ಕೊಲ್ಲಿ ಯುದ್ಧದಿಂದ ಡಾಂಬರ್‌ ದರ ದುಪ್ಪಟ್ಟು ದುಬಾರಿ: ಕರ್ನಾಟಕದ ಹಲವು ಕಡೆ ರಸ್ತೆ ಕೆಲಸ ಸ್ಥಗಿತ

Published : Jun 15, 2026, 04:29 PM IST

ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಡಾಂಬರ್ ಬೆಲೆ ಪ್ರತಿ ಟನ್‌ಗೆ ₹45 ಸಾವಿರದಿಂದ ₹1 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ಹೂವಿನಹಡಗಲಿ ತಾಲೂಕಿನ ಹಲವು ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಗುತ್ತಿಗೆದಾರರು ಜೆಲ್ಲಿಕಲ್ಲು ಹಾಕಿ ಕಾಮಗಾರಿ ನಿಲ್ಲಿಸಿದ್ದಾರೆ.

PREV
14
₹45 ಸಾವಿರದಿಂದ ₹ 1 ಲಕ್ಷಕ್ಕೆ ಏರಿಕೆ

ವರದಿ: ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಮಧ್ಯಪ್ರಾಚ್ಯದ ಯುದ್ಧದ ಈಗ ರಸ್ತೆ ಮೇಲೂ ಪರಿಣಾಮ ಬೀರಿದೆ. ಪ್ರತಿ ಟನ್‌ ಡಾಂಬರ್‌ ಬೆಲೆ ₹45 ಸಾವಿರದಿಂದ ₹ 1 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ರಸ್ತೆ ಅಭಿವೃದ್ಧಿಗೂ ಕುತ್ತು ಬಂದಿದೆ. ಟೆಂಡರ್‌ ಪಡೆದ ಗುತ್ತಿಗೆದಾರರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಯುದ್ಧಕ್ಕೂ ಮುನ್ನವೇ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಒಪ್ಪಂದದ ಪ್ರಕಾರ ವಿಧಿ ಇಲ್ಲದೇ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಈಗ ಡಾಂಬರ್‌ ಖರೀದಿಸಲು ಹೋದರೆ ಸಿಕ್ಕಾಪಟ್ಟೆ ಬೆಲೆ ಏರಿಕೆಯಾಗಿದೆ. ಇನ್ನು ಸ್ವಲ್ಪ ದಿನ ತಡೆದರೆ ಬೆಲೆ ಇಳಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿರುವ ಗುತ್ತಿಗೆದಾರರು, ಹೂವಿನಹಡಗಲಿಯ ಹಲವು ರಸ್ತೆಗಳ ಮೇಲೆ ಜೆಲ್ಲಿ ಕಲ್ಲು ಹಾಕಿ ಬಿಟ್ಟಿದ್ದಾರೆ.

24
ಧೂಳು ಮೆತ್ತಿಕೊಂಡು ಹೋಗುವ ವಾಹನ

ಹೌದು, ತಾಲೂಕಿನ ಮೈಲಾರ-ತೋರಣಗಲ್ಲು, ಅರಭಾವಿ-ಚಳಕೇರಿ ರಾಜ್ಯ ಹೆದ್ದಾರಿ ಸೇರಿದಂತೆ ಇನ್ನಿತರ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ಟೆಂಡರ್‌ ಕರೆದು, ಕಾಮಗಾರಿ ಆದೇಶ ನೀಡಿದೆ. ಗುತ್ತಿಗೆದಾರರು ಟೆಂಡರ್‌ ನಿಯಮಗಳಂತೆ ಕಾಮಗಾರಿ ಆರಂಭಿಸಿ, ರಸ್ತೆಗೆ ಇನ್ನು ಡಾಂಬರೀಕರಣ ಹಾಕಬೇಕು ಎನ್ನುವಷ್ಟರಲ್ಲಿ ಮಧ್ಯಪ್ರಾಚ್ಯ ಯುದ್ಧ ಶುರುವಾಗಿತ್ತು. ಇದರ ಪರಿಣಾಮದಿಂದ ಡಾಂಬರ್‌ ಬೆಲೆ ಗಗನಕ್ಕೇರಿದೆ. ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯನ್ನು ಆಯ್ದ ಮೂರು ಕಡೆಗಳಲ್ಲಿ ಹಾಳಾಗಿರುವ ರಸ್ತೆಯನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಕಲ್ಲಿನ ಪುಡಿ ಮಿಶ್ರಿತ ಜೆಲ್ಲಿ ಕಲ್ಲು ಹಾಕಿದ್ದಾರೆ. ವಾಹನಗಳ ಓಡಾಟದಿಂದ ರಸ್ತೆಗೆ ಹಾಕಿದ್ದ ಜೆಲ್ಲಿ ಕಲ್ಲು ಕಿತ್ತು ಹೋಗುತ್ತಿವೆ. ಜತೆಗೆ ರಸ್ತೆ ತುಂಬೆಲ್ಲ ಧೂಳು ಎಗರುತ್ತಿದೆ. ದೊಡ್ಡ ವಾಹನಗಳ ಹಿಂದೆ ಬೈಕ್‌ ಸವಾರರು ಧೂಳು ಮೆತ್ತಿಕೊಂಡು ಹೋಗುವ ಸ್ಥಿತಿ ಇದೆ.

34
ಗುತ್ತಿಗೆದಾರರಿಗೆ ತೊಂದರೆ

ತಾಲೂಕಿನ ಉತ್ತಂಗಿ ಬಳಿ ಅರಭಾವಿ-ಚಳಕೇರಿ ರಾಜ್ಯ ಹೆದ್ದಾರಿ ಅಭಿವೃದ್ಧಿ ನಡೆಯುತ್ತಿದೆ. ರಸ್ತೆಗೆ ಜೆಲ್ಲಿಕಲ್ಲು ಹಾಕಿದ್ದಾರೆ. ಸಾಕಷ್ಟು ಕಡೆ ಕಲ್ಲು ಕಿತ್ತು ಹೋಗಿ ಗುಂಡಿಗಳಾಗಿವೆ. ಕಾಮಗಾರಿ ಪ್ರಗತಿಯಲ್ಲಿ ಇರುವಾಗಲೇ ರಸ್ತೆ ಕಿತ್ತು ಹೋಗಿದೆ. ಈ ರಾಜ್ಯ ಹೆದ್ದಾರಿಯಲ್ಲಿ ಒಂದೇ ತಿಂಗಳಿನಲ್ಲಿ ಮೂರು ರಸ್ತೆ ಅಪಘಾತಗಳು ಉಂಟಾಗಿವೆ. ತಾಲೂಕಿನಲ್ಲಿ ಒಟ್ಟಾರೆ 10 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಎಲ್ಲ ಕಡೆಗೂ ಪರಿಸ್ಥಿತಿ ಹೀಗೆ ಇದೆ. ರಸ್ತೆ ಧೂಳು ಮುಕ್ತ ಮಾಡಲು ತಿಳಿದಾಗೊಮ್ಮೆ ನೀರು ಸಿಂಪರಣೆ ಮಾಡುತ್ತಾರೆ.

ರಾಜ್ಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಡಾಂಬರ್‌ ಬೆಲೆ ಏರಿಕೆಯಿಂದ ಗುತ್ತಿಗೆದಾರರಿಗೆ ತೊಂದರೆಯಾಗಿದೆ. ಅಗ್ರಿಮೆಂಟ್‌ ಪ್ರಕಾರ ಅವರೇ ಕೆಲಸ ಪೂರ್ಣಗೊಳಿಸಬೇಕು. ಧೂಳು ಮುಕ್ತ ಮಾಡಲು ನೀರು ಸಿಂಪರಣೆ ಮಾಡಲಾಗುತ್ತಿದೆ.

-ನಾಗೇಶ, ಲೋಕೋಪಯೋಗಿ ಇಲಾಖೆಯ ಎಇಇ

44
ರಸ್ತೆ ತುಂಬಾ ಧೂಳು

ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಗೆ ಕಲ್ಲಿನ ಪುಡಿ, ಜೆಲ್ಲಿ ಕಲ್ಲು ಹಾಕಿದ್ದಾರೆ. ಮೈಲಾರಕ್ಕೆ ಬರುವ ಭಕ್ತರು ಧೂಳು ಮೆತ್ತಿಕೊಂಡೇ ಬರುತ್ತಾರೆ. ದೊಡ್ಡ ವಾಹನದ ಹಿಂದೆ ಹೋದರೆ ದಾರಿಯೇ ಕಾಣುತ್ತಿಲ್ಲ. ಅಷ್ಟೊಂದು ಧೂಳು ಇದೆ. ಸಂಬಂಧ ಪಟ್ಟವರು ಬೇಗನೆ ಕಾಮಗಾರಿ ಪೂರ್ಣಗೊಳಿಸಲಿ.

-ಮೈಲಾರ ಗ್ರಾಮಸ್ಥರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories