ಹಾಗಾದರೆ ಭಾರತೀಯ ಭೂಗರ್ಭ ಶಾಸ್ತ್ರ ಇಲಾಖೆ ನೀಡಿದ ಆ ಎಚ್ಚರಿಕೆ ಏನು ಎಂದು ನೋಡುವುದಾದರೆ ಕೊಡಗು ಜಿಲ್ಲೆಯ 104 ಪ್ರದೇಶಗಳಿಗೆ ಭೂಕುಸಿತ ಮತ್ತು ಪ್ರವಾಹ ಆಗುತ್ತದೆ ಎನ್ನುವ ಎಚ್ಚರಿಕೆ ನೀಡಿರುವುದು. ಭೂಕುಸಿತ ಮತ್ತು ಪ್ರವಾಹ ಎದುರಾಗುವುದರಿಂದ ಆ ಪ್ರದೇಶಗಳ 2995 ಕುಟುಂಬಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಬೆಟ್ಟಗುಡ್ಡ ಹಾಗೂ ನದಿ ಪಾತ್ರದ ಗ್ರಾಮಗಳಿಗೆ ಭಾರತೀಯ ಭೂಗರ್ಭ ಶಾಸ್ತ್ರ ಇಲಾಖೆ ಎಚ್ಚರಿಕೆ ನೀಡಿದೆ. ಕೇರಳದ ವಯನಾಡಿನಲ್ಲಿ ಮಹಾಭೂಕುಸಿತ ಆಗುತ್ತಿದ್ದಂತೆ ಕೊಡಗಿಗೆ ಇಂತಹ ಎಚ್ಚರಿಕೆಯನ್ನು ನೀಡಿದೆ. ಕೊಡಗಿನ 5 ತಾಲ್ಲೂಕುಗಳ 104 ಪ್ರದೇಶಗಳಿಗೆ ಭೂಕುಸಿತ ಪ್ರವಾಹವಾಗುವ ಸಾಧ್ಯತೆ ಇರುವುದರಿಂದ ಅಲ್ಲಿನ 2995 ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆಯನ್ನು ನೀಡಿದೆ. ಇಂತಹ ವರದಿ ದೊರೆಯುತ್ತಿದ್ದಂತೆ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ನೀಡಿರುವ ಸಲಹೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಕಂದಾಯ ಸಚಿವ ಕೃಷ್ಣೆಬೈರೆಗೌಡ ಕೊಡಗು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಜುಲೈ 31 ರಂದು ಕೊಡಗಿನ ಮಳೆಹಾನಿ ಪ್ರದೇಶಗಳಿಗೆ ಭೇಟಿದ್ದ ಸಚಿವ ಕೃಷ್ಣೆಬೈರೆಗೌಡ ಕೊಡಗು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ವರದಿ ಪ್ರಕಾರ ಮಡಿಕೇರಿ ನಗರ ಸೇರಿ ತಾಲ್ಲೂಕಿನ 47 ಸ್ಥಳಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಮಡಿಕೇರಿ ತಾಲ್ಲೂಕಿನ ಮೇಕೇರಿಯ ಶಕ್ತಿ ನಗರ ನವಗ್ರಾಮ, ಕೊಯನಾಡು, ಕಾಟಿಕೇರಿ, ಜೋಡುಪಾಲ, ಭಾಗಮಂಡಲ, ಕೋರಂಗಾಲ, ತಣ್ಣಿಮಾನಿ, ಚೆರಿಯಪರಂಬು, ಬಲಮುರಿ, ದೊಡ್ಡ ಪುಲಿಕೋಟು, ಎಮ್ಮೆಮಾಡು, ಹೆಮ್ಮೆತಾಳು, ಮೇಘತಾಳು, ಕಾಲೂರು, ಎರಡನೇ ಮೊಣ್ಣಂಗೇರಿ ಸೇರಿದಂತೆ 47 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಭೂಕುಸಿತ ಮತ್ತು ಪ್ರವಾಹ ಆಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದೆ. ಜೊತೆಗೆ ಮಡಿಕೇರಿಯ ಚಾಮುಂಡೇಶರಿ ನಗರ, ಇಂದಿರಾನಗರ, ಜ್ಯೋತಿ ನಗರ, ಮಂಗಳಾದೇವಿ ನಗರ, ಸುಬ್ರಹ್ಮಣ್ಯ ನಗರ, ಪುಟಾಣಿ ನಗರಗಳಲ್ಲಿ ಭೂಕುಸಿತ ಆಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಜೊತೆಗೆ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲ, ಊರುಬೆಟ್ಟ, ಮಕ್ಕಳಗುಡಿ ಬೆಟ್ಟ, ಶಾಂತಳ್ಳಿ, ತಲ್ತಾರೆ ಶೆಟ್ಟಳ್ಳಿ, ಕುಶಾಲನಗರ ತಾಲ್ಲೂಕಿನ ಹಾಲೇರಿ, ಜಂಬೂರು, ಮುವತ್ತೊಕ್ಲು, ಮುಳ್ಳುಸೋಗೆ, ಗುಮ್ಮನಕೊಲ್ಲಿ, ಕುಶಾಲನಗರದ ವಿವೇಕಾನಂದ ಬಡಾವಣೆ, ರಸೂಲ್ ಬಡಾವಣೆ, ಇಂದಿರಾ ಬಡಾವಣೆ, ಗಂದಧಕೋಟಿ ಸೇರಿದಂತೆ ತಾಲ್ಲೂಕಿನಲ್ಲಿ 56 ಪ್ರದೇಶಗಳಲ್ಲಿ ಪ್ರವಾಹದ ಎಚ್ಚರಿಕೆಯನ್ನು ನೀಡಿದೆ.
ಇನ್ನು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ 19 ಪ್ರದೇಶಗಳಲ್ಲಿ ಭೂಕುಸಿತ ಪ್ರವಾಹ ಎದುರಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕರಡಿಗೋಡು, ಗುಹ್ಯ, ಕೊಂಡಗೇರಿ, ಹಚ್ಚಿನಾಡು, ತೋರಾ ನಾಲ್ಕೇರಿ, ವಿರಾಜಪೇಟೆಯ ಅಯ್ಯಪ್ಪಬೆಟ್ಟ, ನೆಹರು ಬೆಟ್ಟ ಸೇರಿದಂತೆ 19 ಕಡೆಗಳಲ್ಲಿ ಭೂಕುಸಿತವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿಯಲ್ಲಿ ಈ ಸೂಚನೆ ಸಿಗುತ್ತಿದ್ದಂತೆ ಇತ್ತ ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜಾ ಅವರು ಜಿಲ್ಲೆಯ ಎಲ್ಲಾ ಇಲಾಖೆ ಅಧಿಕಾರಿಗಳ ಕರೆದು ಸಭೆ ನಡೆಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಅಂದರೆ ಇನ್ನು ನಾಲ್ಕೈದು ದಿನಗಳಲ್ಲಿ ತೀವ್ರ ಮಳೆಯಾಗಲಿದ್ದು ಎಲ್ಲರೂ ಅಲರ್ಟ್ ಆಗಿರುವಂತೆ ಜಿಲ್ಲಾಧಿಕಾರಿ ವೆಂಕಟ ರಾಜಾ ಸೂಚಿಸಿದ್ದಾರೆ. ಈ ಹಿಂದೆಯೂ ಭೂಕುಸಿತವಾಗಿರುವ ಬಹುತೇಕ ಕಡೆ ಮತ್ತೆ ಭೂಕುಸಿತ ಆಗುವ ಸಾಧ್ಯತೆ ಇದೆ ಎಂದು ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.
ಈ ಹಿಂದೆಯೂ ಕಳೆದ ನಾಲ್ಕೈದು ವರ್ಷಗಳಲ್ಲೂ ಆಗಸ್ಟ್ ತಿಂಗಳಲ್ಲೇ ಕೊಡಗಿನಲ್ಲಿ ಪ್ರವಾಹ ಮತ್ತು ಭೂಕುಸಿತ ಎದುರಾಗಿದೆ. ಹೀಗಾಗಿಯೇ ಒಂದೆಡೆ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ನೀಡಿರುವ ಆಗಸ್ಟ್ ತಿಂಗಳಲ್ಲಿ ಇನ್ನೂ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಕೊಡಗಿನ ಜನರು ಆತಂಕಗೊಳ್ಳುವಂತೆ ಮಾಡಿದೆ. 2019 ರಲ್ಲಿ ಭೂಕುಸಿತವಾಗಿದ್ದ ತೋರಾಕ್ಕೂ ಈ ಬಾರಿಯೂ ಕಂಟಕ ಎದುರಾಗಿದೆ. ಆದರೆ ಸ್ಥಳೀಯರು ಮಾತ್ರ ಈ ವರದಿಯನ್ನು ಒಪ್ಪುವುದಕ್ಕೆ ಸಿದ್ಧವಿಲ್ಲ. ಒಮ್ಮೆ ಭೂಕುಸಿತ ಆಗಿರುವ ಸ್ಥಳಗಳಲ್ಲಿ ಮತ್ತೆ ಆಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಅದು ಸತ್ಯವೇ ಆಗಿದ್ದರೆ ಜನರ ಜೀವ ಉಳಿಸುವುದು ಸರ್ಕಾರದ ಆದ್ಯತೆ ಎನ್ನುತ್ತಿದ್ದಾರೆ.