ಕೆಕೆಆರ್‌ಟಿಸಿ ಐಷರಾಮಿ ಕಲ್ಯಾಣ ರಥ ಬಸ್‌ಗೆ ಜನರಿಂದ ಭರ್ಜರಿ ರೆಸ್ಪಾನ್ಸ್: ಪ್ರಯಾಣದ ದರ, ವೇಳಾ ಪಟ್ಟಿ ಇಲ್ಲಿದೆ..

First Published | Nov 29, 2023, 7:01 PM IST

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ವತಿಯಿಂದ ಬೆಂಗಳೂರು ಮತ್ತು ಸಿಂಧನೂರು ನಡುವೆ ಆರಾಮದಾಯಕ ಪ್ರಯಾಣಕ್ಕಾಗಿ 'ಕಲ್ಯಾಣ ರಥ' ಹೆಸರಿನ ಐಷಾರಾಮಿ ವೋಲ್ವೋ ಸ್ಲೀಪರ್ ಬಸ್ ಸೇವೆ ಆರಂಭಿಸಲಾಗಿದೆ. ಈಗ ಬಸ್‌ಗೆ ಜನರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಕೆಲವೊಮ್ಮೆ ಅಡ್ವಾನ್ಸ್ ಬುಕಿಂಗ್ ಕೂಡ ಭರ್ತಿಯಾಗಿರುತ್ತದೆ. ಪ್ರಯಾಣದ ದರ ಮತ್ತು ವೇಳಾಪಟ್ಟಿ ಇಲ್ಲಿದೆ ನೋಡಿ..

ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ ಕಲ್ಯಾಣ ರಥ ಐಷರಾಮಿ ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ಸೇವೆಗೆ ಆಗಸ್ಟ್ 28ರಂದು  ಸೋಮವಾರ ಸಿಂಧನೂರಿನಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದ್ದು, ಈಗ ಯಶಸ್ವಿಯಾಗಿ ಬಸ್ ಸಂಚಾರ ಮಾಡುತ್ತಿದೆ.

ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ಹೊಸದಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರ್ಪಡೆಯಾಗಿದ್ದು, ಈ ಐಷಾರಾಮಿ ಬಸ್‌ಗೆ 'ಕಲ್ಯಾಣ ರಥ' ಎಂದು ನಾಮಕರಣ ಮಾಡಲಾಗಿದೆ. 
 

Latest Videos


ರೈಲು ಸೇವೆ ಇಲ್ಲದ ಸಿಂಧನೂರಿನಿಂದ ಕಲ್ಯಾಣ ರಥ ಬಸ್ ಸೇವೆ ಆರಂಭವಾಗಿದ್ದು, ಶೀಘ್ರದಲ್ಲಿಯೇ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಇತರೆ ಪ್ರದೇಶಗಳಿಗೂ ಸೇವೆ ವಿಸ್ತರಣೆಯಾಗಲಿದೆ.
 

ಕಲ್ಯಾಣ ರಥ ಬಸ್ ವೇಳಾಪಟ್ಟಿ: ಸಿಂಧನೂರು-ಬೆಂಗಳೂರು ನಡುವಿನ ಐಷರಾಮಿ ಕಲ್ಯಾಣ ರಥ ಬಸ್ ಪ್ರತಿ ದಿನ ಸಿಂಧನೂರಿನಿಂದ ರಾತ್ರಿ 10 ಗಂಟೆಗೆ ಹೊರಡಲಿದ್ದು, ಬೆಂಗಳೂರನ್ನು ಮರುದಿನ ಬೆಳಗ್ಗೆ 5.30ಕ್ಕೆ ತಲುಪಲಿದೆ.
 

ಕಲ್ಯಾಣ ರಥದ ಮಾರ್ಗ: ಸಿಂಧನೂರು- ಕಾರಟಗಿ-ಗಂಗಾವತಿ-ಬೂದುಗುಂಪ ಕ್ರಾಸ್-ಹೊಸಪೇಟೆ- ಕೂಡ್ಲಿಗಿ-ಹಿರಿಯೂರು-ತುಮಕೂರು ಮಾರ್ಗವಾಗಿ ಮರುದಿನ ಬೆಳಗ್ಗೆ ಬೆಂಗಳೂರಿಗೆ 5.30ಕ್ಕೆ ತಲುಪಲಿದೆ. ಪುನಃ ಬೆಂಗಳೂರಿನಿಂದ ರಾತ್ರಿ 10.15ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 5.45ಕ್ಕೆ ಸಿಂಧನೂರು ತಲುಪಲಿದೆ.
 

ಬಸ್‌ ವಿಶೇಷತೆಗಳು: ಸಾರಿಗೆ ಇಲಾಖೆಯ ಕಲ್ಯಾಣ ರಥ ಐಷಾರಾಮಿ ಬ್ರಾಂಡ್ ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಕ್ಲಾಸ್ ಬಸ್ 40 ಆಸನಗಳನ್ನು ಹೊಂದಿದೆ. ಈ ಬಸ್ 350 ಬಿ.ಎಸ್-6 ಇಂಜಿನ್ ಒಳಗೊಂಡಿದೆ. ಬಸ್ಸಿಗೆ ವಿಶಿಷ್ಟ ಸಸ್ಪೆಕ್ಷನ್‍ಗಳನ್ನು ಅಳವಡಿಸಲಾಗಿದೆ. ಬಸ್‌ನಲ್ಲಿ ಪೂರ್ಣ ಎಸಿ ವ್ಯವಸ್ಥೆಯಿದೆ.
 

ವಿಶೇಷ ಸುರಕ್ಷತಾ ವ್ಯವಸ್ಥೆಗಳು: ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ಗುರುತು ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್, ಲ್ಯಾಪ್ ಟಾಪ್ ಬ್ಯಾಗ್ ಇಡುವ ವ್ಯವಸ್ಥೆ ಬಸ್‌ನಲ್ಲಿ ಇದೆ. 
 

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಒಟ್ಟಾರೆಯಾಗಿ ಆರಾಮದಾಯಕ ಮತ್ತು ಸುಖಕರ ಪ್ರಯಾಣಕ್ಕಾಗಿ ಈ ಬಸ್‌ ಸೇವೆ ಆರಂಭಿಸಿದ್ದು, ಪ್ರಯಾಣಿಕರ ಬಸ್ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
 

ಕಲ್ಯಾಣ ರಥ ಐಷಾರಾಮಿ ಬಸ್‌ ಸೇವೆಗೆ ಇತ್ತೀಚೆಗಷ್ಟೇ ಸಿಂಧನೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದ್ದಾರೆ. ಸಿಂಧನೂರು, ಗಂಗಾವತಿ, ಹೊಸಪೇಟೆ ಮೂಲಕ ಬೆಂಗಳೂರಿಗೆ ಆರಾಮದಾಯಕ ಪ್ರಯಾಣಕ್ಕೆ 1,250 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.

click me!