ಚಿತ್ರದುರ್ಗ ಬಸ್ ದುರಂತ: ಏ.28ಕ್ಕೆ ಮದುವೆ, ಎಲ್ಲಿದ್ದೀಯಮ್ಮಾ...ಫೋಟೋ ಹಿಡಿದುಕೊಂಡು ಆಸ್ಪತ್ರೆಯಲ್ಲಿ ಹಾಸನದ ಅಪ್ಪನ ಹುಡುಕಾಟ

Published : Dec 25, 2025, 12:27 PM IST

ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದ ನಂತರ, ಹಾಸನದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ನವ್ಯ ಮತ್ತು ಮಾನಸ ಕಣ್ಮರೆಯಾಗಿದ್ದಾರೆ. ಏಪ್ರಿಲ್‌ನಲ್ಲಿ ಮದುವೆ ನಿಗದಿಯಾಗಿದ್ದ ನವ್ಯ ಸೇರಿದಂತೆ ಮಕ್ಕಳಿಗೆ ಪೋಷಕರು ಆಸ್ಪತ್ರೆಗಳಲ್ಲಿ ಕಣ್ಣೀರಿನೊಂದಿಗೆ ಹುಡುಕಾಟ ನಡೆಸುತ್ತಿದ್ದಾರೆ.

PREV
15
ಮಕ್ಕಳನ್ನು ಕಾಣದೇ ಪೋಷಕರು ಕಂಗಾಲು

ಚಿತ್ರದುರ್ಗದ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತ ಪ್ರಕರಣವು ರಾಜ್ಯದಾದ್ಯಂತ ತೀವ್ರ ನೋವು ಮತ್ತು ಆತಂಕ ಮೂಡಿಸಿದೆ. ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಹಾಸನದ (Hassan) ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಕಣ್ಮರೆಯಾಗಿದ್ದಾರೆ. ಮಕ್ಕಳನ್ನು ಕಾಣದೇ ಪೋಷಕರು ಕಂಗಾಲಾಗಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನವ್ಯ ಮತ್ತು ಮಾನಸ ಅವರೇ ಅಪಘಾತದ ಬಳಿಕ ಪತ್ತೆಯಾಗದೆ ಇರುವ ಇಬ್ಬರು ಯುವತಿಯರು.

25
ಹಾಸನದ ಆತ್ಮೀಯ ಗೆಳತಿಯರು

ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿಯ ನಿವಾಸಿಯಾದ ನವ್ಯ ಹಾಗೂ ಚನ್ನರಾಯಪಟ್ಟಣದ ಮಾನಸ, ಇಬ್ಬರೂ ಆತ್ಮೀಯ ಗೆಳತಿಯರು. ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಟ್ಟಿಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ್ದ ಅವರು, ಬಳಿಕ ಬೆಂಗಳೂರಿನಲ್ಲಿ ಎಂಟೆಕ್ ಪೂರ್ಣಗೊಳಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಉದ್ಯೋಗ ಹಾಗೂ ಜೀವನದಲ್ಲಿ ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಿದ್ದ ಈ ಯುವತಿಯರು ಬೆಂಗಳೂರಿನಿಂದ ಬಸ್‌ನಲ್ಲಿ ಪ್ರಯಾಣ ಆರಂಭಿಸಿದ್ದರು. ಆದರೆ ಮಧ್ಯರಾತ್ರಿ ಚಿತ್ರದುರ್ಗದ ಬಳಿ ನಡೆದ ಭೀಕರ ಅಪಘಾತವು ಅವರ ಜೀವನದ ದಿಕ್ಕನ್ನೇ ಬದಲಿಸಿದೆ. ಅಪಘಾತದ ಬಳಿಕ ನವ್ಯ ಮತ್ತು ಮಾನಸ ಅವರ ಯಾವುದೇ ಸುಳಿವು ಲಭ್ಯವಾಗದೇ ಇರುವುದರಿಂದ, ಅವರ ಪೋಷಕರು ಆತಂಕದಲ್ಲಿ ಮುಳುಗಿದ್ದಾರೆ. ಮಗಳ ಫೋಟೋ ಹಿಡಿದುಕೊಂಡೇ ಆಸ್ಪತ್ರೆಯಿಂದ ಆಸ್ಪತ್ರೆಗೆ ನವ್ಯ ತಂದೆ ಮಂಜಪ್ಪ ಅಲೆದಾಡುತ್ತಿರುವ ದೃಶ್ಯಗಳು ಕಣ್ಣೀರು ತರಿಸುವಂತಿವೆ.

35
ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಹುಡುಕಾಟ

ಅಪಘಾತದ ಸುದ್ದಿ ತಿಳಿದ ತಕ್ಷಣವೇ ನವ್ಯ ತಂದೆ ಮಂಜಪ್ಪ ಹಾಗೂ ಮಾನಸ ತಾಯಿ ದ್ರಾಕ್ಷಾಯಣಿ ಅವರು ಚಿತ್ರದುರ್ಗದ ಹಿರಿಯೂರು ತಾಲೂಕು ಆಸ್ಪತ್ರೆಗೆ ಆಗಮಿಸಿ ತಮ್ಮ ಮಕ್ಕಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಪ್ರತಿ ವಾರ್ಡ್, ಪ್ರತಿ ಬೆಡ್‌ ಪರಿಶೀಲಿಸುತ್ತಾ, ಗಾಯಾಳುಗಳ ಪಟ್ಟಿ ನೋಡುತ್ತಾ, ಜೀವದಾಳದಲ್ಲಿ ಒಂದಾದರೂ ಸುಳಿವು ಸಿಗಬಹುದೆಂಬ ಭರವಸೆಯೊಂದಿಗೆ ಕಣ್ಣೀರಿಡುತ್ತಿದ್ದಾರೆ. ಸ್ನೇಹಿತೆ ಮಿಲನ ಅವರಿಂದ ಮಾಹಿತಿ ಪಡೆದುಕೊಂಡ ವೇಳೆ ಹೆತ್ತವರಿಗೆ ಬರಸಿಡಿಲು ಹೊಡೆದಂತಾಗಿದೆ “ಮಗಳು ಸುರಕ್ಷಿತವಾಗಿ ಮರಳಲಿ ಎಂಬುದೇ ನಮ್ಮ ಒಂದೇ ಪ್ರಾರ್ಥನೆ,” ಎಲ್ಲಿದ್ದಿಯಮ್ಮಾ.... ಎಂದು ಪೋಷಕರು ಅಳುತ್ತಿದ್ದಾರೆ.

45
ಸಿಗಂದೂರಿಗೆ ಹೊರಟಿದ್ದರು

ಬೆಳಿಗ್ಗೆ 7 ಗಂಟೆಗೆ ನಮಗೆ ವಿಷ್ಯ ತಿಳಿಯಿತು. ಮಿಲನಾ ಫೋನ್ ಮಾಡಿದ ಬಳಿಕ ನಮಗೆ ಗೊತ್ತಾಯ್ತು. ನವ್ಯಾ, ಮಾನಸಾ, ಮಿಲನಾ ಮೂವರು ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಮೂವರು ಒಟ್ಟಿಗೆ ಇಂಜಿನಿಯರಿಂಗ್ ಓದಿ, ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ರಜೆ ಇತ್ತು ಎಂಬ ಕಾರಣಕ್ಕೆ ಸಿಗಂದೂರಿಗೆ ಹೊರಟಿದ್ದರು. ನನಗೆ ಒಬ್ಬನೇ ಮಗ ಹಾಗೂ ಒಬ್ಬಳೇ ಮಗಳಿದ್ದಾಳೆ. ಎಪ್ರಿಲ್‌ನಲ್ಲಿ ನವ್ಯಾ ಮದುವೆ ಕೂಡ ಫಿಕ್ಸ್ ಆಗಿತ್ತು ಎಂದು ತಂದೆ ಮಂಜಪ್ಪ ಮಾಧ್ಯಮದವರ ಮುಂದೆ ಕಣ್ಣೀರಿಟ್ಟಿದ್ದಾರೆ.

55
ಏಪ್ರಿಲ್ 28ರಂದು ನವ್ಯ ಮದುವೆ

ನವ್ಯ ಜೀವನದ ಹೊಸ ಅಧ್ಯಾಯಕ್ಕೆ ಸಿದ್ಧವಾಗುತ್ತಿದ್ದಳು. ಇದೇ ಏಪ್ರಿಲ್ 28ರಂದು ನವ್ಯ ಮದುವೆ ನಿಗದಿಯಾಗಿತ್ತು ಎಂದು ತಂದೆ ಮಂಜಪ್ಪ ಕಣ್ಣೀರಿನಿಂದ ಹೇಳಿಕೊಂಡಿದ್ದಾರೆ. “ಮಗಳ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಇಂದು ಆಕೆಯ ಫೋಟೋ ಹಿಡಿದು ಆಸ್ಪತ್ರೆಗಳಲ್ಲಿ ಹುಡುಕಾಡಬೇಕಾದ ಸ್ಥಿತಿ ಬಂದಿದೆ,” ಎಂಬ ಅವರ ಮಾತುಗಳು ಕರಳು ಹಿಂಡುವಂತಿವೆ. ಈ ದುರ್ಘಟನೆಯು ಕೇವಲ ಅಪಘಾತವಷ್ಟೇ ಅಲ್ಲ, ಹಲವು ಕುಟುಂಬಗಳ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ. ನವ್ಯ ಮತ್ತು ಮಾನಸ ಸುರಕ್ಷಿತವಾಗಿ ಪತ್ತೆಯಾಗಲಿ ಎಂಬುದೇ ಎಲ್ಲರ ಪ್ರಾರ್ಥನೆಯಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories