ಕನ್ನಡ ಕಿರುತೆರೆಯ ನಟ ನಟಿಯರು ತೆಲುಗು ತಮಿಳು ಕಿರುತೆರೆಗೆ ತೆರಳಿ ಅಲ್ಲಿ ಸೀರಿಯಲ್ ಗಳಲ್ಲಿ (serial) ನಟಿಸೋದು ಹೊಸದೇನೂ ಅಲ್ಲ. ಕನ್ನಡದ ಹಲವು ಜನಪ್ರಿಯ ನಟಿಯರು ಇತರ ಭಾಷಾ ಸೀರಿಯಲ್ ಗಳಲ್ಲೂ ಖ್ಯಾತಿ ಪಡೆದವರು ಇದ್ದಾರೆ.
ನೇಹಾ ರಾಮಕೃಷ್ಣ, ಅಮೂಲ್ಯ ರವಿಕಿಶನ್, ರಶ್ಮಿ ಪ್ರಭಾಕರ್, ಶೋಭಾ ಶೆಟ್ಟಿ, ಮಾನ್ಸಿ ಜೋಶಿ, ವೈಷ್ಣವಿ, ಚಂದನ್ ಕುಮಾರ್, ದಿಲೀಪ್ ಶೆಟ್ಟಿ, ಗಗನ್ ಚಿನ್ನಪ್ಪ, ಐಶ್ವರ್ಯ ಪಿಸ್ಸೆ ಮೊದಲಾದ ಕನ್ನಡದ ನಟರು ಈಗ ತೆಲುಗು-ತಮಿಳಿನಲ್ಲಿ ಜನಪ್ರಿಯತೆ ಪಡೆದಿದ್ದಾರೆ ಇದಕ್ಕೆ ಹೊಸ ಸೇರ್ಪಡೆ ಪ್ರತಿಮಾ (Prathima).
ಈ ಪ್ರತಿಮಾ ಯಾರು? ಕನ್ನಡದ ಯಾವ ಸೀರಿಯಲ್ ನಲ್ಲಿ ಇವರು ನಟಿಸಿದ್ದರು ಎಂದು ನೀವು ಕೇಳಿದ್ರೆ ಇಲ್ಲಿದೆ ನಿಮಗೆ ಉತ್ತರ… ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂತರಪಟ (Antarapata) ಧಾರಾವಾಹಿಯಲ್ಲಿ ಆರಾಧನಾ ಮಲತಂಗಿ ಸಿರಿ ಪಾತ್ರದಲ್ಲಿ ಪ್ರತಿಮಾ ನಟಿಸುತ್ತಿದ್ದರು.
ಅಪ್ಪನಂತೆ ಆರಾಧನಾಳನ್ನು ಕಂಡರೇ ಆಗದ, ಅವಳ ಹಿಂದೆ ಪಿತೂರಿ ನಡೆಸುವ ತಂಗಿ ಸಿರಿ, ಮೊದಲ ಸೀರಿಯಲ್ ನಲ್ಲೇ ತನ್ನ ನಟನೆಯ ಮೂಲಕ ಗಮನ ಸೆಳೆದಿದ್ದರು. ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು ಸಹ, ನೆಗೆಟೀವ್ ಪಾತ್ರದಿಂದಲೇ ಜನಮನ ಗೆದ್ದಿದ್ದರು.
ಇದೀಗ ನಟಿ ಪ್ರತಿಮಾ ತೆಲುಗು ಹೊಸ ಸೀರಿಯಲ್ ನಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಸನ್ನೆಟ್ವರ್ಕ್ ಜೆಮಿನಿ (Gemini) ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಸಿವಂಗಿ'ಯಲ್ಲಿ ಪ್ರತಿಮಾ ನಟಿಸಲಿದ್ದಾರೆ.
ಸಿವಂಗಿ ಧಾರಾವಾಹಿಯಲ್ಲಿ ಪ್ರತಿಮಾ ನಾಯಕಿ ಆನಂದಿಯಾಗಿ ನಟಿಸುತ್ತಿದ್ದಾರೆ. ಇದೊಂದು ವಿಭಿನ್ನ ಕಥೆಯಾಗಿದ್ದು, ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿದೆ. ಕುಟುಂಬದ ಮುದ್ದಿನ ಕಣ್ಮಣಿಯಾಗಿರುವ ಆನಂದಿ, ಯಾವಾಗಲೂ ಖುಷಿ ಖುಷಿಯಾಗಿರುತ್ತಾರೆ.
ಮನೆಯಲ್ಲಿ ಮಾತ್ರವಲ್ಲ, ಊರಿನಲ್ಲಿ ಯಾರಿಗೇ ಯಾವುದೇ ಕಷ್ಟ ಬಂದರೂ ಸಹ ಆನಂದಿ ಸಮಸ್ಯೆ ಎದಿರಿಸೋಕೆ ಯಾವಾಗಲೂ ರೆಡಿಯಾಗಿರ್ತಾರೆ. ಈ ಸೀರಿಯಲ್ ಇದೇ ಮಾರ್ಚ್ 25 ರಿಂದ ಜೆಮಿನಿ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇನ್ನು ಮುಂದೆ ಅಂತಪಟದಲ್ಲಿ ನಟಿಸುತ್ತಾರೆಯೇ? ಕಾದು ನೋಡಬೇಕು..