ಚಿತ್ರದುರ್ಗದ ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಖಾಸಗಿ ಬಸ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಬಸ್ ಸಂಪೂರ್ಣ ಹೊತ್ತಿ ಉರಿದಿದೆ. ಈ ದುರ್ಘಟನೆಯಲ್ಲಿ ಲಾರಿ ಚಾಲಕ ಸೇರಿದಂತೆ 9 ಮಂದಿ ಸಜೀವ ದಹನವಾಗಿದ್ದು, ಸುಟ್ಟು ಕರಕಲಾದ ಮೃತದೇಹ ಪತ್ತೆಗೆ ಪೊಲೀಸರು ಪರದಾಡುತ್ತಿದ್ದಾರೆ.
ಚಿತ್ರದುರ್ಗ (ಡಿ.25): ರಾಜ್ಯವನ್ನೇ ನಡುಗಿಸಿದ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಜವನಗೊಂಡನಹಳ್ಳಿ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ. ಕ್ರಿಸ್‌ಮಸ್ ರಜೆಗೆ ಹೊರಟಿದ್ದವರನ್ನು ಜವರಾಯ ಹೊತ್ತೊಯ್ದಿದ್ದಾನೆ. ನಿದ್ದೆ ಮಂಪರಿನಲ್ಲಿದ್ದವರು ಶಾಶ್ವತ ನಿದ್ದೆಗೆ ಜಾರಿದ್ದಾರೆ.
210
ಸ್ಲೀಪರ್ ಕೋಚ್ ಬಸ್ ಮತ್ತು ಲಾರಿ ನಡುವೆ ಡಿಕ್ಕಿ
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' (Sea Bird) ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಸ್ಲೀಪರ್ ಕೋಚ್ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ, ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಈ ದುರ್ಘಟನೆಯಲ್ಲಿ 9 ಮಂದಿ ಸಜೀವ ದಹನವಾಗಿದ್ದು, ಹಲವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
310
ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ ನೇರವಾಗಿ ಡಿಕ್ಕಿ
ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ್ದು, ‘ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್ (KA 01 AE 5217) ಸುಗಮವಾಗಿ ಸಂಚರಿಸುತ್ತಿತ್ತು. ಆದರೆ ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಡಿವೈಡರ್ ದಾಟಿ ಬಂದು ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೆಂಕಿ ಕಿಡಿ ಉಂಟಾಗಿ ಕ್ಷಣಾರ್ಧದಲ್ಲಿ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ’ ಎಂದು ವಿವರಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಲಾರಿ ಚಾಲಕ ಸೇರಿದಂತೆ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಮೃತ ದೇಹಗಳು ಗುರುತು ಹಿಡಿಯಲಾರದಷ್ಟು ಸುಟ್ಟು ಕರಕಲಾಗಿವೆ.
510
ಬಸ್ಸಿನಿಂದ ಎಂಟು ಮೃತದೇಹ ಪತ್ತೆ
ಬಸ್ಸಿನಿಂದ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿರುವುದರಿಂದ ಬೆಂಗಳೂರಿನಿಂದ ವಿಧಿವಿಜ್ಞಾನ ಮತ್ತು ಡಿಎನ್‌ಎ (DNA) ತಂಡಗಳನ್ನು ಕರೆಸಲಾಗಿದೆ' ಎಂದು ಐಜಿಪಿ ತಿಳಿಸಿದ್ದಾರೆ.
610
ಟ್ರಿಪ್‌ಗೆ ಹೊರಟಿದ್ದವರ ಆಕ್ರಂದನ
ಅಪಘಾತದ ಸಮಯದಲ್ಲಿ ಬಸ್ಸಿನಲ್ಲಿ ಬೆಂಗಳೂರಿನ ಮಾವಳ್ಳಿ ಭಾಗದ 7 ಮಂದಿ ಗೆಳೆಯರು ಗೋಕರ್ಣಕ್ಕೆ ಪ್ರವಾಸಕ್ಕೆ ಹೊರಟಿದ್ದರು. ದುರದೃಷ್ಟವಶಾತ್, ಈ ತಂಡದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
710
ಶೇ. 23ರಷ್ಟು ಸುಟ್ಟ ಗಾಯ
ಇನ್ನು 24 ವರ್ಷದ ಮಂಜುನಾಥ್ ಎಂಬುವವರು ಶೇ. 23ರಷ್ಟು ಸುಟ್ಟ ಗಾಯಗಳೊಂದಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಬರ್ನ್ ವಾರ್ಡ್‌ನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರ ಹೊಟ್ಟೆಯ ಕೆಳಭಾಗ ಸಂಪೂರ್ಣ ಸುಟ್ಟು ಹೋಗಿದೆ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
810
ಬದುಕುಳಿದವರ ಸಾಕ್ಷ್ಯ ನುಡಿ
ಅಪಘಾತದಿಂದ ಪ್ರಾಣಾಪಾಯದಿಂದ ಪಾರಾದ ಈಶಾ ಎಂಬುವವರ ತಾಯಿ ನಳಿನಿ ಮಾತನಾಡಿ, 'ನಮ್ಮ ಮಗಳು ಮತ್ತು ಆಕೆಯ ಸ್ನೇಹಿತರು ಕ್ರಿಸ್ಮಸ್ ರಜೆ ಹಿನ್ನೆಲೆ ಗೋಕರ್ಣಕ್ಕೆ ಹೋಗುತ್ತಿದ್ದರು.
910
ಅಪ್ಪರ್ ಸೀಟ್‌ನಿಂದ ಜಂಪ್
ಈಶಾ, ಅಮೃತ ಮತ್ತು ಅನಿರುದ್ಧ್ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಮಲಗಿದ್ದರಿಂದ, ಅಪಘಾತವಾದಾಗ ಅಪ್ಪರ್ ಸೀಟ್‌ನಿಂದ ಜಂಪ್ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಮುಂದಿನ ಸೀಟಿನಲ್ಲಿದ್ದವರು ಹೊರಬರಲಾಗದೆ ಬೆಂಕಿಗಾಹುತಿಯಾಗಿದ್ದಾರೆ' ಎಂದು ಕಣ್ಣೀರು ಹಾಕಿದ್ದಾರೆ.
1010
ಚಿಕಿತ್ಸೆ ಮತ್ತು ರಕ್ಷಣಾ ಕಾರ್ಯ:
ಗಾಯಾಳುಗಳಿಗೆ ಶಿರಾ ಮತ್ತು ಹಿರಿಯೂರು ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿದ್ದು, ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ