ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿ ಕುಟುಂಬಕ್ಕೆ ತಲಾ 10 ಕೆ.ಜಿ. ಅಕ್ಕಿ ಕೊಡುವುದಾಗಿ ಹೇಳಿ ಈಗ ಕೇವಲ 5 ಕೆ.ಜಿ. ಅಕ್ಕಿ ಮಾತ್ರ ವಿತರಣೆ ಮಾಡುತ್ತಿದೆ. ಉಳಿದಂತೆ, ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ಕುಟುಂಬಗಳ ಖಾತೆಗೆ ಹಾಕಲಾಗುತ್ತಿದೆ.
ಹೀಗಿರುವಾಗ ಕೇಂದ್ರ ಸರ್ಕಾರದಿಂದ ಸರಬರಾಜು ಮಾಡಲಾಗುತ್ತಿರುವ ಅನ್ನ ಭಾಗ್ಯ ಅಕ್ಕಿ ಕೂಡ ಬಡವರಿಗೆ ಸೇರುವ ಬದಲು ಪಕ್ಕದ ರಾಜ್ಯ ತೆಲಂಗಾಣದ ಹೈದರಾಬಾದ್ ನಗರಕ್ಕೆ ಸರಬರಾಜು ಆಗುತ್ತಿರುವುದು ಕಂಡುಬಂದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿ ಬಳಿ ಪರಿಶೀಲನೆ ಮಾಡಲಾಗಿದೆ. ಆಗ ಲಾರಿ ಪರಿಶೀಲನೆ ವೇಳೆ ಅನ್ನಭಾಗ್ಯ ಅಕ್ಕಿಯನ್ನು ನೋಡಿದ್ದಾರೆ. ಒಟ್ಟು 5 ಲಕ್ಷ ರೂ. ಮೌಲ್ಯದ 140 ಕ್ವಿಂಟಾಲ್ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶಕ್ಕೆ ಪಡೆದಿರುವ ಪೊಲೀಸರು ಎಲ್ಲಿಂದ ಅಕ್ಕಿ ಕೊಂಡೊಯ್ಯಲಾಗುತ್ತಿದೆ ಎಂದು ಪರಿಶೀಲನೆ ಮಾಡಿದ್ದಾರೆ. ಆಗ ಕಲಬುರಗಿ ಜಿಲ್ಲೆ ಕಡೆಯಿಂದ ಹೈದರಾಬಾದ್ ನಗರಕ್ಕೆ ಲಾರಿ ಹೋಗುತ್ತಿದೆ ಎಂದು ಲಾರಿ ಚಾಲಕ ಹೇಳಿದ್ದಾನೆ.
ಒಟ್ಟು 50 ಕೆ.ಜಿ ತೂಕದ 280 ಚೀಲಗಳನ್ನು ಲಾರಿಯಲ್ಲಿ ಸಾಗಿಸಲಾಗುತ್ತಿದ್ದು, ಎಲ್ಲವನ್ನೂ ವಶಕ್ಕೆ ಪಡೆದಿದ್ದಾರೆ. ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಆಹಾರ ಇಲಾಖೆ ಅಧಿಕಾರಿಗಳು ಇದು ಅನ್ನಭಾಗ್ಯ ಅಕ್ಕಿ ಎಂಬುದನ್ನು ಖಚಿತಪಡಿಸಿದ್ದಾರೆ. ನಂತರ, ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳೇ ಕೇಸ್ ದಾಖಲು ಮಾಡಿದ್ದಾರೆ.
ಲಾರಿ ಚಾಲಕ ರಾಜು ರಾಠೋಡ್ ವಿರುದ್ಧ ಕೇಸ್ ದಾಖಲು ಆಗಿದ್ದು, ಲಾರಿ ಸಮೇತ ಅನ್ನಭಾಗ್ಯ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಅಕ್ಕಿಯನ್ನು ಆಹಾರ ಇಲಾಖೆ ಪರಿವೀಕ್ಷಕರ ನೇತೃತ್ವದಲ್ಲಿ ಆಹಾರ ಇಲಾಖೆ ಗೋದಾಮಿಗೆ ರವಾನಿಸಲಾಗಿದೆ.