ಚೆಲುವ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಸಚಿವ ಕೆ.ವೆಂಕಟೇಶ್ ಚಾಲನೆ

First Published | Oct 7, 2024, 10:09 PM IST

ಜಿಲ್ಲಾಕೇಂದ್ರದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವಕ್ಕೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ನಗರದಲ್ಲಿಂದು ವಿದ್ಯುಕ್ತ ಚಾಲನೆ ನೀಡಿದರು.  

ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್  ಸುವರ್ಣ  ನ್ಯೂಸ್ ,  ಚಾಮರಾಜನಗರ. 

ಮೊದಲಿಗೆ ನಗರದ ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಇತರೆ ಗಣ್ಯರು ವಿಶೇಷ ಪೂಜಾ ಕೈಂಕರ್ಯ ಕಾರ್ಯ ನೆರವೇರಿಸಿ ಜಿಲ್ಲಾ ದಸರಾ ಮಹೋತ್ಸವಕ್ಕೆ ಸಾಂಪ್ರಾದಾಯಿಕವಾಗಿ ಚಾಲನೆ ನೀಡಿದರು.

ಶ್ರೀ ಚಾಮರಾಜೇಶ್ವರ ದೇವಾಲಯಕ್ಕೆ ಆಗಮಿಸಿದ ಗಣ್ಯರು ಮೊದಲು ಚಾಮರಾಜೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ದೇವಾಲಯದ ಗರ್ಭಗುಡಿಯಲ್ಲಿರುವ ಉತ್ಸವಮೂರ್ತಿಯ ಜ್ಯೋತಿ ಬೆಳಗಿಸಿದರು. ಶ್ರೀ ಚಾಮುಂಡೇಶ್ವರಿ, ಶ್ರೀ ಕೆಂಪನಂಜಾಂಬ ದೇವಿ ಅಮ್ಮನವರಿಗೂ ಪೂಜಾ ಕಾರ್ಯ ನೆರವೇರಿಸಿದರು. ಬಳಿಕ ನಂದಿಧ್ವಜ ಕಂಬಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. 

ಬಳಿಕ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಗೆ ಸ್ವತಹ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಇತರೆ ಗಣ್ಯರು ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಅಲ್ಲದೆ ದೇವಾಲಯದ ಉದ್ಯಾನವನದಲ್ಲಿರುವ ಕನ್ನಡತಾಯಿ ಭುವನೇಶ್ವರಿ ದೇವಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ನೆರವೇರಿಸಿದರು.

ನಂತರ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿರುವ ಚಾಮರಾಜನಗರ ದಸರಾ ಮಹೋತ್ಸವದ ಮುಖ್ಯ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಡೊಳ್ಳು ಬಾರಿಸಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
 

Latest Videos


ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಆಚರಿಸಲಾಗುತ್ತಿರುವ ದಸರಾ ಮಹೋತ್ಸವಕ್ಕೆ ಸಂಭ್ರಮದ ಚಾಲನೆ ನೀಡಲಾಗಿದೆ. ಮೈಸೂರು ಅರಸರು ದಸರಾವನ್ನು ಕಳೆದ 400 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಮೈಸೂರಿನಿಂದ ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾಗಿ ವಿಭಜನೆಯಾದ ನಂತರ ಇಲ್ಲಿಯೂ ದಸರಾವನ್ನು ಮುಂದುವರೆಸುವ ನಿಟ್ಟಿನಲ್ಲಿ ಮೈಸೂರಿನ ಮಾದರಿಯಲ್ಲಿಯೇ ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
 

ಈ ಬಾರಿ ರಾಜ್ಯದೆಲ್ಲೆಡೆ ಸಾಕಷ್ಟು ಮಳೆಯಾಗಿದೆ. ಜಿಲ್ಲೆಯಲ್ಲಿಯೂ ಮಳೆ-ಬೆಳೆ ಚೆನ್ನಾಗಿ ಆಗಿರುವುದರಿಂದ ಚಾಮರಾಜನಗರದಲ್ಲಿಯೂ ಅದ್ದೂರಿ ದಸರಾ ಆಚರಿಸುವಂತೆ ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಈ ಬಾರಿ ಯುವದಸರಾ, ಮಹಿಳಾ ದಸರಾ, ರೈತದಸರಾ. ಪಾರಂಪರಿಕ ನಡಿಗೆ, ಮ್ಯಾರಥಾನ್ ಸೇರಿದಂತೆ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ, ರೂಪಿಸಿದೆ. ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಕಲಾವಿದರಿದ್ದಾರೆ. ದಸರಾ ಕಾರ್ಯಕ್ರಮಗಳಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಅವರೆಲ್ಲರಿಗೂ ಸಮಾನ ಅವಕಾಶಗಳನ್ನು ನೀಡಲಾಗಿದೆ. ಎಲ್ಲರೂ ಸೇರಿ ದಸರಾ ಯಶಸ್ವಿಗೊಳಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್ ಅವರು ತಿಳಿಸಿದರು...

click me!