ಈ ಸಿನಿಮಾ ರೆಡಿ ಆಗುವುದು ಸ್ವಲ್ಪ ತಡವಾದಾಗ ಶನೀಲ್ ಅವರಿಗೆ ನನಗೆ ಈ ಪಾತ್ರ ಸಿಗುತ್ತದೆಯಾ ಎಂಬ ಅನುಮಾನವೂ ಕಾಡಿತ್ತು. ಒಟ್ಟೂ ಕಥೆ ರೆಡಿಯಾಗಿ ಆರು ವರ್ಷದ ಮೇಲೆ ಸುಫ್ರಂಸೋ ಸಿನಿಮಾ ರೆಡಿಯಾಯ್ತು, ರಿಲೀಸ್ ಆಯ್ತು. ಈ ಸಿನಿಮಾದಲ್ಲಿ ರವಿ ಅಣ್ಣ ದೊಡ್ಡ ಹೀರೋ ಅಲ್ಲ, ಅವನಿಗೆ ಸಿಕ್ಸ್ ಪ್ಯಾಕ್ ಇಲ್ಲ, ಆಡಂಬರದ ಬಿಲ್ಡಪ್ ಡೈಲಾಗ್ ಕೂಡ ಹೊಡೆಯೋದಿಲ್ಲ, ಇವನ ಏಟಿಗೆ ರೌಡಿಗಳೆಲ್ಲರೂ ದಿಕ್ಕಾಪಾಲಾಗಿ ಬೀಳೋದು ಕೂಡ ಇಲ್ಲ. ಅಲ್ಲಿ ಅವನಿಗೂ ಭಯವಾಗುತ್ತದೆ, ಅನುಮಾನಗಳು ಕಾಡುತ್ತವೆ, ಬೇರೆಯವರ ಜೊತೆ ಹೊಡೆದಾಟ ಮಾಡುವಾಗ ಪೆಟ್ಟಾಗುತ್ತದೆ, ಹುಡುಗಿ ನೋಡಿದಾಗ ನಾಚಿಕೆ ಆಗುತ್ತದೆ, ವಯಸ್ಸಾದ್ರೂ ಮದುವೆ ಆಗಿಲ್ಲ ಎಂದು ಮುಜುಗರ ಕೂಡ ಆಗುತ್ತದೆ.