ಬೆಂಗಳೂರು (ಡಿ.20): ಸಮಾಜ ಘಾತುಕ ಶಕ್ತಿಗಳು ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (PSI) ನಾಗರಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
26
ರೌಡಿಯೊಂದಿಗೆ ಬರ್ತಡೇ ಪಾರ್ಟಿ
ಇತ್ತೀಚೆಗೆ ಪಿಎಸ್‌ಐ ನಾಗರಾಜ್ ಅವರು ಕ್ರಿಮಿನಲ್ ಹಿನ್ನೆಲೆಯುಳ್ಳ 'ದಾಸ' ಎಂಬ ವ್ಯಕ್ತಿಯ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಕೇಕ್ ಕತ್ತರಿಸಿ, ಸನ್ಮಾನ ಸ್ವೀಕರಿಸಿದ್ದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದವು.
36
ಭೂ ಹಗರಣ, ಜೀವ ಬೆದರಿಕೆ ಆರೋಪಿ
ಈ ದಾಸ ಎಂಬಾತನ ಮೇಲೆ ರಾಜಾನುಕುಂಟೆ, ಚಿಕ್ಕಜಾಲ ಮತ್ತು ಯಲಹಂಕ ನ್ಯೂಟೌನ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಭೂಹಗರಣ (Land Grabbing), ಹಲ್ಲೆ ಮತ್ತು ಜೀವ ಬೆದರಿಕೆಯಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ.
ಈ ವಿಚಾರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್ ಅವರು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ತನಿಖಾ ವರದಿಯಲ್ಲಿ ಪಿಎಸ್‌ಐ ನಾಗರಾಜ್ ಅವರು ಭೂಮಾಫಿಯಾ ಮತ್ತು ರೌಡಿ ಚಟುವಟಿಕೆಗಳಲ್ಲಿ ತೊಡಗಿರುವವರೊಂದಿಗೆ ಅನಗತ್ಯ ಸ್ನೇಹ ಮತ್ತು ಸಂಪರ್ಕ ಹೊಂದಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
56
ಇಲಾಖೆಯ ಶಿಸ್ತಿಗೆ ಧಕ್ಕೆ
ಪೊಲೀಸ್ ಅಧಿಕಾರಿಗಳು ಇಂತಹ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡರೆ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ. ಜನರು ಮುಕ್ತವಾಗಿ ಮತ್ತು ನಂಬಿಕೆಯಿಂದ ಪೊಲೀಸ್ ಠಾಣೆಗೆ ಬರಲು ಸಾಧ್ಯವಾಗುವುದಿಲ್ಲ. ಇದು ಇಲಾಖೆಯ ಶಿಸ್ತಿಗೆ ವಿರೋಧವಾದ ನಡವಳಿಕೆಯಾಗಿದೆ' ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
66
ಮಾಜ ಘಾತುಕ ಶಕ್ತಿಗಳೊಂದಿಗೆ ಸ್ನೇಹವಿದ್ದರೆ ಕಠಿಣ ಕ್ರಮ
ಈ ಮೂಲಕ ಬೆಂಗಳೂರು ಪೊಲೀಸ್ ಆಯುಕ್ತರು ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇನ್ಮುಂದೆ ಯಾವುದೇ ಪೊಲೀಸ್ ಅಧಿಕಾರಿ ಸಮಾಜ ಘಾತುಕ ಶಕ್ತಿಗಳೊಂದಿಗೆ ಸ್ನೇಹ, ಪಾರ್ಟಿ ಅಥವಾ ವ್ಯವಹಾರ ಸಂಬಂಧ ಇಟ್ಟುಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ