ಜಮೀರ್‌ಗೆ ಡಿಸಿಎಂ ಪಟ್ಟಕ್ಕಾಗಿ ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ, ಮಾಜಿ ಕಾರ್ಪೋರೇಟರ್ ಇಮ್ರಾನ್ ಪಾಷಾ ವಶಕ್ಕೆ!

Published : Jun 15, 2026, 02:30 PM IST

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಅವರಿಗೆ ಡಿಸಿಎಂ ಸ್ಥಾನ (DCM Seat) ನೀಡಬೇಕೆಂದು ಆಗ್ರಹಿಸಿ ಪಾದರಾಯನಪುರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಕಾರ್ಪೋರೇಟರ್ ಇಮ್ರಾನ್ ಪಾಷಾ (Imran Pasha) ಅವರನ್ನು ವಶಕ್ಕೆ ಪಡೆಯಲಾಯಿತು.

PREV
16

ಬೆಂಗಳೂರು: ಚಾಮರಾಜಪೇಟೆ ಶಾಸಕ ಮತ್ತು ಮಾಜಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ರಾಜ್ಯದ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಇಂದು ಪಾದರಾಯನಪುರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

26

ಜಮೀರ್ ಅಹ್ಮದ್ ಖಾನ್ ಅವರನ್ನು ಮುಸ್ಲಿಂ ಸಮುದಾಯದ ಪ್ರಬಲ ನಾಯಕ ಎಂದು ಬಿಂಬಿಸಿರುವ ಬೆಂಬಲಿಗರು, ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ಅಸಮಾಧಾನ ಹೊರಹಾಕಿದರು. ‘ಜಮೀರ್ ಅವರು ಬಡವರ ಪಾಲಿನ ಆಶಾಕಿರಣ, ಅವರಿಗೆ ಡಿಸಿಎಂ ಸೀಟು ನೀಡಲೇಬೇಕು’ ಎಂದು ಘೋಷಣೆ ಕೂಗುತ್ತಾ ಸಾವಿರಾರು ಮಹಿಳೆಯರು ರಸ್ತೆಗಿಳಿದರು.

36

ಪಾದರಾಯನಪುರ, ಹೊಸಗುಡ್ಡದಹಳ್ಳಿ ಹಾಗೂ ಚಾಮರಾಜಪೇಟೆಯ ವಿವಿಧ ಭಾಗಗಳಿಂದ ಆಗಮಿಸಿದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾದರು. ಪ್ರತಿಭಟನೆಗೆ ಬೆಂಬಲ ಸೂಚಿಸಿ ಸ್ಥಳೀಯ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿತ್ತು.

46

ಪೊಲೀಸ್ ಸರ್ಪಗಾವಲು – ರಸ್ತೆಗಳು ಬಂದ್:

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಕೆಎಸ್‌ಆರ್‌ಪಿ (KSRP) ಮತ್ತು ಸಿಆರ್ (CR) ತುಕಡಿಗಳನ್ನು ನಿಯೋಜಿಸಲಾಯಿತು. ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಉದಯಭಾಸ್ಕರ್ ಪ್ರತಿಭಟನಾಕಾರರಿಗೆ ಖಡಕ್ ಎಚ್ಚರಿಕೆ ನೀಡಿದರು. ‘ಸಾರ್ವಜನಿಕ ರಸ್ತೆಯಲ್ಲಿ ಗುಂಪು ಸೇರುವಂತಿಲ್ಲ, ಪ್ರತಿಭಟನೆಗೆ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದರೆ ಕೇಸ್ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.

ಮುನ್ನೆಚ್ಚರಿಕಾ ಕ್ರಮವಾಗಿ ಹೊಸಹಳ್ಳಿ ಫ್ಲೈ ಓವರ್ ಮತ್ತು ಮುಖ್ಯರಸ್ತೆಯನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.

56

ಇಮ್ರಾನ್ ಪಾಷಾ ಎಂಟ್ರಿ ಮತ್ತು ಹೈಡ್ರಾಮಾ:

ಪ್ರತಿಭಟನಾ ಸ್ಥಳಕ್ಕೆ ಮಾಜಿ ಕಾರ್ಪೋರೇಟರ್ ಇಮ್ರಾನ್ ಪಾಷಾ ಆಗಮಿಸುತ್ತಿದ್ದಂತೆ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಯಿತು. ‘ನಾನು ಜೆಡಿಎಸ್‌ನಲ್ಲಿದ್ದರೂ ಜಮೀರ್ ಅವರಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತೇನೆ. ನಮ್ಮ ಪ್ರಾಣ ಹೋದರೂ ನಮ್ಮ ನಾಯಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ಪಾಷಾ ಗುಡುಗಿದರು.

 ಕಾರ್ಯಕರ್ತರು ಇಮ್ರಾನ್ ಪಾಷಾ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು 'ವಿಧಾನಸೌಧ ಚಲೋ'ಗೆ ಸಿದ್ಧರಾದರು. ಈ ವೇಳೆ ಪೊಲೀಸರು ಅವರನ್ನು ತಡೆದಾಗ ತಳ್ಳಾಟ-ನೂಕಾಟ ನಡೆಯಿತು. ಅಂತಿಮವಾಗಿ ಇಮ್ರಾನ್ ಪಾಷಾ ಅವರನ್ನು ಪೊಲೀಸರು ಬಲವಂತವಾಗಿ ಜೀಪ್‌ಗೆ ಹತ್ತಿಸಿ ವಶಕ್ಕೆ ಪಡೆದರು.

66

ಚದುರದ ಪ್ರತಿಭಟನಾಕಾರರು:

ತಮ್ಮ ನಾಯಕನನ್ನು ವಶಕ್ಕೆ ಪಡೆದರೂ ಪ್ರತಿಭಟನಾಕಾರರು ಸ್ಥಳದಿಂದ ಕದಲಲಿಲ್ಲ. ಹೊಸಹಳ್ಳಿ ಮುಖ್ಯರಸ್ತೆಗೆ ಬಂದು ಜಮೀರ್ ಭಾವಚಿತ್ರ ಹಿಡಿದು 'ಡಿಸಿಎಂ.. ಡಿಸಿಎಂ..' ಎಂದು ಕಿರುಚುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಹರಸಾಹಸ ಪಟ್ಟು ಜನರನ್ನು ಚದುರಿಸಲು ಯತ್ನಿಸಿದರು ಮತ್ತು ಹಲವು ಪ್ರತಿಭಟನಾಕಾರರನ್ನು ಬಸ್‌ಗಳಲ್ಲಿ ತುಂಬಿ ಕರೆದೊಯ್ದರು.

ಒಟ್ಟಾರೆಯಾಗಿ, ಜಮೀರ್ ಅಹ್ಮದ್ ಅವರಿಗೆ ದೊಡ್ಡ ಖಾತೆ ಮತ್ತು ಡಿಸಿಎಂ ಪಟ್ಟ ನೀಡಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಅಭಿಮಾನಿಗಳ ಈ ಹೋರಾಟ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories