ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಕಾಫಿಪೋಸಾ ಕಾಯ್ದೆಯಡಿ ಅವರ ಮುನ್ನೆಚ್ಚರಿಕಾ ಬಂಧನವನ್ನು ನ್ಯಾಯಾಲಯ ಎತ್ತಿಹಿಡಿದಿದ್ದು, ಅವರ ಪರವಾಗಿ ಸಲ್ಲಿಸಲಾದ ಮೇಲ್ಮನವಿಗಳನ್ನು ವಜಾಗೊಳಿಸಿದೆ.
ನವದೆಹಲಿ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕನ್ನಡ ಚಿತ್ರನಟಿ ರನ್ಯಾ ರಾವ್ ಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆ ಉಂಟಾಗಿದೆ. ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ (CEIB) ಹೊರಡಿಸಿದ್ದ ಮುನ್ನೆಚ್ಚರಿಕಾ ಬಂಧನ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದ್ದು, ಈ ಮೂಲಕ ನಟಿಯ ಪರವಾಗಿ ಸಲ್ಲಿಸಲಾದ ಮೇಲ್ಮನವಿಗಳನ್ನು ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು ಈ ಮಹತ್ವದ ತೀರ್ಪು ನೀಡಿದೆ. ರನ್ಯಾ ರಾವ್ ಅವರ ತಾಯಿ ಹಾಗೂ ಇನ್ನೊಬ್ಬ ಆರೋಪಿ ಸಾಹಿಲ್ ಸರ್ಕರಿಯಾ ಜೈನ್ ಅವರ ಸೋದರ ಸಂಬಂಧಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಾಲಯ ತಳ್ಳಿ ಹಾಕಿದೆ.
25
ಕಾಫಿಪೋಸಾ ಬಗ್ಗೆ ಕೋರ್ಟ್ ಹೇಳಿದ್ದೇನು?
ತೀರ್ಪಿನಲ್ಲಿ ನ್ಯಾಯಪೀಠವು, ಬಂಧನ ಆದೇಶವು ಸಂವಿಧಾನದ ಅನುಚ್ಛೇದ 22(3)(ಬಿ) ಉಲ್ಲಂಘನೆಯಡಿ ಹೊರಡಿಸಲಾಗಿಲ್ಲ ಎಂಬುದನ್ನು ಅಧಿಕಾರಿಗಳು ಸಮರ್ಪಕವಾಗಿ ಸಾಬೀತುಪಡಿಸಿದ್ದಾರೆ. ಜೊತೆಗೆ, COFEPOSA ಕಾಯ್ದೆಯ ವಿಧಿ 8(ಇ) ಮತ್ತು ಸಂವಿಧಾನದ ಅನುಚ್ಛೇದ 22(3)(ಬಿ) ಪ್ರಕಾರ ಮುನ್ನೆಚ್ಚರಿಕಾ ಬಂಧನಕ್ಕೊಳಗಾದವರಿಗೆ ಕಾನೂನು ಸಹಾಯವನ್ನು ಹಕ್ಕಿನ ರೂಪದಲ್ಲಿ ಬೇಡುವ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
35
14 ಕೆ.ಜಿ. ಚಿನ್ನವನ್ನು ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದ ರನ್ಯಾ
ಪ್ರಕರಣದ ವಿವರಗಳ ಪ್ರಕಾರ, ರನ್ಯಾ ರಾವ್ ಅವರನ್ನು 2025ರ ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ದುಬೈನಿಂದ ಅಕ್ರಮವಾಗಿ ಸುಮಾರು 14 ಕೆ.ಜಿ. ಚಿನ್ನವನ್ನು ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಅವರು ದೇಹದಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ 12.56 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧನದ ಬಳಿಕ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ, 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 2.67 ಕೋಟಿ ರೂಪಾಯಿ ನಗದು ಹಣವನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದರು.
1 ಕ್ವಿಂಟಾಲ್‌ಗೂ ಹೆಚ್ಚು ಚಿನ್ನ ವಿದೇಶಗಳಿಂದ ಭಾರತಕ್ಕೆ ಸ್ಮಗ್ಲಿಂಗ್ ಮಾಡಿರುವ ರನ್ಯಾ
ಈ ಪ್ರಕರಣ ಸಂಬಂಧ ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (DRI) ಮತ್ತು ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧಾರವಾಗಿ ಜಾರಿಗೆ ನಿರ್ದೇಶನಾಲಯ (ED) ತನಿಖೆ ಆರಂಭಿಸಿತ್ತು. ತನಿಖೆಯಲ್ಲಿ ಆಶ್ಚರ್ಯಕರ ಮಾಹಿತಿಗಳು ಬಹಿರಂಗವಾಗಿದ್ದು, ಆರೋಪಿಗಳು 2024ರ ಮಾರ್ಚ್‌ನಿಂದ 2025ರ ಮಾರ್ಚ್ ಅವಧಿಯೊಳಗೆ ಒಟ್ಟು 102.55 ಕೋಟಿ ರೂಪಾಯಿ ಮೌಲ್ಯದ 127 ಕೆ.ಜಿ. ಚಿನ್ನವನ್ನು ವಿದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ಕಳ್ಳ ಸಾಗಣೆ ಮಾಡಿರುವುದು ಪತ್ತೆಯಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ, ಕಳೆದ ಒಂದು ವರ್ಷದಿಂದ ಜೈಲಿನಲ್ಲಿರುವ ರನ್ಯಾ ರಾವ್ ಅವರಿಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಮತ್ತೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಮತ್ತು ತನಿಖೆಯ ಮೇಲಿನ ಗಮನ ಇದೀಗ ಹೆಚ್ಚಿದೆ.
55
ಕರ್ನಾಟಕ ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು
ವಿದೇಶದಿಂದ ಭಾರತಕ್ಕೆ ಅಕ್ರಮವಾಗಿ ಚಿನ್ನ ಕಳ್ಳ ಸಾಗಿಸಿದ ಪ್ರಕರಣದಲ್ಲಿ ನಟಿ ರನ್ಯಾ ರಾವ್, ತರುಣ್ ಕೊಂಡೂರು ರಾಜು ಮತ್ತು ಸಾಹೀಲ್ ಜೈನ್ ಅವರನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (ಕಾಫಿಪೋಸಾ) ಅಡಿ ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಕೂಡ ಕಳೆದ 2025ರ ಡಿಸೆಂಬರ್‌ನಲ್ಲಿ ಎತ್ತಿ ಹಿಡಿದಿತ್ತು. ಕಾಫಿಪೋಸಾ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲು ಬಂಧನ ಮಾಡಿರುವುದು ಕಾನೂನುಬಾಹಿರವೆಂದು ಘೋಷಿಸುವಂತೆ ಕೋರಿ ರನ್ಯಾ ತಾಯಿ ಎಚ್.ಎಸ್.ರೋಹಿಣಿ, ತರುಣ್ ಅವರ ತಾಯಿ ರಮಾ ರಾಜು ಮತ್ತು ಸಾಹೀಲ್ ಜೈನ್ ತಾಯಿ ಪ್ರಿಯಾಂಕಾ ಸರ್ಕಾರಿಯಾ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಅವರ ನೇತೃತ್ವದ ವಿಭಾಗೀಯ ಪೀಠ ಮಹತ್ವದ ಆದೇಶ ಹೊರಡಿಸಿತ್ತು. ಈ ಮೂವರು ಆರೋಪಿಗಳ ಮೇಲೆ ಕಾಫಿಫೋಸಾ ಅಡಿ ಹೇರಿ ಕೇಂದ್ರ ಸರ್ಕಾರದ ಹಣಕಾಸು, ಕಂದಾಯ ಇಲಾಖೆ, ಆರ್ಥಿಕ ಗುಪ್ತಚರ ದಳದ ಜಂಟಿ ಕಾರ್ಯದರ್ಶಿ ಏ.22ರಂದು ಆದೇಶಿಸಿದ್ದರು. ಈ ಕ್ರಮ ಕಾನುನು ಬಾಹಿರವೆಂದು ಘೋಷಿಸುವಂತೆ ಕೋರಿ ಅರ್ಜಿದಾರರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ