ಗೋಕರ್ಣ ಪ್ರವಾಸಕ್ಕೆ ಹೊರಟಿದ್ದ ಬೆಂಗಳೂರಿನ ಐಟಿ ಉದ್ಯೋಗಿಗಳ ತಂಡ ಚಿತ್ರದುರ್ಗದ ಬಳಿ ಭೀಕರ ಬಸ್ ಅಪಘಾತಕ್ಕೆ ಸಿಲುಕಿದೆ. ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, 27 ವರ್ಷದ ಬಿಂದು ಮತ್ತು ಅವರ 8ವರ್ಷದ ಮಗಳು ಶ್ರೀಯಾ ನಾಪತ್ತೆಯಾಗಿದ್ದಾರೆ. ಕುಟುಂಬಸ್ಥರು ಅವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಚಿತ್ರದುರ್ಗದ ಬಳಿ ಸಂಭವಿಸಿದ ಭೀಕರ ಬಸ್ ದುರಂತವು ಬೆಂಗಳೂರಿನ ಮಾವಳ್ಳಿ ನಿವಾಸದ ಕುಟುಂಬ ಹಾಗೂ ಸಹದ್ಯೋಗಿಗಳ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ. ತಂಡದಲ್ಲಿದ್ದ ಕವಿತಾ ಎಂಬಾಕೆಯ ಮದುವೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಬ್ಯಾಚುಲರ್ ಪಾರ್ಟಿ ಮತ್ತು ಮತ್ತು ಕ್ರಿಸ್ಮಸ್ ರಜೆಯ ಪ್ರಯುಕ್ತ ಗೋಕರ್ಣ ಪ್ರವಾಸಕ್ಕೆ ಹೊರಟಿದ್ದ ಏಳು ಜನರ ತಂಡ ಅಪಘಾತಕ್ಕೆ ಸಿಲುಕಿದ್ದು, ಈ ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ 27 ವರ್ಷದ ಬಿಂದು ಹಾಗೂ ಆಕೆಯ 8ವರ್ಷದ ಪುತ್ರಿ ಶ್ರೀಯಾ ನಾಪತ್ತೆಯಾಗಿದ್ದು, ಅವರಿಗಾಗಿ ಕುಟುಂಬ ಹುಡುಕಾಟ ನಡೆಸುತ್ತಿದೆ.
25
ಟ್ರಿಪ್ ಗೂ ಮುನ್ನ ತೆಗೆದುಕೊಂಡ ಫೋಟೋ
ಬೆಂಗಳೂರಿನ ಮಾವಳ್ಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಕವಿತಾ ಹಾಗೂ ಮಂಜುನಾಥ್ ಸೇರಿದಂತೆ ಏಳು ಮಂದಿ ಗೋಕರ್ಣ ಪ್ರವಾಸಕ್ಕೆ ಹೊರಟಿದ್ದರು. ಮಂಜುನಾಥ್, ಕವಿತಾ, ದಿಲೀಪ್, ಸಂಧ್ಯಾ, ಶಶಾಂಕ್, ಬಿಂದು ಹಾಗೂ ಪುಟ್ಟ ಮಗು ಗ್ರೀಯಾ ಎಲ್ಲರೂ ಒಂದೇ ತಂಡವಾಗಿ ಪ್ರಯಾಣಿಸುತ್ತಿದ್ದರು. ಇವರಲ್ಲಿ ಹೆಚ್ಚಿನವರು ಐಟಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದು, ಸಹದ್ಯೋಗಿಗಳಾಗಿಯೇ ಈ ಪ್ರವಾಸವನ್ನು ಯೋಜಿಸಿದ್ದರು.
35
ದುರಂತದಲ್ಲಿ ಗಾಯಗೊಂಡ ಮಂಜುನಾಥ್
ಮಾವಳ್ಳಿಯಿಂದ ಮೂರು ದಿನಗಳ ಗೋಕರ್ಣ ಟ್ರಿಪ್‌ಗಾಗಿ ಹೊರಟಿದ್ದ ಈ ತಂಡ, ಮಧ್ಯರಾತ್ರಿ ಚಿತ್ರದುರ್ಗದ ಬಳಿ ನಡೆದ ಭೀಕರ ಬಸ್ ಅಪಘಾತಕ್ಕೆ ಸಿಲುಕಿತು. ಅಪಘಾತದಲ್ಲಿ ಮಂಜುನಾಥ್‌ಗೆ ಗಂಭೀರ ಗಾಯಗಳಾಗಿದ್ದು, ವಿಶೇಷವಾಗಿ ಸೊಂಟದ ಕೆಳಭಾಗ ಹಾಗೂ ಎಡ ಕಾಲಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ತಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ 24 ಗಂಟೆಗಳ ಕಾಲ ತೀವ್ರ ನಿಗಾ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಾಣಾಪಾಯ ಇಲ್ಲ ಎನ್ನುವ ಮಾಹಿತಿ ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ನೀಡಿದೆ. ಇನ್ನೂ ಅಪಘಾತದಲ್ಲಿ ಶಶಾಂಕ್ ಹಾಗೂ ಸಂಧ್ಯಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರೂ ವಿಠಲ್ ಮಲ್ಯ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಆದರೆ ಈ ದುರಂತದಲ್ಲಿ ಅತ್ಯಂತ ನೋವಿನ ಸಂಗತಿ ಎಂದರೆ, ಬಿಂದು ಹಾಗೂ ಆಕೆಯ 8 ವರ್ಷದ ಮಗಳು ಶ್ರೀಯಾ ಕುರಿತು ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ತಾಯಿ–ಮಗು ನಾಪತ್ತೆಯಾಗಿರುವ ಸುದ್ದಿ ಕುಟುಂಬಸ್ಥರನ್ನು ಕಂಗಾಲು ಮಾಡಿದೆ. ಬಿಂದುಗಾಗಿ ಕುಟುಂಬಸ್ಥರು ಆಸ್ಪತ್ರೆಗಳಿಂದ ಹಿಡಿದು ಅಪಘಾತ ಸ್ಥಳದವರೆಗೂ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಂಜುನಾಥ್ ಸಹೋದರ ದೀಪಕ್ ಮಾತನಾಡಿ, “ನಮ್ಮ ತಂಡದಲ್ಲಿ ಏಳು ಜನರಿದ್ದರು. ಮಂಜುನಾಥ್ ಹೊರತುಪಡಿಸಿ ಉಳಿದ ಆರು ಮಂದಿ ಸಂಬಂಧಿಕರು ಮತ್ತು ಆತ್ಮೀಯರು. ಬ್ಯಾಚುಲರ್ ಪಾರ್ಟಿ ಹಾಗೂ ರಜೆಯ ಕಾರಣ ಗೋಕರ್ಣಕ್ಕೆ ಹೊರಟಿದ್ದೆವು. ಈಗ ತಾಯಿ–ಮಗು ಕುರಿತು ಯಾವುದೇ ಮಾಹಿತಿ ಸಿಗದೇ ಇರುವುದು ನಮ್ಮನ್ನು ತೀವ್ರವಾಗಿ ಕಾಡುತ್ತಿದೆ,” ಎಂದು ಹೇಳಿದರು.
55
ಕವಿತಾ ತಂದೆ ಕಾಂತರಾಜು ಮಾಹಿತಿ
ಇನ್ನೊಂದೆಡೆ, ಕವಿತಾ ಕುಟುಂಬಕ್ಕೂ ಈ ಅಪಘಾತ ಭಾರೀ ಆಘಾತ ತಂದಿದೆ. ಕವಿತಾ ತಂದೆ ಕಾಂತರಾಜು ಮಾತನಾಡಿ, “ಫೆಬ್ರುವರಿಯಲ್ಲಿ ನನ್ನ ಮಗಳು ಕವಿತಾ ಮದುವೆ ನಿಗದಿಯಾಗಿತ್ತು. ಅದಕ್ಕಾಗಿ ರಜೆ ಸಮಯದಲ್ಲಿ ಕುಟುಂಬ ಹಾಗೂ ಸ್ನೇಹಿತರು ಸೇರಿ ಪ್ರವಾಸಕ್ಕೆ ಹೊರಟಿದ್ದರು. ಇಂದು ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಅಪಘಾತದ ವಿಷಯ ತಿಳಿಯಿತು. ಮಗಳು ಬಸ್‌ನಿಂದ ಜಿಗಿದ ಕಾರಣ ಸ್ವಲ್ಪ ನೋವು ಆಗಿದೆ ಎಂದು ಹೇಳಿದ್ದಾರೆ,” ಎಂದು ಮಾಹಿತಿ ನೀಡಿದ್ದಾರೆ. ಕವಿತಾ, ಮಂಜುನಾಥ್ ಹಾಗೂ ಇತರರು ಎಲ್ಲರೂ ಮಾವಳ್ಳಿ–ಶ್ರೀನಿವಾಸಪುರ ಭಾಗದವರಾಗಿದ್ದು, ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಸಂತಸದ ಪ್ರವಾಸವಾಗಿ ಆರಂಭವಾದ ಈ ಪ್ರಯಾಣ, ಕ್ಷಣಮಾತ್ರದಲ್ಲಿ ದುಃಖದ ದುರಂತವಾಗಿ ಮಾರ್ಪಟ್ಟಿದೆ.
ಚಿತ್ರದುರ್ಗ ಬಸ್ ದುರಂತದಲ್ಲಿ ತಾಯಿ–ಮಗು ನಾಪತ್ತೆ ಪ್ರಕರಣವು ಇನ್ನೂ ಆತಂಕದಲ್ಲಿದ್ದು, ಪೊಲೀಸ್ ಹಾಗೂ ರಕ್ಷಣಾ ತಂಡಗಳಿಂದ ಹುಡುಕಾಟ ಮುಂದುವರಿದಿದೆ. ಬಿಂದು ಹಾಗೂ ಪುಟ್ಟ ಗ್ರೀಯಾ ಸುರಕ್ಷಿತವಾಗಿ ಪತ್ತೆಯಾಗಲಿ ಎಂಬುದೇ ಇದೀಗ ಕುಟುಂಬಸ್ಥರು ಹಾಗೂ ಸಾರ್ವಜನಿಕರ ಪ್ರಾರ್ಥನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ