ಹೆಣ್ಣು ಸಿಗುತ್ತಿಲ್ಲವೆಂಬ ಬೇಸರದಿಂದ ಮಂಡ್ಯದ ರೈತರ ಮಕ್ಕಳು ಹಣೆಗೆ ಬಾಸಿಂಗ ಧರಿಸಿ, ತಲೆಗೆ ಪೇಟ ಹಾಕಿಕೊಂಡು, ತಾಂಬೂಲ ಸಮೇತವಾಗಿ ಜಿಲ್ಲಾಧಿಕಾರಿ ಕಚೇರಿಗೆ ಹೆಣ್ಣು ಕೇಳಲು ಬಂದಿದ್ದಾರೆ. ರೈತರ ಮದುವೆಯಾಗುವ ಹೆಣ್ಣು ಮಕ್ಕಳಿಗೆ ₹5 ಲಕ್ಷ ಸಹಾಯಧನ ನೀಡಲು ಮನವಿ ಮಾಡಿದ್ದಾರೆ.
ಮಂಡ್ಯ (ಡಿ.12): ರಾಜ್ಯದ ಪ್ರಮುಖ ಕೃಷಿ ಜಿಲ್ಲೆಯಾದ ಮಂಡ್ಯದಲ್ಲಿ, ರೈತರ ಮಕ್ಕಳಿಗೆ ವಿವಾಹವಾಗಲು ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ. ಹೀಗಾಗಿ, ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ₹ 5 ಲಕ್ಷ ಪ್ರೋತ್ಸಾಹಧನ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
25
ಸಾವಿರಾರು ಯುವಕರಿಗೆ ಮದುವೆಯ ಭಾಗ್ಯವಿಲ್ಲ
ಮಂಡ್ಯ ಜಿಲ್ಲೆಯಲ್ಲಿ ಕೃಷಿಯನ್ನೇ ನಂಬಿರುವ ಸಾವಿರಾರು ಯುವಕರು ಮದುವೆಯಾಗದೆ ಉಳಿದಿದ್ದಾರೆ ಎಂದು ಹೋರಾಟಗಾರರು ದೂರಿದ್ದಾರೆ. ಪ್ರಸ್ತುತ ದಿನಗಳಲ್ಲಿ ರೈತರ ಮಕ್ಕಳನ್ನು ಮದುವೆಯಾಗಲು ಪೋಷಕರು ಮತ್ತು ಯುವತಿಯರು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಭಾಗದ ಆರ್ಥಿಕ ಪರಿಸ್ಥಿತಿ ಮತ್ತು ಕೃಷಿಯಲ್ಲಿನ ಅನಿಶ್ಚಿತತೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಕಂಕಣ ಭಾಗ್ಯವಿಲ್ಲದೇ ಯುವ ರೈತರು ಪರಿತಪಿಸುತ್ತಿರುವ ಈ ಸಮಸ್ಯೆಯನ್ನು ಪರಿಹರಿಸುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
35
ಬಾಸಿಂಗ ಕಟ್ಟಿ, ಪೇಟ ಧರಿಸಿ ಅಣುಕು ಪ್ರದರ್ಶನ:
ರೈತ ಯುವಕರ ಈ ಸಮಸ್ಯೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ವಿನೂತನ ರೀತಿಯಲ್ಲಿ ಹೋರಾಟ ನಡೆಸಿದರು. ಕಾರ್ಯಕರ್ತರು ವರನಂತೆ ಹಣೆಗೆ ಬಾಸಿಂಗ ಕಟ್ಟಿಕೊಂಡು, ತಲೆಗೆ ಮೈಸೂರು ಪೇಟ ಧರಿಸಿಕೊಂಡು ಅಣಕು ಪ್ರದರ್ಶನ ಮಾಡಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಹೋರಾಟಗಾರರು ರೈತರ ಮಕ್ಕಳ ವಿವಾಹಕ್ಕೆ ಪ್ರೋತ್ಸಾಹ ನೀಡಲು 'ಶಾದಿ ಭಾಗ್ಯ' ಮಾದರಿಯಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ರೈತರನ್ನು ಮದುವೆಯಾಗಲು ಮುಂದೆ ಬರುವ ಯುವತಿಯರಿಗೆ ಪ್ರೋತ್ಸಾಹದ ರೂಪದಲ್ಲಿ ₹ 5 ಲಕ್ಷ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು. ಇಂತಹ ಯೋಜನೆಯಿಂದ ರೈತ ಕುಟುಂಬಗಳಿಗೆ ಸಾಮಾಜಿಕ ಗೌರವ ಮತ್ತು ಭದ್ರತೆ ದೊರೆತು, ಮದುವೆಯ ಸಮಸ್ಯೆ ನೀಗುತ್ತದೆ ಎಂದು ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
55
ರೈತರ ಸಾಮಾಜಿಕ ಸಮಸ್ಯೆ
ಈ ವಿನೂತನ ಪ್ರತಿಭಟನೆಯು ಜಿಲ್ಲೆಯಲ್ಲಿ ರೈತ ಯುವಕರ ವಿವಾಹದ ಸಮಸ್ಯೆಯ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಸರ್ಕಾರವು ರೈತರ ಸಾಮಾಜಿಕ ಸಮಸ್ಯೆಯನ್ನು ಅರಿತು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಕೋರಲಾಗಿದೆ.