ಹೊಸ ವರ್ಷ 2026ಕ್ಕೆ ಕೆಲವೇ ದಿನ, 2025ರಲ್ಲಿ ದೇಶಮಟ್ಟದಲ್ಲಿ ಸುದ್ದಿಯಾದ ಬೆಂಗಳೂರಿನ ಅಪರಾಧ ಲೋಕದ ಕರಾಳ ಅಧ್ಯಾಯಗಳಿವು!

Published : Dec 14, 2025, 01:51 PM IST

2025ನೇ ವರ್ಷದಲ್ಲಿ ಬೆಂಗಳೂರು ಹಲವು ಗಂಭೀರ ಅಪರಾಧ ಪ್ರಕರಣಗಳಿಗೆ ಸಾಕ್ಷಿಯಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ, ರೇಣುಕಾಸ್ವಾಮಿ ಹತ್ಯೆ ಪ್ರಕರಣ, ಸಚಿವರ ಹನಿಟ್ರ್ಯಾಪ್ ಯತ್ನದಂತಹ ಘಟನೆಗಳು ರಾಜ್ಯವನ್ನೇ ಬೆಚ್ಚಿಬೀಳಿಸಿ, ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದವು.

PREV
19
2025ರಲ್ಲಿ ಬೆಂಗಳೂರಿನಲ್ಲಿ ವರದಿಯಾದ ಪ್ರಮುಖ ಅಪರಾಧ ಪ್ರಕರಣಗಳು

ಬೆಂಗಳೂರು: 2025ನೇ ವರ್ಷ ಅಂತ್ಯದತ್ತ ಸಾಗುತ್ತಿರುವ ಸಂದರ್ಭದಲ್ಲಿ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರದಿಯಾದ ಹಲವು ಪ್ರಮುಖ ಅಪರಾಧ ಪ್ರಕರಣಗಳು ಜನರ ಗಮನ ಸೆಳೆದಿವೆ. ಈ ಪೈಕಿ ಕೆಲವು ಪ್ರಕರಣಗಳು ತೀವ್ರ ಕುತೂಹಲ, ವ್ಯಾಪಕ ಚರ್ಚೆ ಮತ್ತು ರಾಜಕೀಯ–ಸಾಮಾಜಿಕ ವಲಯಗಳಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದವು. ಕಾನೂನು ಸುವ್ಯವಸ್ಥೆ, ಪೊಲೀಸ್ ವ್ಯವಸ್ಥೆ ಹಾಗೂ ಆಡಳಿತದ ಮೇಲೂ ಈ ಪ್ರಕರಣಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು.

29
ಜೂನ್ 4: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭೀಕರ ಕಾಲ್ತುಳಿತ

ಬೆಂಗಳೂರು ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4ರಂದು ಸಂಭವಿಸಿದ ಕಾಲ್ತುಳಿತ ರಾಜ್ಯವನ್ನೇ ಬೆಚ್ಚಿಬೀಳಿಸಿತು. ವಿಜಯೋತ್ಸವ ಹಾಗೂ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಉಂಟಾದ ಗೊಂದಲದಿಂದ 13 ಮಂದಿ ಮೃತಪಟ್ಟರು. ಈ ದುರ್ಘಟನೆಯ ಬಳಿಕ ಕಾರ್ಯಕ್ರಮವನ್ನು ತಕ್ಷಣವೇ ಮೊಟಕು ಮಾಡಲಾಗಿದ್ದು, ಗೆಲುವಿನ ಸಂಭ್ರಮಾಚರಣೆ ಮತ್ತು ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಲಾಯಿತು.

ಈ ಘಟನೆ ಕ್ರೀಡಾ ವಲಯದಲ್ಲೂ ಭಾರೀ ಚರ್ಚೆಗೆ ಕಾರಣವಾಯಿತು. ಕರ್ತವ್ಯ ಲೋಪದ ಆರೋಪದಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಕ್ರೀಡಾಂಗಣದ ಉಸ್ತುವಾರಿ ವಹಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಶ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್. ತೆಕ್ಕಣ್ಣವರ್, ಸಹಾಯಕ ಪೊಲೀಸ್ ಆಯುಕ್ತ ಸಿ. ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ.ಕೆ. ಗಿರೀಶ್ ಅವರನ್ನು ಅಮಾನತು ಮಾಡಲಾಯಿತು.

39
ಏಪ್ರಿಲ್ 20: ಪತ್ನಿಯಿಂದಲೇ ನಿವೃತ್ತ ಪೊಲೀಸ್ ಮಹಾನಿರ್ದೇಶಕರ ಹತ್ಯೆ

ಕುಟುಂಬ ಕಲಹದ ಹಿನ್ನೆಲೆಯಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರ ಬರ್ಬರ ಹತ್ಯೆ ಬೆಂಗಳೂರು ನಗರವನ್ನೇ ಬೆಚ್ಚಿಬೀಳಿಸಿತು. ಪತ್ನಿ ಪಲ್ಲವಿಯೇ ಓಂಪ್ರಕಾಶ್ ಅವರನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಪ್ರಕರಣವು ಸಮಾಜದಲ್ಲಿ ತೀವ್ರ ಆಘಾತ ಉಂಟುಮಾಡಿತು. ಪ್ರಕರಣ ಸಂಬಂಧ ಎಚ್ಎಸ್ಆರ್ ಲೇಔಟ್ ಪೊಲೀಸರು ಪಲ್ಲವಿಯನ್ನು ಬಂಧಿಸಿ ತನಿಖೆ ಕೈಗೊಂಡರು.

49
ನವೆಂಬರ್ 19: ಕಸ್ಟೋಡಿಯನ್ ವಾಹನದಿಂದ 7.11 ಕೋಟಿ ರೂ. ದರೋಡೆ

ಎಟಿಎಂಗೆ ಹಣ ತುಂಬಿಸಲು ಸಾಗಿಸಲಾಗುತ್ತಿದ್ದ 7.11 ಕೋಟಿ ರೂಪಾಯಿ ಹಣವನ್ನು ಹಾಡಹಗಲೇ ಸಿನಿಮೀಯ ಶೈಲಿಯಲ್ಲಿ ದೋಚಿದ ಪ್ರಕರಣ ನಗರದಲ್ಲಿ ಆತಂಕ ಮೂಡಿಸಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳ ಸೋಗಿನಲ್ಲಿ ಬಂದ ಖದೀಮರು ಈ ದರೋಡೆ ನಡೆಸಿದ್ದರು. ಪ್ರಕರಣದಲ್ಲಿ ಮಾಜಿ ಉದ್ಯೋಗಿ ಕ್ಸೇವಿಯರ್, ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಸೇರಿದಂತೆ ನವೀನ್, ನೆಲ್ಸನ್, ರವಿ, ದಿನೇಶ್ ಮತ್ತು ಜಿನೇಶ್ ಬಂಧನಕ್ಕೊಳಗಾದರು. ತನಿಖೆ ವೇಳೆ ಒಟ್ಟು 6.29 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿತ್ತು.

59
ಮಾರ್ಚ್ 3: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ

ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿಕೊಂಡು ಬಂದ ಆರೋಪದಡಿ ಬಂಧನಕ್ಕೊಳಗಾದ ಪ್ರಕರಣವೂ ಭಾರೀ ಚರ್ಚೆಗೆ ಕಾರಣವಾಯಿತು. ಎಮಿರೇಟ್ಸ್ ಏರ್‌ಲೈನ್ಸ್ ಮೂಲಕ ದುಬೈನಿಂದ ಬೆಂಗಳೂರಿಗೆ ಬಂದಿಳಿದಿದ್ದ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು 14.8 ಕೆಜಿ ಚಿನ್ನದೊಂದಿಗೆ ಬಂಧಿಸಿದ್ದರು. ಈ ಪ್ರಕರಣದಲ್ಲಿ ನಟ ತರುಣ್ ಕೆ. ರಾಜು ಹಾಗೂ ಚಿನ್ನದ ವ್ಯಾಪಾರಿಗಳಾದ ಸಾಹುಲ್ ಸಕಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ಅವರನ್ನು ಕೂಡ ಬಂಧಿಸಲಾಗಿತ್ತು.

69
ಮಾರ್ಚ್ 25: ಸಚಿವರ ಹನಿಟ್ರ್ಯಾಪ್ ಯತ್ನದ ಆರೋಪ

ಸಹಕಾರ ಸಚಿವ ಕೆ.ಎನ್. ರಾಜಣ್ಣ ತಮ್ಮನ್ನು ಹನಿಟ್ರ್ಯಾಪ್‌ಗೆ ಬೀಳಿಸಲು ಯತ್ನ ನಡೆದಿದೆ ಎಂದು ಆರೋಪಿಸಿದ್ದು, ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತು. ಈ ಕುರಿತು ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಗಮನಿಸಿದ ಸರ್ಕಾರ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಿತು. ಆದರೆ ತನಿಖೆ ನಡೆಸಿದ ಸಿಐಡಿ ಪೊಲೀಸರು ಸಚಿವರ ಆರೋಪಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲವೆಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಇದಾದ ಬಳಿಕ ಮಾರ್ಚ್ 27ರಂದು ಸಚಿವ ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಿ, ತಮ್ಮನ್ನು ಸುಪಾರಿ ಹತ್ಯೆ ಮಾಡಲು ಯತ್ನ ನಡೆದಿತ್ತು ಎಂದು ಮತ್ತೊಂದು ದೂರು ಸಲ್ಲಿಸಿದ್ದು, ಪ್ರಕರಣ ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು.

79
ಆಗಸ್ಟ್ 14: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ಜಾಮೀನು ರದ್ದು

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಇದು ಲ್ಯಾಂಡ್‌ಮಾರ್ಕ್ ತೀರ್ಪಾಗಿ ಹೊರಹೊಮ್ಮಿತು. 2024ರ ಡಿಸೆಂಬರ್ 13ರಂದು ಹೈಕೋರ್ಟ್ ಆರೋಪಿಗಳಿಗೆ ಜಾಮೀನು ನೀಡಿದ್ದರೂ, ಆ ಆದೇಶದಲ್ಲಿ ದೋಷವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

“ಆರೋಪಿ ಎಷ್ಟೇ ಪ್ರಭಾವಿಯಾಗಿದ್ದರೂ ಅವರು ಕಾನೂನಿಗಿಂತ ದೊಡ್ಡವರಲ್ಲ” ಎಂದು ಕೋರ್ಟ್ ಕಠಿಣವಾಗಿ ಹೇಳಿತು. ಜೈಲಿನಲ್ಲಿ ಆರೋಪಿಗಳಿಗೆ 5 ಸ್ಟಾರ್ ಆತಿಥ್ಯ ನೀಡಲಾಗಿದೆ ಎಂಬ ಆರೋಪವೂ ಈ ವೇಳೆ ಪ್ರಸ್ತಾಪವಾಗಿದ್ದು, ಜೈಲು ಸೂಪರಿಂಟೆಂಡೆಂಟ್‌ನ್ನು ಅಮಾನತು ಮಾಡಬೇಕಿತ್ತು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಜಾಮೀನು ರದ್ದಾದ ಬಳಿಕ ಆರೋಪಿಗಳಾದ ಪವಿತ್ರಾ ಗೌಡ, ನಟ ದರ್ಶನ್ ತೂಗುದೀಪ, ಪ್ರದೋಶ್, ಲಕ್ಷ್ಮಣ್ ಹಾಗೂ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿದರು.

89
ನವೆಂಬರ್ 8: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ಪ್ರಕರಣ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲ ಕೈದಿಗಳು ಮೊಬೈಲ್ ಬಳಸುತ್ತಿರುವ ದೃಶ್ಯಗಳು ಬಹಿರಂಗವಾಗಿ ರಾಜ್ಯವನ್ನೇ ಬೆಚ್ಚಿಬೀಳಿಸಿತು. ಐಸಿಸ್ ಉಗ್ರ ಜುಹಾಬ್ ಹಮೀದ್ ಶಕೀಲ್ ಮನ್ನ, ಸರಣಿ ಹಂತಕ ಉಮೇಶ್ ರೆಡ್ಡಿ ಹಾಗೂ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ತರುಣ್ ಕೆ. ರಾಜು ಸೆಲ್‌ನಲ್ಲೇ ಮೊಬೈಲ್ ಬಳಸುತ್ತಿರುವ ವೀಡಿಯೋಗಳು ವೈರಲ್ ಆಗಿದ್ದವು.

ಮೊಬೈಲ್, ಟಿವಿ ವ್ಯವಸ್ಥೆ ಸೇರಿದಂತೆ ವಿಶೇಷ ಸೌಲಭ್ಯಗಳು ಲಭ್ಯವಾಗುತ್ತಿದ್ದ ಹಿನ್ನೆಲೆಯಲ್ಲಿ ಕಾರಾಗೃಹದ ಅಧೀಕ್ಷಕ ಮ್ಯಾಗೇರಿ ಹಾಗೂ ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿ ಅವರನ್ನು ಅಮಾನತು ಮಾಡಲಾಯಿತು. ಜೊತೆಗೆ ರಾಜ್ಯ ಸರ್ಕಾರ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ. ಸುರೇಶ್ ಅವರನ್ನು ವರ್ಗಾವಣೆಗೊಳಿಸಿತು.

99
ಜುಲೈ 15: ರೌಡಿಶೀಟರ್ ಬಿಕ್ಲು ಶಿವ ಹತ್ಯೆ – ಶಾಸಕರ ವಿಚಾರಣೆ

ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ನಡೆದ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಹತ್ಯೆ ಪ್ರಕರಣದಲ್ಲಿ ಶಾಸಕರ ಹೆಸರು ಕೇಳಿಬಂದಿದ್ದು, ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿತು. ಮಾಜಿ ಸಚಿವ ಬೈರತಿ ಬಸವರಾಜ್ ಅವರ ಹೆಸರು ಪ್ರಕರಣದಲ್ಲಿ ಪ್ರಸ್ತಾಪವಾಗಿದ್ದು, ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಗದೀಶ್, ಕಿರಣ್, ವಿಮಲ್, ಅನಿಲ್ ಹಾಗೂ ಬೈರತಿ ಬಸವರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Read more Photos on
click me!

Recommended Stories