂದನೆಗಳನ್ನು ಹಾಸ್ಯ ಪದ(ಕಂಜಾಜುಲೇಶನ್) ಬಳಸಿರುವ ಅರವಿಂದ್, ಹೆಮ್ಮೆಯಾಗುತ್ತಿದೆ. ಮತ್ತಷ್ಟು ಸಾಧನೆ ನಿರೀಕ್ಷಿಸುತ್ತಿದ್ದೇವೆ ಎಂದು ಅರವಿಂದ್ ಕಮೆಂಟ್ ಮಾಡಿದ್ದಾರೆ.
ಟಾಟಾ ಹ್ಯಾರಿಯರ್ ಕಾರಿನ ಆರಂಭಿಕ ಬೆಲೆ 14.99 ಲಕ್ಷ ರೂಪಾಯಿಯಿಂದ ಟಾಪ್ ಮಾಡೆಲ್ ಬೆಲೆ 25.89 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಆದರೆ ಬ್ಲಾಕ್ ಅಥವಾ ಡಾರ್ಕ್ ಎಡಿಶನ್ ಆರಂಭಿಕ ಬೆಲೆ 22.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಕಾರಿನ ಆನ್ ರೋಡ್ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.
ಟಾಟಾ ಕಾರುಗಳು 5 ಸ್ಟಾರ್ ಸುರಕ್ಷತೆ ಹೊಂದಿದೆ. ಈ ಪೈಕಿ ಹ್ಯಾರಿಯರ್ ಕೂಡ ಗರಿಷ್ಠ ಸುರಕ್ಷತೆ ಕಾರಾಗಿದೆ. ಇನ್ನು ಅತ್ಯುತ್ತಮ ಪ್ರಯಾಣ ಹಾಗೂ ಡ್ರೈವಿಂಗ್ ಅನುಭವ ಈ ಕಾರು ನೀಡಲಿದೆ. 5 ಸೀಟರ್ ಎಸ್‌ಯುವಿ ಕಾರು ಇದಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, 1956 cc, ಎಂಜಿನ್ ಹೊಂದಿದೆ. 6 ಏರ್ ಬ್ಯಾಗ್, ಎಬಿಎಸ್, ಇಬಿಡಿ, ಹಿಲ್ ಅಸಿಸ್ಟ್, ಅಡಾಸ್ 2 ಲೆವೆಲ್ ಟೆಕ್ ಹೊಂದಿದೆ.