ಬಿಗ್ ಬಾಸ್ ಸೀಸನ್ 11 ಕ್ಕೆ (Bigg Boss Season 11) ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ನಟಿ ಶೋಭಾ ಶೆಟ್ಟಿ ಮನೆಯೊಳಗೆ ಕಾಲಿಟ್ಟ ತಕ್ಷಣವೇ ತಾವು ಗೌತಮಿ ಜಾದವ್ ಅವರ ಮುಖವಾಡ ಕಳಚೋದಾಗಿ ಸವಾಲು ಹಾಕಿದ್ದರು. ಆದರೆ ಅದಾಗಿ ಎರಡು ವಾರದಲ್ಲೇ ನಟಿ ಮನೆಯಿಂದ ಹೊರ ಬಂದಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಸಿಂಧೋಗಿ (Aishwarya Sindhogi)ಹೊರ ಹೋಗೋದು ಎಂದೇ ಜನ ಅಂದುಕೊಂಡಿದ್ದರು. ಮೊದಲು ಶೋಭಾ ಅವರು ಸೇಫ್ ಆದಾಗ ತಾನು ಮುಂದೆ ಆಡುವುದಾಗಿ ಭರವಸೆ ಕೊಟ್ಟಿದ್ದರು ಶೊಭಾ. ಆದರೆ ಕೊನೆಯ ಹಂತದಲ್ಲಿ ನನ್ನನ್ನು ಹೊರಗೆ ಕಳುಹಿಸಿ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದರು. ಕೊನೆಗೆ ಆಕೆಯನ್ನು ಎಲಿಮಿನೇಟ್ ಕೂಡ ಮಾಡಲಾಗಿತ್ತು.
ಮನೆಯಿಂದ ಹೊರ ಬಂದ ನಂತರ ಶೋಭಾ ಶೆಟ್ಟಿ ಸೋಶಿಯಲ್ (Shobha Shetty)ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ, ತಮ್ಮ ಆರೋಗ್ಯದ ಬಗ್ಗೆ ತಿಳಿಸಿದ್ದರು. ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ ಎಂದಿದ್ದರು.
ಅಷ್ಟೇ ಅಲ್ಲ ನಾನು ಯಾರನ್ನೂ ಯಾವುದನ್ನೂ ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ! ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ, ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡಿದ್ದರು.
ಇದೀಗ ಶೋಭಾ ಶೆಟ್ಟಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ತಾವು ಆಸ್ಪತ್ರೆಯ ಬೆಡ್ ಮೇಲೆ ಇರುವಂತೆ ಸ್ಟೋರಿ ಹಾಕಿಕೊಂಡಿದ್ದು, ಕೈಗೆ ಗ್ಲುಕೋಸ್ ಹಾಕಲಾಗಿದೆ. ದೊಡ್ಮನೆಯಿಂದ ಹೊರ ಬರುತ್ತಿದ್ದಂತೆಯೇ ಆಸ್ಪತ್ರೆಯಲ್ಲಿ ದಾಖಲಾಗಿರುವ ಶೋಭಾ ಶೆಟ್ಟಿ, ಅದರ ಜೊತೆಗೆ ತಮ್ಮ ಅಭಿಮಾನಿಗಳಿಗೆ ಮೆಸೇಜ್ ಕೂಡ ತಿಳಿಸಿದ್ದಾರೆ.
ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ನಿಮ್ಮ ಪ್ರೀತಿಗಾಗಿ ತುಂಬಾ ಧನ್ಯವಾದಗಳು ಎಂದು ಶೋಭಾ ಶೆಟ್ಟಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದಾರೆ. ಮತ್ತೊಂದು ಪೋಸ್ಟ್ ಇವತ್ತು ಹಾಕಿಕೊಂಡಿದ್ದು, ಅದರಲ್ಲಿ ಶೋಭಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋದಂತಿದೆ. ನಟಿ ರಾಘವೇಂದ್ರ ಸ್ವಾಮಿಯ ಫೋಟೊಗೆ ಪೂಜೆ ಮಾಡುತ್ತಿರುವ ಫೋಟೊ ಹಂಚಿಕೊಂಡು ಪಾಸಿಟಿವ್ ಮಾತ್ರ ಎಂದು ಬರೆದುಕೊಂಡಿದ್ದಾರೆ.
ನಟಿ ಶೋಭಾ ಶೆಟ್ಟಿ ಕನ್ನಡದಲ್ಲಿ ಅಗ್ನಿ ಸಾಕ್ಷಿ (Agni sakshi Serial)ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟವರು, ನಂತ್ರ ತೆಲುಗಿನ ಕಡೆಗೆ ಮುಖ ಮಾಡಿ, ಅಲ್ಲಿಯೇ ಮಿಂಚಿದವರು. ಕಳೆದ ಬಾರಿ ತೆಲುಗು ಬಿಗ್ ಬಾಸ್ ನಲ್ಲಿ ತಮ್ಮ ಮಾತಿನ ಮೂಲಕವೇ ಎದುರಾಳಿಗಳಿಗೆ ಚಾಟಿ ಏಟು ಕೊಟ್ಟಿದ್ದ ನಟಿಯನ್ನು, ಅದಕ್ಕಾಗಿಯೇ ಕನ್ನಡ ಬಿಗ್ ಬಾಸ್ ಮನೆಗೂ ಆಹ್ವಾನಿಸಲಾಗಿತ್ತು. ಆದರೆ ಇಲ್ಲಿ ಶೋಭಾ, ಮಾತು, ಆಟ ಯಾವುದೂ ಅಷ್ಟೊಂದು ಸದ್ದು ಮಾಡಲೇ ಇಲ್ಲ.