ನಟಿ, ನಿರೂಪಕಿ ಅನುಪಮಾ ಗೌಡ ಅಂದ್ರೆ ಬಹಳ ಸ್ಟ್ರಾಂಗ್, ಸ್ವಾವಲಂಬಿ ಮಹಿಳೆ ಎಂದು ಸಾಮಾನ್ಯ ಜನರ ನಂಬಿಕೆ. ಆದರೆ, ಆಕೆಯೂ ಒಮ್ಮೆ ಆತ್ಮಹತ್ಯೆಗೆ ಯೋಚಿಸಿದ್ದು, ಹಲವು ಸಮಯ ಖಿನ್ನತೆಯಲ್ಲಿದ್ದರು.
ಇದಕ್ಕೆ ಲವ್ ಬ್ರೇಕಪ್ ಕಾರಣ ಎಂದು ಬಹಳಷ್ಟು ಮಂದಿ ಅಂದುಕೊಂಡಿದ್ದಾರೆ. ಆದರೆ, ಅದೊಂದೇ ಅಲ್ಲ ಎಂದಿದ್ದಾರೆ ಅನು. ರ್ಯಾಪಿಡ್ ರಶ್ಮಿಯೊಂದಿಗಿನ ಸಂದರ್ಶನದಲ್ಲಿ ನಟಿ, ನಿರೂಪಕಿ ತಮ್ಮ ಜೀವನದ ಅನೇಕ ವಿಷಯಗಳ ಕುರಿತಾಗಿ ಮಾತನಾಡಿದ್ದಾರೆ.
ಸುಮಾರು 7-8 ವರ್ಷಗಳ ಹಿಂದಿನ ಮಾತು. ಅನುಪಮಾ ಆಗ ಅಕ್ಕ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆಗ ಡಬಲ್ ಆ್ಯಕ್ಟ್ ಮಾಡುತ್ತಿದ್ದ ನಟಿಯ ಒಂದು ಪಾತ್ರ ಸಂಪೂರ್ಣ ನೆಗೆಟಿವ್ ಶೇಡ್‌ನದು.
ಈ ಪಾತ್ರ ಅವರ ದಿನದ ಮೇಲೆ ಸಾಕಷ್ಟು ಪರಿಣಾಮ ಬೀರಲಾಂಭಿಸಿತ್ತಂತೆ. ಶೂಟಿಂಗ್ ಮುಗಿಸಿ ಮನೆಗೆ ಹೋದಾಗ ಅಪ್ಪ ಅಮ್ಮ ಮಾತಾಡಿದರೂ ವಸ್ತುಗಳನ್ನು ಎಸೆಯುವಷ್ಟು ಪಾತ್ರದಲ್ಲಿ ಮುಳುಗಿ ಹೋಗಿದ್ದರಂತೆ.
ಇದರೊಂದಿಗೆ ಬಿಸ್ನೆಸೊಂದಕ್ಕೆ ಕೈ ಹಾಕಿ ಸುಮಾರು 70 ಲಕ್ಷ ರೂ.ಗಳಷ್ಟು ಕಳೆದುಕೊಂಡಿದ್ದು ಕೂಡಾ ಅನುಪಮಾ ಖಿನ್ನತೆಗೆ ಜಾರಲು ಕಾರಣವಾಗಿತ್ತು. ಇನ್ನು ಅಕ್ಕ ಧಾರಾವಾಹಿಯ ಶೂಟಿಂಗ್ ತಿಂಗಳಿಗೆ ಕೇವಲ 10 ದಿನ ನಡೆದರೆ ಆಕೆಯ ಕೈಗೆ 20,000 ಬರುತ್ತಿತ್ತು. ಈ ಎಲ್ಲ ಕಾರಣಗಳು ಸೇರಿ ನಟಿ ಕುಗ್ಗಿ ಹೋಗಿದ್ದರು.
ಈ ಸಂದರ್ಭದಲ್ಲಿ ಸದಾ ಜೊತೆಯಾಗಿ ನಿಂತಿದ್ದು ಸ್ನೇಹಿತರು ಎನ್ನುವ ಅನುಪಮಾ, ಅವರ ಪಾತ್ರ ತನ್ನ ಬದುಕಿನಲ್ಲಿ ಸಾಕಷ್ಟಿದೆ ಎಂದು ಹೇಳಿದ್ದಾರೆ.
ಅನುಪಮಾ ಸಂಭಾವನೆಗಳೆಷ್ಟು?
ನಟಿಯಾಗಿ, ನಿರೂಪಕಿಯಾಗಿ ತಾವು ಪಡೆದ ಸಂಭಾವನೆ ವಿಚಾರವನ್ನೂ ನೇರವಾಗಿ ಹಂಚಿಕೊಂಡಿದ್ದಾರೆ ಅನು. ಅವರು ಆರಂಭದಲ್ಲಿ ರಿಯಾಲಿಟಿ ಶೋವೊಂದರಲ್ಲಿ ಮಾಡಿದಾಗ 30000 ರೂ. ಪಡೆದಿದ್ದರಂತೆ.
ನಂತರ ಅಣ್ಣತಂಗಿ ಧಾರಾವಾಹಿಗೆ ದಿನವೊಂದರ ಶೂಟಿಂಗ್‌ಗೆ 2,500 ರೂ.ಗಳನ್ನೂ, ಅಕ್ಕ ಧಾರಾವಾಹಿಗೆ 2000 ರೂ.ಗಳನ್ನೂ ಪಡೆಯುತ್ತಿದ್ದರಂತೆ. ಆದರೆ ಶೂಟಿಂಗ್ ಇರುತ್ತಿದ್ದುದೇ ತಿಂಗಳಲ್ಲಿ 10-12 ದಿನಗಳು, ಹೀಗಾಗಿ ಹಣ ಸಾಲುತ್ತಿರಲಿಲ್ಲ ಎಂದಿದ್ದಾರೆ.
ಬಿಗ್ ಬಾಸ್ ಬಳಿಕ ನಿರೂಪಣೆಗೆ ಇಳಿದ ಅನುಪಮಾಗೆ ದಿನವೊಂದರ ನಿರೂಪಣೆಗೆ ಆರಂಭದಲ್ಲಿ 30,000 ರೂ. ಸಿಗುತ್ತಿತ್ತು. ಪ್ರತಿ ಶೋಗೂ ಇದು ಶೇ,10ರಷ್ಟು ಹೆಚ್ಚುತ್ತಾ ಹೋಗಿದೆಯಂತೆ.
ಈಗ ಹಣ ಚೆನ್ನಾಗಿ ಹರಿದು ಬರುತ್ತಿದೆ, ಆದರೆ ಅಷ್ಟೇ ಕಮಿಟ್‌ಮೆಂಟ್‌ಗಳೂ ಇವೆ ಎನ್ನುವ ನಟಿ, ಈಗಲೂ ಕೆಲವೊಮ್ಮೆ ತಮ್ಮ ಆಪ್ತರಿಗಾಗಿ 30,000 ರೂಗಳಿಗೂ ನಿರೂಪಣೆ ಮಾಡಿಕೊಡುತ್ತೇನೆ ಎಂದಿದ್ದಾರೆ.