ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ, ಆರ್ಥಿಕ ಸಂಕಷ್ಟದಲ್ಲಿರುವ ಪವಿತ್ರಾ ಗೌಡ ಅವರು ದರ್ಶನ್ ಭೇಟಿಗಾಗಿ ಹರಸಾಹಸ ಪಡುತ್ತಿದ್ದಾರೆ. ಆದರೆ, ಪವಿತ್ರಾ ಮೇಲೆಯೇ ದರ್ಶನ್ ಕೆಂಡಾಮಂಡಲವಾಗಿದ್ದಾರೆ.
ಬೆಂಗಳೂರು (ಡಿ.19): ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆ (Trial) ನ್ಯಾಯಾಲಯದಲ್ಲಿ ಅಧಿಕೃತವಾಗಿ ಆರಂಭವಾಗುತ್ತಿದ್ದಂತೆ, ಪರಪ್ಪನ ಅಗ್ರಹಾರ ಮತ್ತು ಬಳ್ಳಾರಿ ಜೈಲಿನಲ್ಲಿರುವ ಆರೋಪಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಈ ಪೈಕಿ ಎ-1 ಆರೋಪಿ ಪವಿತ್ರಾ ಗೌಡಗೆ ಸಂಕಷ್ಟಗಳು ಹೆಚ್ಚಾಗಿದ್ದು, ಆರ್ಥಿಕ ನೆರವಿಗಾಗಿ ನಟ ದರ್ಶನ್ ಭೇಟಿಗೆ ಅವರು ನಡೆಸುತ್ತಿರುವ ಸರ್ವ ಪ್ರಯತ್ನಗಳೂ ವಿಫಲವಾಗುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
26
ಬೆದರಿದ ಪವಿತ್ರಾ ಗೌಡ
ಈ ಪ್ರಕರಣದ ವಿಚಾರಣೆ ಆರಂಭವಾಗಿರುವುದರಿಂದ ಸಾಕ್ಷ್ಯಗಳ ಮುಂದೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವುದು ಪವಿತ್ರಾ ಗೌಡಗೆ ಸವಾಲಾಗಿದೆ. ಅಷ್ಟೇ ಅಲ್ಲದೆ, ಜೈಲು ಪಾಲಾದ ನಂತರ ಪವಿತ್ರಾಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕಾನೂನು ಹೋರಾಟ ನಡೆಸಲು ಹಣದ ಅಗತ್ಯವಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜೈಲಿಗೆ ಭೇಟಿ ನೀಡಿದ್ದ ಡಿಜಿಪಿ (ಕಾರಾಗೃಹ) ಅಲೋಕ್ ಕುಮಾರ್ ಅವರ ಬಳಿ ಪವಿತ್ರಾ ಗೌಡ ದರ್ಶನ್ ಭೇಟಿಗೆ ಅವಕಾಶ ಕಲ್ಪಿಸಿಕೊಡುವಂತೆ ಕಣ್ಣೀರು ಹಾಕಿದ್ದಾರೆ.
36
ಪ್ಲೀಸ್ ಸರ್ ಒಮ್ಮೆ ದರ್ಶನ್ ಭೇಟಿ ಮಾಡಿಸಿ
ಡಿಜಿಪಿ ಅಲೋಕ್ ಕುಮಾರ್ ಅವರು ಜೈಲು ಭೇಟಿಗೆ ಆಗಮಿಸಿದಾಗ ಸೆಲ್‌ನಲ್ಲಿದ್ದ ಪವಿತ್ರಾ ಗೌಡ ಅವರು, 'ಪ್ಲೀಸ್ ಸಾರ್, ಟ್ರಯಲ್ ಶುರುವಾಗಿದೆ, ಒಮ್ಮೆ ದರ್ಶನ್ ಭೇಟಿ ಮಾಡಿಸಿ, ನನ್ನ ಕಷ್ಟ ಹೇಳಿಕೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಅಲೋಕ್ ಕುಮಾರ್ ಕಾನೂನಿನ ಚೌಕಟ್ಟಿನಲ್ಲಿ ಅವಕಾಶವಿದೆಯೇ ಎಂದು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಪವಿತ್ರಾ ಗೌಡ ಜೈಲಿನ ಸಿಬ್ಬಂದಿಗಳ ಮೂಲಕ ದರ್ಶನ್‌ಗೆ ಹಲವು ಸಂದೇಶಗಳನ್ನು ರವಾನಿಸಿದ್ದಾರೆ. 'ಕಾನೂನು ಹೋರಾಟಕ್ಕೆ 20 ಲಕ್ಷ ರೂಪಾಯಿ ಹಣದ ಸಹಾಯ ಬೇಕು' ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ.
56
ಪವಿತ್ರಾ ಮೇಲೆ ದರ್ಶನ್ ಕೆಂಡಾಮಂಡಲ
ಆದರೆ, ಇದಕ್ಕೆ ದರ್ಶನ್ ಮಾತ್ರ ಪವಿತ್ರಾ ಗೌಡ ಮೇಲೆ ಕೆಂಡಾಮಂಡಲವಾಗಿದ್ದಾರೆ. 'ನಿನ್ನಿಂದಲೇ ನಾನು ಇಂದು ಈ ಪರಿಸ್ಥಿತಿಗೆ ಬಂದಿದ್ದೇನೆ' ಎಂಬ ಆಕ್ರೋಶ ಹೊರಹಾಕಿರುವ ದರ್ಶನ್, ಯಾವುದೇ ಕಾರಣಕ್ಕೂ ಪವಿತ್ರಾರನ್ನು ಭೇಟಿಯಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ ಎನ್ನಲಾಗಿದೆ.
66
ಒಂದೂವರೆ ದಶಕದ ಸ್ನೇಹ ತುಂಡಾಗುವ ಆತಂಕ
ತನ್ನನ್ನು ಭೇಟಿ ಮಾಡಲು ಬರುವ ಆಪ್ತರ ಬಳಿಯೂ ದರ್ಶನ್ ಕೇವಲ ಕಾನೂನು ಹೋರಾಟದ ಬಗ್ಗೆ ಮಾತ್ರ ಚರ್ಚಿಸುತ್ತಿದ್ದು, ಪವಿತ್ರಾ ವಿಚಾರ ಬಂದಾಗ ಮೌನವಾಗುತ್ತಿದ್ದಾರೆ ಅಥವಾ ಸಿಡಿಮಿಡಿಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಒಂದೂವರೆ ದಶಕಗಳ ಸ್ನೇಹ ಈಗ ಕೊಲೆ ಪ್ರಕರಣದ ತನಿಖೆಯ ಹಂತದಲ್ಲಿ ಜೈಲಿನ ಗೋಡೆಗಳ ನಡುವೆ ಕಮರಿಹೋಗುವ ಹಂತಕ್ಕೆ ತಲುಪಿದೆ.