ಬೆಂಗಳೂರಿನಲ್ಲಿ ಸುರಿದ ಮೊದಲ ಆಲಿಕಲ್ಲು ಮಳೆಯು ಸಂಭ್ರಮದ ಬದಲು ಭೀಕರ ಅವಾಂತರಗಳನ್ನು ಸೃಷ್ಟಿಸಿದೆ. ಮರಗಳು ಮತ್ತು ಕಾಂಪೌಂಡ್ ಗೋಡೆಗಳು ಕುಸಿದು, ವಾಹನಗಳು ಜಖಂಗೊಂಡು, ಏಳು ಮಂದಿ ಮೃತಪಟ್ಟಿದ್ದಾರೆ. ರಸ್ತೆಗಳು ಜಲಾವೃತವಾಗಿ, ವಿಧಾನಸೌಧದ ಕಚೇರಿಗೂ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಬೆಂಗಳೂರು (ಏ.29): ಬಿಸಿಲಿನ ತಾಪಕ್ಕೆ ಬಳಲಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ವರುಣನ ಆಗಮನ ಸಂಭ್ರಮ ತರಬೇಕಿತ್ತು. ಆದರೆ, ಬುಧವಾರ ಸಂಜೆ ಸುರಿದ ಮೊದಲ ಮಳೆಯೇ ನಗರದಾದ್ಯಂತ ಭೀಕರ ಅವಾಂತರಗಳನ್ನು ಸೃಷ್ಟಿಸಿದೆ. ಭಾರೀ ಆಲಿಕಲ್ಲು ಮಳೆಗೆ ಇಡೀ ಬೆಂಗಳೂರು ನಗರ ಕಾಶ್ಮೀರದಲ್ಲಿ ಸುರಿದ ಹಿಮದ ರಾಶಿಯಂತೆ ಬಿಳಿಯಾಗಿ ಹೋಗಿತ್ತು. ಇನ್ನು ಬಿರುಗಾಳಿಗೆ ಮರಗಳು ಧರೆಗುರುಳಿದ್ದು, ರಸ್ತೆಗಳು ಕೆರೆಯಂತಾಗಿವೆ. ಎಲ್ಲೆಲ್ಲಿ ಏನೇನು ಅನಾಹುತಗಳಾಗಿವೆ ಎಂಬುದನ್ನು ನೀವೇ ನೋಡಿ..
28
ಮೈದಾನಗಳ ಮೇಲೆ ಆಲಿಕಲ್ಲಿನ ಬಿಳಿ ಹಾಸಿಗೆ!
ನಗರದಾದ್ಯಂತ ಆಲಿಕಲ್ಲು ಮಳೆಯ ಅಬ್ಬರ ಎಷ್ಟಿತ್ತೆಂದರೆ, ರಸ್ತೆಗಳು ಮತ್ತು ಕ್ರೀಡಾಂಗಣಗಳು ಹಿಮಪಾತವಾದಂತೆ ಕಂಡುಬಂದವು. ವಿಶೇಷವಾಗಿ ಕಂಠೀರವ ಕ್ರೀಡಾಂಗಣವು ಸಂಪೂರ್ಣವಾಗಿ ಆಲಿಕಲ್ಲಿನಿಂದ ಮುಚ್ಚಿಹೋಗಿದ್ದು, ಬಿಳಿ ಹಾಸಿಗೆ ಹಾಸಿದಂತೆ ಕಾಣುತ್ತಿತ್ತು. ಇದನ್ನು ಕಂಡು ಜನ ಒಂದೆಡೆ ಸಂಭ್ರಮಿಸಿದರೆ, ಮಳೆಯಿಂದಾದ ಹಾನಿ ಕಂಡು ಬೆಚ್ಚಿಬಿದ್ದಿದ್ದಾರೆ.
38
ಮರಗಳು ಧರೆಗೆ: ವಾಹನಗಳು ಜಖಂ
ಶಿವಾನಂದ ಸರ್ಕಲ್ ಬಳಿಯ ಕ್ರೆಸೆಂಟ್ ರಸ್ತೆಯಲ್ಲಿ ಬೃಹತ್ ಮರವೊಂದು ಬಿದ್ದ ಪರಿಣಾಮ ಒಂದು ಕಾರು, ಮೂರು ಬೈಕ್ ಹಾಗೂ ಒಂದು ಟ್ರಾವೆಲ್ಸ್ ಟಿಟಿ ವಾಹನ ಸಂಪೂರ್ಣ ಜಖಂಗೊಂಡಿವೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಜಯನಗರದಲ್ಲಿಯೂ ಸಾಲು ಸಾಲು ಬೈಕ್‌ಗಳು ಮತ್ತು ಬಸ್ ಮೇಲೆ ಮರ ಬಿದ್ದಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ಮುಂಭಾಗದಲ್ಲಿದ್ದ ಬೃಹತ್ ಕಟೌಟ್ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.ಇದನ್ನು ತೆರವುಗೊಳಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಡುವಂತಾಗಿತ್ತು.
58
ವಿಧಾನಸೌಧದ ಒಳಗೂ ನುಗ್ಗಿದ ಮಳೆ ನೀರು!
ನಗರದ ರಸ್ತೆಗಳಷ್ಟೇ ಅಲ್ಲದೆ, ಆಡಳಿತ ಕೇಂದ್ರ ವಿಧಾನಸೌಧವೂ ಮಳೆಯಿಂದ ತಪ್ಪಿಸಿಕೊಂಡಿಲ್ಲ. ವಿಧಾನಸೌಧದಲ್ಲಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಆಪ್ತ ಶಾಖೆಯ ಕಚೇರಿಗೆ ನೀರು ನುಗ್ಗಿದೆ. ಕಚೇರಿಯಲ್ಲಿದ್ದ ಪ್ರಮುಖ ಫೈಲ್ಗಳು, ಕಂಪ್ಯೂಟರ್‌ಗಳು ಮತ್ತು ಟೇಬಲ್‌ಗಳು ಮಳೆ ನೀರಿನಲ್ಲಿ ತೇಲುತ್ತಿರುವ ದೃಶ್ಯಗಳು ಕಂಡುಬಂದವು. ಇದು ನಗರದ ಒಳಚರಂಡಿ ವ್ಯವಸ್ಥೆಯ ವೈಫಲ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಮತ್ತೊಂದೆಡೆ ಚರ್ಚ್ ಸ್ಟ್ರೀಟ್‌ನಲ್ಲಿರುವ ಬುಕ್ ವಾರ್ಮ್ ಪುಸ್ತಕ ಮಳಿಗೆಯೊಳಗೆ ಮಳೆ ನೀರು ನುಗ್ಗಿದ್ದು 5000 ಕ್ಕೂ ಅಧಿಕ ಬೆಲೆಬಾಳುವ ಪುಸ್ತಕಗಳು ನೀರಿನಲ್ಲಿ ಒದ್ದೆಯಾಗಿ ಹಾಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
68
ಜಲಾವೃತವಾದ ರಸ್ತೆಗಳು – ಟ್ರಾಫಿಕ್ ಜಾಮ್
ಹೆಚ್.ಎಸ್.ಆರ್ ಲೇಔಟ್, ಸರ್ಜಾಪುರ ರಸ್ತೆ ಮತ್ತು ಶಾಂತಿನಗರದ ಕಾಮರಾಜ ರಸ್ತೆಯಲ್ಲಿ ಮಳೆ ನೀರು ಸೊಂಟದ ಮಟ್ಟಕ್ಕೆ ನಿಂತಿತ್ತು. ಆರ್ ಜೆ ಟೆಕ್ ಪಾರ್ಕ್ ಬಳಿ ದ್ವಿಚಕ್ರ ವಾಹನಗಳು ಅರ್ಧ ಮುಳುಗಡೆಯಾಗಿದ್ದವು. ಶಾಂತಿನಗರದಲ್ಲಿ ಕಾರೊಂದು ಮಳೆ ನೀರಿನ ನಡುವೆಯೇ ಲಾಕ್ ಆದಾಗ ಪ್ರಯಾಣಿಕರು ತಕ್ಷಣ ಇಳಿದು ಪ್ರಾಣ ಉಳಿಸಿಕೊಂಡರು. ಕಾರ್ಪೊರೇಷನ್, ಮೆಜೆಸ್ಟಿಕ್, ಹೆಬ್ಬಾಳ ಮತ್ತು ಶಾಂತಿನಗರದ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಂಡಿದ್ದರು.
78
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತಕ್ಕೆ 7 ಬಲಿ
ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಮಳೆಯ ಆರ್ಭಟಕ್ಕೆ ಕುಸಿದಿದೆ. ಆದರೆ, ಕಾಂಪೌಂಡ್‌ಗೆ ಹೊಂದಿಕೊಂಡಂತೆ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದವರ ಮೇಲೆ ಗೋಡೆ ಕುಸಿದು ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 7 ಜನರು ಮೃತಪಟ್ಟಿದ್ದಾರೆ.
88
ಬಿನ್ನಿಮಿಲ್ ಕಾಂಪೌಂಡ್ ಕುಸಿತ
ಬೆಂಗಳೂರಿನ ಮೆಜೆಸ್ಟಿಕ್ ಹತ್ತಿರದಲ್ಲೇ ಇರುವ ಗುಡ್‌ಶೆಡ್ ರಸ್ತೆಯಿಂದ ಬಿನ್ನಿಪೇಟೆ ಸಂಪರ್ಕಿಸುವ ರಸ್ತೆಯ ಬಳಿಯಿರುವ ಬಿನ್ನಿಮಿಲ್‌ನ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆ ಕುಸಿದಿದೆ. ಅದೃಷ್ಟವಶಾತ್ ಮಳೆ ಬರುವ ವೇಳೆ ಜನರು ಸಂಚಾರ ಮಾಡದ ಕಾರಣ ಯಾವುದೇ ಜೀವಹಾನಿ ಆಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ