ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದಾದ್ಯಂತ 50ಕ್ಕೂ ಹೆಚ್ಚು ಮರಗಳು ಉರುಳಿ, ರಸ್ತೆಗಳು ಜಲಾವೃತಗೊಂಡಿದ್ದು, ಬೌರಿಂಗ್ ಆಸ್ಪತ್ರೆ ಬಳಿ ಗೋಡೆ ಕುಸಿದು 8 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರು: ನಗರದಲ್ಲಿ ಕಳೆದ ಎರಡು ಗಂಟೆಗಳ ಅವಧಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿವಿಧ ಭಾಗಗಳಲ್ಲಿ ಒಟ್ಟು 78 ಮಿ.ಮೀ ಮಳೆಯಾಗಿದ್ದು, ಹೆಚ್‌ಎಎಲ್ ಏರ್‌ಪೋರ್ಟ್ ಪ್ರದೇಶದಲ್ಲಿ ಮಾತ್ರವೇ 24.7 ಮಿ.ಮೀ ಮಳೆ ದಾಖಲಾಗಿದೆ. ಬೇಸಿಗೆಯ ಉರಿಯಾಟದಿಂದ ಕಂಗಾಲಾಗಿದ್ದ ನಗರಕ್ಕೆ ಮಳೆ ತಂಪು ನೀಡಿದರೂ, ಬಿರುಗಾಳಿ, ಆಲಿಕಲ್ಲು ಹಾಗೂ ಭಾರೀ ಮಳೆಯಿಂದ ಅನಾಹುತಗಳ ಸರಮಾಲೆ ಸಂಭವಿಸಿದೆ. ಬಿಬಿಎಂಪಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಪ್ರಕಾರ 50 ಸ್ಥಳಗಳಲ್ಲಿ ಮರಗಳು ಉರುಳಿವೆ. ಇದರ ಜತೆಗೆ ಈವರೆಗೆ 8 ಜನ ಮೃತಪಟ್ಟಿರುವ ಮಾಹಿತಿ ಲಭ್ಯವಿದೆ.
28
ಆಲಿಕಲ್ಲು ಮಳೆ
ನಗರದ ಬನಶಂಕರಿ, ಸೌತ್ ಎಂಡ್ ಸರ್ಕಲ್, ಜಯನಗರ, ಶಾಂತಿನಗರ, ಯುಬಿ ಸಿಟಿ, ಕಾರ್ಪೋರೇಶನ್ ಪ್ರದೇಶ ಸೇರಿದಂತೆ ಹಲವೆಡೆ ಗುಡುಗು-ಗಾಳಿ ಸಹಿತ ಭಾರೀ ಮಳೆ ಮಾತ್ರವಕ್ಕ ಕಾಶ್ಮೀರದಲ್ಲಿ ಮಂಜು ಇರುವ ರೀತಿಯಲ್ಲಿ ಆಲಿಕಲ್ಲು ಬಿದ್ದಿದೆ. ವಿಧಾನಸೌಧ ಸುತ್ತಮುತ್ತ ಆಲಿಕಲ್ಲು ಮಳೆ ದಾಖಲಾಗಿದ್ದು, ಕಂಠೀರವ ಕ್ರೀಡಾಂಗಣದ ಸುತ್ತಮುತ್ತ ಆಲಿಕಲ್ಲುಗಳು ರಾಶಿಯಾಗಿ ಬಿದ್ದಿರುವ ದೃಶ್ಯಗಳು ಕಂಡುಬಂದವು. ಚರ್ಚ್ ಸ್ಟ್ರೀಟ್, ಅವೆನ್ಯೂ ರೋಡ್ ಹಾಗೂ ಇಂದಿರಾನಗರ ಭಾಗದಲ್ಲೂ ಆಲಿಕಲ್ಲು ಮಳೆ ಜನರಲ್ಲಿ ಕುತೂಹಲ ಮೂಡಿಸಿದರೆ, ಕೆಲವರು ಅದರಲ್ಲಿ ಮೋಜುಮಸ್ತಿಯನ್ನೂ ನಡೆಸಿದರು.
38
ಸಾಲು ಸಾಲು ಮರಗಳು ಧರೆಗೆ, ವಾಹನಗಳಿಗೆ ಹಾನಿ
ಮಳೆಯ ತೀವ್ರತೆಗೆ ನಗರದ ಅನೇಕ ಕಡೆ ಮರಗಳು ಧರೆಗೆ ಉರುಳಿದ್ದು, ವಾಹನಗಳಿಗೆ ಹಾನಿಯಾಗಿದೆ. ಶಿವಾನಂದ ಸರ್ಕಲ್, ಕ್ರೆಸೆಂಟ್ ರಸ್ತೆ, ಜಯನಗರ ಹಾಗೂ ಇತರೆ ಪ್ರದೇಶಗಳಲ್ಲಿ ಮರ ಬಿದ್ದು ಕಾರು, ಬೈಕ್‌ಗಳು ಜಖಂಗೊಂಡಿವೆ. ಕೆಲವೆಡೆ ಒಂದೇ ರಸ್ತೆಯಲ್ಲಿ ಹಲವು ಮರಗಳು ಉರುಳಿ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಮೆಜೆಸ್ಟಿಕ್ ಕಾರ್ ಪಾರ್ಕಿಂಗ್ ಪ್ರದೇಶದಲ್ಲೂ ಬೃಹತ್ ಮರ ಬಿದ್ದು ಮೂರು ಕಾರುಗಳು ಹಾನಿಗೊಳಗಾದವು. ಅದೃಷ್ಟವಶಾತ್ ಹಲವೆಡೆ ಪ್ರಾಣಹಾನಿ ತಪ್ಪಿದರೂ, ಶಿವಾಜಿನಗರದ ಬಳಿ ಗೋಡೆ ಕುಸಿದು ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ಪಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಎಷ್ಟು ಜನವೆಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅಲ್ಲದೆ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ಮುಂಭಾಗದಲ್ಲಿದ್ದ ಕಟೌಟ್ ಕೂಡ ಗಾಳಿಗೆ ಬಿದ್ದು ಹಾನಿಯಾಗಿದೆ.
ಭಾರೀ ಮಳೆಯ ಪರಿಣಾಮ ನಗರದ ಅನೇಕ ರಸ್ತೆಗಳು ಜಲಾವೃತಗೊಂಡಿದ್ದು, ಶಿವಾನಂದ ಸರ್ಕಲ್ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ಕೆರೆಯಂತಾಗಿದೆ. ಅಂಡರ್‌ಪಾಸ್‌ನಲ್ಲಿ ದ್ವಿಚಕ್ರ ವಾಹನಗಳು ಸಿಲುಕಿಕೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಬಸವನಗುಡಿ ಅಂಡರ್‌ಪಾಸ್ ಕೂಡ ಸಂಪೂರ್ಣವಾಗಿ ನೀರಿನಿಂದ ತುಂಬಿ ಸಂಚಾರಕ್ಕೆ ಅಡ್ಡಿಯಾಗಿದೆ. ಎಚ್‌ಎಸ್‌ಆರ್ ಲೇಔಟ್, ಸರಜಾಪುರ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕಾಮರಾಜ ರಸ್ತೆ ಸೇರಿದಂತೆ ಹಲವೆಡೆ ವಾಹನಗಳು ಅರ್ಧ ಮುಳುಗಡೆಗೊಂಡಿವೆ.
58
ನಿವಾಸಿಗಳ ಸಂಕಷ್ಟ
ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ಸಮೀಪ ಬಿರುಗಾಳಿಗೆ ತಗಡಿನ ತಡೆಗೋಡೆ ಕಿತ್ತು ಬಿದ್ದಿದ್ದು, ಮತ್ತಷ್ಟು ಅಪಾಯದ ಭೀತಿ ಮೂಡಿಸಿದೆ. ಲಗ್ಗೆರೆಯಲ್ಲಿ ಗಾಳಿ-ಮಳೆಗೆ ಶೆಡ್‌ಗಳು ಕಿತ್ತು ಹೋಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈಕೋರ್ಟ್ ಆವರಣದ ಅಡ್ವೋಕೇಟ್ ಜನರಲ್ ಕಚೇರಿಗೆ ಮಳೆ ನೀರು ನುಗ್ಗಿ ದಾಖಲೆಗಳಿಗೆ ಹಾನಿಯಾಗಿದೆ. ವಿಧಾನಸೌಧದ ಪಶ್ಚಿಮ ದ್ವಾರ ಹಾಗೂ ಕೆಲವು ಕಚೇರಿಗಳಲ್ಲೂ ನೀರು ಒಳನುಗ್ಗಿದ ಘಟನೆಗಳು ವರದಿಯಾಗಿವೆ.
68
ಕಾಂಪೌಂಡ್ ಗೋಡೆ ಕುಸಿದು 8 ಮಂದಿ ಸಾವು!
ಬೌರಿಂಗ್ ಆಸ್ಪತ್ರೆ ಸಮೀಪ ಕಾಂಪೌಂಡ್ ಗೋಡೆ ಕುಸಿದು 8 ಮಂದಿ ಅವಶೇಷಗಳಡಿ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ ಮೃತ ದುರ್ಧೈವಿಗಳು ಹಳೆಯ ಗೋಡೆಗೆ ದೊಡ್ಡ ಟಾರ್ಪಲ್ ಹಾಕಿ ವ್ಯಾಪಾರ ಮಾಡುತ್ತಿದ್ದರು. ದಿಢೀರನೆ ಮಳೆ ಜೋರಾಗಿ ಸುರಿದ ಕಾರಣ ರಕ್ಷಣೆಗೆ ವ್ಯಾಪಾರಿಗಳು ಮತ್ತು ಪಾದಾಚಾರಿಗಳು ಟಾರ್ಪಲ್ ಆಡಿ ನಿಂತಿದ್ದಾರೆ. ಈ ವೇಳೆ ಬಿರುಗಾಳಿ ಸಹಿತ ಮಳೆಗೆ ಗೋಡೆ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದುರಂತದಿಂದ ಸಾವನ್ನಪ್ಪಿದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸಿಎಂ ಸಿದ್ದರಾಮಯ್ಯ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ಜರಸಿಬಿ ಮೂಲಕ ತೆರವು ಕಾರ್ಯಾಚರಣೆ ಮಾಡಲಾಗಿದೆ.
78
ಮೆಟ್ರೋ ಸೇವೆಯ ಮೇಲೂ ಮಳೆ ಪರಿಣಾಮ
ಮೆಟ್ರೋ ಸೇವೆಯ ಮೇಲೂ ಮಳೆಯ ಪರಿಣಾಮ ಕಂಡುಬಂದಿದ್ದು, ಬನಶಂಕರಿ ಮೆಟ್ರೋ ನಿಲ್ದಾಣದ ಒಳಗೂ ನೀರು ಹರಿದು ಟಿಕೆಟ್ ಕೌಂಟರ್ ಭಾಗಗಳಲ್ಲಿ ನೀರು ನಿಂತಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಕಚೇರಿಗಳಿಂದ ಮನೆಗಳಿಗೆ ತೆರಳುತ್ತಿದ್ದವರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಗಂಟೆಗಳ ಕಾಲ ಸಂಕಷ್ಟ ಅನುಭವಿಸಿದ್ದಾರೆ. ಕಾರ್ಪೋರೇಶನ್, ಮೆಜೆಸ್ಟಿಕ್, ಶಾಂತಿನಗರ, ಹೆಬ್ಬಾಳ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
88
ಬೆಂಗಳೂರು ಗ್ರಾಮಾಂತರದಲ್ಲೂ ಮಳೆ
ಬೆಂಗಳೂರು ಗ್ರಾಮಾಂತರ ಭಾಗಗಳಾದ ಹೊಸಕೋಟೆ ಸುತ್ತಮುತ್ತಲೂ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು-ಮಿಂಚು ಸಹಿತ ಭಾರೀ ಮಳೆ ಸುರಿದಿದೆ. ಬೇಸಿಗೆಯ ಬಿಸಿಯಿಂದ ಬಳಲುತ್ತಿದ್ದ ಜನರಿಗೆ ಈ ಮಳೆ ತಂಪು ನೀಡಿದರೂ, ಕೆಲವೆಡೆ ಹಾನಿ ಉಂಟುಮಾಡಿದೆ. ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಸೇರಿದಂತೆ ರಾಜ್ಯದ 26 ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಉಳಿದ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಒಟ್ಟಾರೆಯಾಗಿ, ಮಳೆರಾಯನ ಆಗಮನದಿಂದ ಬಿಸಿಲಿಗೆ ತಾತ್ಕಾಲಿಕ ವಿರಾಮ ಸಿಕ್ಕಿದ್ದರೂ, ಭಾರೀ ಮಳೆಯ ಪರಿಣಾಮ ಬೆಂಗಳೂರಿನ ಜನಜೀವನ ತತ್ತರಿಸಿ ಹೋಗಿರುವುದು ಸ್ಪಷ್ಟವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ