ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪಟ್ಟಿಯಲ್ಲಿ ಬದಲಾವಣೆ? ಸಿಎಂಗೆ ಪತ್ರ ಬರೆದ ಗ್ಯಾರಂಟಿ ಉಪಾಧ್ಯಕ್ಷ ಗೂಳಿಗೌಡ!

Published : Jun 15, 2026, 07:39 PM IST

ರಾಜ್ಯ ಗ್ಯಾರಂಟಿ ಪರಿಷ್ಕರಣೆ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಪಂಚ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಪತ್ರ ಬರೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಸತ್ತವರ ಖಾತೆಗೂ ಹಣ ಜಮೆಯಾಗುತ್ತಿರುವುದು ಮತ್ತು ಐಟಿ ಪಾವತಿದಾರರು ಲಾಭ ಪಡೆಯುತ್ತಿರುವಂತಹ ಗಂಭೀರ ಲೋಪಗಳನ್ನು ಬಹಿರಂಗಪಡಿಸಿದ್ದಾರೆ.

PREV
16
ಪಂಚ ಗ್ಯಾರಂಟಿಗಳ ಪರಿಷ್ಕರಣೆಗೆ ಪತ್ರ

ಬೆಂಗಳೂರು (ಜೂ.15): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಹಣಕಾಸಿನ ಹೊರೆಯ ನಡುವೆಯೇ, ಈ ಯೋಜನೆಗಳ ಪರಿಷ್ಕರಣೆ ಕುರಿತು ರಾಜ್ಯ ಗ್ಯಾರಂಟಿ ಪರಿಷ್ಕರಣೆ ಸಮಿತಿ ಉಪಾಧ್ಯಕ್ಷ ಹಾಗೂ ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ ವೆಚ್ಚವಾಗಿರುವ ಬೃಹತ್ ಮೊತ್ತದ ಅಂಕಿಅಂಶಗಳನ್ನು ನೀಡುವ ಜೊತೆಗೆ, ಕೆಲವು ಗಂಭೀರ ಲೋಪದೋಷಗಳನ್ನು ಸರಿಪಡಿಸಲು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

26
1.38 ಲಕ್ಷ ಕೋಟಿ ದಾಟಿದ ಗ್ಯಾರಂಟಿ ವೆಚ್ಚ:

ದಿನೇಶ್ ಗೂಳಿಗೌಡ ಅವರು ನೀಡಿದ ಮಾಹಿತಿಯಂತೆ, ಐದು ಗ್ಯಾರಂಟಿ ಯೋಜನೆಗಳಿಗಾಗಿ ಕರ್ನಾಟಕ ಸರ್ಕಾರ ಈವರೆಗೂ ಒಟ್ಟು 1,38,270.21 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿದೆ.

36
ಇದರ ವಿವರ ಹೀಗಿದೆ:

ಗೃಹಲಕ್ಷ್ಮಿ: 1.24 ಕೋಟಿ ಫಲಾನುಭವಿಗಳಿಗೆ ಈವರೆಗೆ ಒಟ್ಟು 72,253 ಕೋಟಿ ರೂ. ಸಂದಾಯವಾಗಿದೆ.

ಗೃಹಜ್ಯೋತಿ: 1.64 ಕೋಟಿ ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡಲಾಗಿದ್ದು, ಏಪ್ರಿಲ್ 2026ರ ಅಂತ್ಯಕ್ಕೆ ಇದರ ಮೌಲ್ಯ 26,115 ಕೋಟಿ ರೂ. ಆಗಲಿದೆ.

ಅನ್ನಭಾಗ್ಯ: ಈವರೆಗೆ ಒಟ್ಟು 18,897 ಕೋಟಿ ರೂ. ಪಾವತಿಸಲಾಗಿದೆ.

ಶಕ್ತಿ ಯೋಜನೆ: ಮಹಿಳೆಯರ ಉಚಿತ ಪ್ರಯಾಣಕ್ಕಾಗಿ 19,890 ಕೋಟಿ ರೂ. ಮೌಲ್ಯದ ಟಿಕೆಟ್ ನೀಡಲಾಗಿದೆ.

ಯುವನಿಧಿ: ನಿರುದ್ಯೋಗಿ ಪದವೀಧರರಿಗೆ 1,115 ಕೋಟಿ ರೂ. ಸಂದಾಯವಾಗಿದೆ.

46
ಸತ್ತವರ ಖಾತೆಗೂ ಹೋಗುತ್ತಿದೆ ಹಣ!

ಪತ್ರದಲ್ಲಿ ದಿನೇಶ್ ಗೂಳಿಗೌಡ ಅವರು ಅತ್ಯಂತ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಮಾರ್ಚ್ 2026ರ ಅಂಕಿಅಂಶಗಳ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ಮರಣ ಹೊಂದಿರುವ 1,95,224 ಫಲಾನುಭವಿಗಳ ಖಾತೆಗೆ ತಲಾ 2,000 ರೂ.ಗಳಂತೆ ಹಣ ಜಮೆಯಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು 39.05 ಕೋಟಿ ರೂ. ಹಾಗೂ ವಾರ್ಷಿಕವಾಗಿ 468.54 ಕೋಟಿ ರೂ. ನಷ್ಟವಾಗುತ್ತಿದೆ. ಇದನ್ನು ತಡೆಯಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

56
ಐಟಿ ಪಾವತಿದಾರರಿಗೂ ಗೃಹಲಕ್ಷ್ಮಿ ಭಾಗ್ಯ?

ಮತ್ತೊಂದು ಪ್ರಮುಖ ಅಂಶವೆಂದರೆ, ಆದಾಯ ತೆರಿಗೆ (IT) ಮತ್ತು ಜಿಎಸ್‌ಟಿ (GST) ಪಾವತಿಸುತ್ತಿರುವ 1,94,560 ಜನರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇವರಿಗೆ ವಾರ್ಷಿಕವಾಗಿ ಸುಮಾರು 466.94 ಕೋಟಿ ರೂ. ಪಾವತಿಯಾಗುತ್ತಿದ್ದು, ಇವರು ಯೋಜನೆಗೆ ಅರ್ಹರೇ ಎಂಬುದನ್ನು ಸರ್ಕಾರ ಪುನರ್ ಪರಿಶೀಲಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

66
ದಿನೇಶ್ ಗೂಳಿಗೌಡ ಅವರು ನೀಡಿರುವ ಪ್ರಮುಖ ಪ್ರಸ್ತಾವನೆಗಳು:

ಬೆರಳಚ್ಚು ಕಡ್ಡಾಯ: ಅನ್ನಭಾಗ್ಯ ಯೋಜನೆಯಲ್ಲಿ ಪಡಿತರ ನೀಡುವಾಗ ಬೆರಳಚ್ಚು (Biometric) ಪಡೆಯುವ ಮಾದರಿಯನ್ನೇ ಗೃಹಲಕ್ಷ್ಮಿ ಯೋಜನೆಗೂ ಅಳವಡಿಸಬೇಕು. ಇದರಿಂದ ಫಲಾನುಭವಿ ಜೀವಂತವಾಗಿದ್ದಾರೆಯೇ ಎಂಬುದು ದೃಢಪಡುತ್ತದೆ.

ಹಣ ಹಿಂಪಡೆಯಿರಿ: ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಈಗಾಗಲೇ ಜಮೆಯಾಗಿರುವ ಹಣವನ್ನು ಬ್ಯಾಂಕ್‌ಗಳ ಮೂಲಕ ಹಿಂಪಡೆಯಲು ನಿರ್ದೇಶನ ನೀಡಬೇಕು.

ನೋಂದಣಿ ಕಡ್ಡಾಯ: ಗ್ರಾಮ ಮತ್ತು ವಾರ್ಡ್‌ ಮಟ್ಟದಲ್ಲಿ ಮರಣ ದಾಖಲೆಗಳನ್ನು ಕಡ್ಡಾಯವಾಗಿ ಸಂಗ್ರಹಿಸಿ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು.

ಗೃಹಜ್ಯೋತಿ ದುರ್ಬಳಕೆ ತಡೆ: ಕೆಲವು ಗೃಹಜ್ಯೋತಿ ಫಲಾನುಭವಿಗಳು ಗೃಹ ಬಳಕೆಯ ವಿದ್ಯುತ್ ಸಂಪರ್ಕವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.

ಒಟ್ಟಾರೆಯಾಗಿ, ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಮಾತ್ರ ತಲುಪುವಂತಾಗಲು ಮತ್ತು ಸರ್ಕಾರದ ಹಣ ಪೋಲಾಗುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories