ಚಕ್ರವರ್ತಿ ಸೂಲಿಬೆಲೆ ಪಿತೃವಿಯೋಗ, ಅಪ್ಪನ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಮಗ

Published : Sep 07, 2025, 12:26 PM IST

ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ತಂದೆ ದೇವದಾಸ್ ಸುಬ್ರಾಯ ಶೇಟ್ ನಿಧನರಾಗಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದ ಶೇಟ್ ಅವರು ಸೂಲಿಬೆಲೆ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಹಲವು ಗಣ್ಯರು ಸೂಲಿಬೆಲೆ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

PREV
14

ಖ್ಯಾತ ವಾಗ್ಮಿ, ಚಿಂತಕ, ಅಂಕಣಕಾರ, ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಜೊತೆಗೆ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಅವರಿಗೆ ಪಿತೃವಿಯೋಗವಾಗಿದೆ. ಅವರ ತಂದೆ ದೇವದಾಸ್ ಸುಬ್ರಾಯ ಶೇಟ್ (80) ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ದೇವದಾಸ್ ಸುಬ್ರಾಯ ಶೇಟ್ ಅವರು ತಮ್ಮ ಜೀವನವನ್ನು ಶಿಕ್ಷಣ ಸೇವೆಗೆ ಮೀಸಲಿಟ್ಟು, ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ದೀರ್ಘಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಶಿಸ್ತಿನ ಶಿಕ್ಷಕ, ಶ್ರಮಜೀವಿ ಹಾಗೂ ಸರಳ ಜೀವನಶೈಲಿಯೊಂದಿಗೆ ಅವರು ವಿದ್ಯಾರ್ಥಿಗಳಲ್ಲಿ ಪ್ರೇರಣೆಯ ಶಕ್ತಿಯಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಬೆಳೆದ ಅನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.

24

ತಂದೆಯ ಅಗಲಿಕೆಯಿಂದ ಮನಸ್ಸು ಮಿಡಿದ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾವನಾತ್ಮಕವಾಗಿ ತಮ್ಮ ಪಿತಾಜಿಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. "ಬದುಕಿನ ಪಯಣದಲ್ಲಿ ಶಾಶ್ವತವಾಗಿ ಯಾರೂ ಜೊತೆಗಿರಲಾರರು. ಆದರೆ ಕೆಲವರ ವಿಯೋಗ ಅನಿರೀಕ್ಷಿತ ಮತ್ತು ದುಃಖಮಯ. ಅಪ್ಪ ಇಂದು ಬೆಳಿಗ್ಗೆಯಷ್ಟೇ ಯಾತ್ರೆ ಮುಗಿಸಿ ಅಗಲಿದರು. ಕೆಲದಿನಗಳ ಶ್ವಾಸಕೋಶದ ಸಮಸ್ಯೆ ಅವರನ್ನು ಈ ಹಂತಕ್ಕೊಯ್ಯುವುದೆಂದು ನಾನೆಣಿಸಿರಲಿಲ್ಲ. ಅವರನ್ನು ಪ್ರೀತಿಸುವವರ ಬಹಳ ಮಂದಿ. ಎಲ್ಲರಿಗೂ ವಿಷಯ ಮುಟ್ಟಿಸುವುದು ಹೇಗೆ? ಅದಕ್ಕೇ ಇಲ್ಲಿ ಹಂಚಿಕೊಳ್ಳುತ್ತಿರುವೆ. ಅವರ ಸದ್ಗತಿ ಗೆ ಪ್ರಾರ್ಥಿಸಿಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.

34

ಈ ದುಃಖಕರ ಸುದ್ದಿ ತಿಳಿದು, ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಂಸದ ನಳೀನ್ ಕುಮಾರ್ ಕಟೀಲು ಸೇರಿದಂತೆ ಅನೇಕರು ಟ್ವೀಟ್ ಮೂಲಕ ತಮ್ಮ ದುಃಖವನ್ನು ಹಂಚಿಕೊಂಡು, ಚಕ್ರವರ್ತಿ ಸೂಲಿಬೆಲೆ ಹಾಗೂ ಅವರ ಕುಟುಂಬಕ್ಕೆ ಧೈರ್ಯ ಸಂದೇಶವನ್ನು ಕಳುಹಿಸಿದ್ದಾರೆ.

44

ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ ಅವರ ಜೀವನ ಹಾಗೂ ಸೇವೆಗೆ ತಂದೆ ದೇವದಾಸ್ ಸುಬ್ರಾಯ ಶೇಟ್ ಅವರ ದೀಕ್ಷೆ, ಸಂಸ್ಕಾರ ಮತ್ತು ತತ್ವಗಳು ಹಿನ್ನಲೆಯಲ್ಲಿ ನಿಂತಿದ್ದವು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಸೂಲಿಬೆಲೆ ಕುಟುಂಬಕ್ಕೆ ತಂದೆಯ ಅಗಲಿಕೆಯ ದುಃಖವು ಅಪಾರವಾದರೂ, ಅವರ ಬದುಕಿನ ಮೌಲ್ಯಗಳು ಹಾಗೂ ಬೋಧನೆಗಳು ಮುಂದಿನ ಪೀಳಿಗೆಯವರಿಗೂ ಬೆಳಕಿನ ದಾರಿಯಾಗಿರಲಿವೆ.

Read more Photos on
click me!

Recommended Stories