ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರದ ಟ್ರೇಲರ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದಾರೆ. ಟ್ರೇಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಟ್ರೇಲರ್ ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮುಕ್ತ ಕಂಠದಿಂದ ಶ್ರೀಮುರಳಿಯವರನ್ನು ಮೆಚ್ಚಿಕೊಂಡರು. ‘ಶ್ರಮದಿಂದ ಕಲಿತಿದ್ದಿ, ಬೆವರು ಹರಿಸಿ ಅನುಭವ ಗಳಿಸಿದ್ದಿ. ಒಳ್ಳೆಯದಾಗಲಿ. ಟ್ರೇಲರ್ ಅದ್ಭುತವಾಗಿದೆ. ಸಿನಿಮಾ ಕೂಡ ಅದ್ಭುತವಾಗಿರಲಿದೆ ಎಂಬ ಸೂಚನೆ ನೀಡಿದೆ.
ಈ ಟ್ರೇಲರ್ ನೋಡಿದಾಗ ಇದೊಂದು ಸೆಂಟಿಮೆಂಟಲ್ ಆಕ್ಷನ್ ಥ್ರಿಲ್ಲರ್ ಅಂತ ಅನ್ನಿಸಿತು. ಸಿನಿಮಾ ಬಿಡುಗಡೆಯಾದಾಗ ಸಿನಿಮಾ ನೋಡಿ ಹೆಚ್ಚು ಮಾತನಾಡುತ್ತೇನೆ’ ಎಂದರು.
ನಿರ್ಮಾಪಕ ಉಮಾಪತಿಯವರು ಫ್ಯಾಮಿಲಿ ಚೆನ್ನಾಗಿಟ್ಟುಕೊಂಡರು ಒಳ್ಳೆಯ ಕೆಲಸಗಳನ್ನು ಮಾಡಬಹುದು ಎಂದು ಕುಟುಂಬಕ್ಕೆ ಗೆಲುವನ್ನು ಅರ್ಪಿಸಿದರು. ನಿರ್ದೇಶಕ ಮಹೇಶ್ ಅವಕಾಶ ಕೊಟ್ಟಎಲ್ಲರಿಗೂ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಮುನಿರತ್ನ ಚಿತ್ರತಂಡಕ್ಕೆ ಶುಭ ಹರಸಿದರು. ಕಲಾವಿದರಾದ ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ಆಶಿಕಾ ರಂಗನಾಥ್, ಧರ್ಮಣ್ಣ, ಗರುಡ ರಾಮ್, ಅನಿಲ್ ಮತ್ತು ಚಿತ್ರತಂಡ ಹಾಜರಿತ್ತು.