ವರುಣನ ಆರ್ಭಟಕ್ಕೆ ಅಕ್ಷರ ಲೋಕವೇ ತತ್ತರವಾಗಿದೆ. ಚರ್ಚ್ ಸ್ಟ್ರೀಟ್‌ನ ಐತಿಹಾಸಿಕ ‘ಬುಕ್ ವರ್ಮ್’ ಮಳಿಗೆಗೆ ಮಳೆ ನೀರು ನುಗ್ಗಿ ಸಾವಿರಾರು ಪುಸ್ತಕಗಳು ನೀರು ಪಾಲಾಗಿವೆ. ಮಾಲೀಕನ ಅಸಹಾಯಕ ಮಾತುಗಳು ಕಣ್ಣಿರು ತರಿಸುತ್ತದೆ.
Bengaluru rains: ಚರ್ಚ್ ಸ್ಟ್ರೀಟ್‌ನ ಐತಿಹಾಸಿಕ ‘ಬುಕ್ ವರ್ಮ್ ಪುಸ್ತಕ ಮಳಿಗೆಗೆ ನುಗ್ಗಿದ ನೀರು
ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿ ಅಬ್ಬರಿಸಿದ ಮಳೆಗೆ ಕೇವಲ ರಸ್ತೆಗಳಷ್ಟೇ ಅಲ್ಲ, ಅದೆಷ್ಟೋ ಮನೆ ಅಂಗಡಿ, ಪುಸ್ತಕ ಪ್ರೇಮಿಗಳ ನೆಚ್ಚಿನ ತಾಣವನ್ನೇ ನೀರಲ್ಲಿ ಮುಳುಗಿಸಿಬಿಟ್ಟಿದೆ. ಆಕಾಶಕ್ಕೆ ತೂತು ಬಿದ್ದಂತೆ ಸುರಿದ ಮಳೆಗೆ ಚರ್ಚ್ ಸ್ಟ್ರೀಟ್‌ನ ಪ್ರಖ್ಯಾತ ‘ಬುಕ್ ವರ್ಮ್’ Bookworm) ಪುಸ್ತಕ ಮಳಿಗೆ ಜಲಾವೃತವಾಗಿದೆ.
ಕಳೆದ 25 ವರ್ಷಗಳಿಂದ ಅಕ್ಷರ ಪ್ರೇಮಿಗಳಿಗೆ ಜ್ಞಾನದ ದೀವಿಗೆಯಾಗಿದ್ದ ಈ ಮಳಿಗೆಯಲ್ಲಿ ಇಂದು ಪುಸ್ತಕಗಳ ಬದಲು ನೀರೇ ತುಂಬಿಕೊಂಡಿದೆ. ರಿಯಾಯಿತಿ ದರದಲ್ಲಿ ಅಪರೂಪದ ಪುಸ್ತಕಗಳನ್ನು ನೀಡಿ ಜನಪ್ರಿಯವಾಗಿದ್ದ ಇಲ್ಲಿನ ಸಾವಿರಾರು ಅಮೂಲ್ಯ ಕೃತಿಗಳು ಈಗ ಅಕ್ಷರಶಃ ಬಳೆ ನೀರಿನ ಜೊತೆಗೆ ಹರಿದು ಹೋಗಿವೆ.
23
Benglauru rains: ಇದಕ್ಕಿಂತ ದೊಡ್ಡ ಮಳೆ ನೋಡಿದ್ದೀವಿ ಆದರೆ..
ಇಡೀ ನಗರ ಮಲಗಿದ್ದಾಗ, ಬುಕ್ ವರ್ಮ್ ಮಾಲೀಕ ಕೃಷ್ಣ ಅವರ ಕಣ್ಣಲ್ಲಿ ನಿದ್ದೆಯೇ ಇರಲಿಲ್ಲ. ಮಳಿಗೆಗೆ ನುಗ್ಗಿದ ನೀರನ್ನು ಕಂಡು ಕಂಗಾಲಾದ ಅವರು, ರಾತ್ರಿಯಿಡೀ ಮಳಿಗೆಯಲ್ಲಿದ್ದ ನೀರನ್ನು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ. ಮಳಿಗೆಯ ತುಂಬಾ ಹರಿದಿದ್ದ ಕೆಸರು ಮಿಶ್ರಿತ ನೀರನ್ನು ಕ್ಲೀನ್ ಮಾಡುತ್ತಾ, ಒಂದೊಂದೇ ಪುಸ್ತಕಗಳನ್ನು ಉಳಿಸಿಕೊಳ್ಳಲು ಅವರು ನಡೆಸಿದ ಹೋರಾಟ ಅವರ ಮಾತಲ್ಲಿ ಕೇಳಿದ್ರೆ ಅಯ್ಯೋ ಅನಿಸದೇ ಇರದು. ಈ ಬಗ್ಗೆ ಮನದಾಳದ ನೋವು ಹಂಚಿಕೊಂಡಿರುವ ಮಾಲೀಕ ಕೃಷ್ಣ, 'ನಾವು ಇದಕ್ಕಿಂತ ದೊಡ್ಡ ಮಳೆಯನ್ನು ಬೆಂಗಳೂರಿನಲ್ಲಿ ನೋಡಿದ್ದೇವೆ. ಆದರೆ ಈ ಬಾರಿ ಬಿದ್ದ ಆಲಿಕಲ್ಲು ಮಳೆ ನೀರು ಬೇರೆ ಕಡೆ ಹರಿದು ಹೋಗದಂತೆ ತಡೆದಿದೆ. ಚರಂಡಿಗಳು ಬ್ಲಾಕ್ ಆಗಿದ್ದರಿಂದ ನೀರು ನೇರವಾಗಿ ಮಳಿಗೆಗೆ ನುಗ್ಗಿದೆ' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
33
ಸಾವಿರಾರು ಪುಸ್ತಕಗಳು ನೀರಲ್ಲಿ ಹೋಮ
ಮಳಿಗೆಯ ಮಾರುಕಟ್ಟೆ ಭಾಗ ಮಾತ್ರವಲ್ಲದೆ, ಗೋಡೌನ್‌ಗೂ ನೀರು ನುಗ್ಗಿದ್ದು ಪುಸ್ತಕಗಳ ರಾಶಿಯೇ ಒದ್ದೆಯಾಗಿದೆ. ಸದ್ಯ ಮಾಲೀಕ ಕೃಷ್ಣ ಅವರು ಒದ್ದೆಯಾದ ಪುಸ್ತಕಗಳನ್ನು ಬಿಸಿಲಿನಲ್ಲಿ ಒಣಗಿಸುವ ಕಾಯಕದಲ್ಲಿ ತೊಡಗಿದ್ದಾರೆ. ಸಾವಿರಾರು ಪುಸ್ತಕಗಳು ಹಾಳಾಗಿವೆ. ಆದರೆ ನಿಖರವಾದ ನಷ್ಟದ ಅಂದಾಜು ಇನ್ನು ತಿಳಿಯಬೇಕಿದೆ.
ಪುಸ್ತಕ ಮಾರಾಟದಲ್ಲೇ ಜೀವನ ಕಂಡುಕೊಂಡವರಿಗೆ ತಾಸು ಸುರಿದ ಮಳೆ, ಮಳಿಗೆಗೆ ನುಗ್ಗಿದ ನೀರು.. ಈ ದೃಶ್ಯ ನಿಜಕ್ಕೂ ಎದೆಯ ಮೇಲೆ ಕಲ್ಲು ಎಳೆದಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ