ಸ್ಯಾಂಡಲ್‌ವುಡ್‌ನಲ್ಲಿ ದಶಕವಾಳಿದ್ದು ರಚಿತಾ ಮಾತ್ರ, ಎಲ್ಲಿ ಹೋಗ್ತಿದ್ದಾರೆ ನಟಿಯರು?

First Published Apr 7, 2024, 5:22 PM IST

ರಶ್ಮಿಕಾ ಮಂದಣ್ಣ, ಶ್ರೀಲೀಲಾ ಜೊತೆಗೆ ಬಾಲಿವುಡ್‌ನಲ್ಲಿ ಮೆರೆಯುತ್ತಿರುವ ದೀಪಿಕಾ ಪಡುಕೋಣೆ ಸ್ಯಾಂಡಲ್‌ವುಡ್ ಸಿನಿಮಾಗಳಿಂದಲೇ ತಮ್ಮ ಸಿನಿ ಜರ್ನಿ ಆರಂಭಿಸಿದರೂ, ಕನ್ನಡ ಚಿತ್ರರಂಗಕ್ಕೆ ಬೈ ಹೇಳಿ ಬೇರೆಡೆ ಹೆಸರು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಕನ್ನಡ ಸಿನಿಮಾದಲ್ಲಿಯೇ ಮುಂದುವರಿಯುತ್ತಾರೆಂದು ಭರವಸೆ ಮೂಡಿಸಿದ ನಟಿಯರಲ್ಲಿ ಕೆಲವರು ಬೇರೆ ಭಾಷೆ ಇರಲಿ, ಕನ್ನಡದಲ್ಲಿಯೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವುದೇಕೆ ಎಂಬುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ. 
 

ಶ್ರೀನಿಧಿ ಶೆಟ್ಟಿ

ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಚಿತ್ರದಿಂದ ಯಶ್ ಹೆಸರು ಮಾಡಿದ್ದು ಅಷ್ಟಿಷ್ಟಲ್ಲ. ಆದರೆ, ಈ ಚಿತ್ರದ ನಟಿ ಶ್ರೀನಿಧಿ ಶೆಟ್ಟಿಗೆ ಅವಕಾಶ ಸಿಕ್ಕಿದ್ದು ಕಾಣಿಸುತ್ತಿಲ್ಲ. ಒಂದಿಬ್ಬರಲ್ಲ. ಕನ್ನಡದಲ್ಲಿ ಭರವಸೆ ಮೂಡಿಸುತ್ತಿರುವ ನಟಿಯರು ಹಲವರಿದ್ದರೂ, ಒಂದೇ ಚಿತ್ರಕ್ಕೆ ಸೀಮಿತವಾಗಿರುವುದೇಕೆ? ಅವಕಾಶಗಳೇಕೆ ಮರೀಚೀಕೆಯಾಗುತ್ತಿದೆ? 

ಸಪ್ತಮಿ ಗೌಡ

ಕಾಂತಾರ ಎಂಬ ಕನ್ನಡ ಚಿತ್ರವೊಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದು ಸುಳ್ಳಲ್ಲ. ಇದರಲ್ಲಿ ಲೀಲಾಳಾಗಿ ಅಭಿನಯಿಸಿದ ಸಪ್ತಮಿ ಗೌಡ ಅವರ ಯುವ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದರೂ, ಮುಂದೇನು ಎಂಬ ಸ್ಪಷ್ಟತೆ ಇಲ್ಲ. ಅಭಿಷೇಕ್ ಜೊತೆ ಕಾಳಿ ಚಿತ್ರಕ್ಕೂ ಸಹಿ ಮಾಡಿದ್ದು, ಶೂಟಿಂಗ್ ಎಲ್ಲೀವರೆಗೆ ಬಂತೆಂಬುದು ಗೊತ್ತಿಲ್ಲ.

ಅದ್ವಿತಿ ಶೆಟ್ಟಿ

ಧೀರ ಸಾಮ್ರಾಟ್, ಶುಗರ್ ಫ್ಯಾಕ್ಟರಿ, ಇರವಾನ್, ಫ್ಯಾನ್, ಕರಿಮೋಡ ಸರಿದು..ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿ, ತಮ್ಮದೇ ಫ್ಯಾನ್ ಬೇಸ್ ಸೃಷ್ಟಿಸಿಕೊಂಡ ಅದ್ವಿತಿ ಶೆಟ್ಟಿಗೆ ಹೊಸ ಚಿತ್ರಗಳಲ್ಲಿ ಹೇಳುವಂಥ ಅವಕಾಶಗಳು ಸಿಗುತ್ತಿಲ್ಲ. ಸಿಕ್ಕರೂ ಬಿಗ್ ಬಜೆಟ್‌ ಮೂವಿ ಸಿಗುವುದು ಕನಸಿನ ಮಾತು. 

ಶ್ರುತಿ ಹರಿಹರನ್

ಲೂಸಿಯಾದಂತ ವಿಶೇಷ ಚಿತ್ರಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಮಹಿಳಾ ಪ್ರಧಾನ ಚಿತ್ರವಾದ ನಾತಿಚರಾಮಿಯಂಥ ಚಿತ್ರಗಳಲ್ಲಿಯೂ ಅದ್ಭುತ ನಟನೆ ತೋರಿದ ನಟಿ ಶ್ರುತಿ ಹರಿಹರಿನ್. ಇವರೇನೂ ಕನ್ನಡತಿ ಅಲ್ಲ. ಆದರೂ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿ, ಮಿ ಟೂ ಆರೋಪದಿಂದಲೋ ಅಥವಾ ಮದುವೆ, ಮಗು ಆಗಿದ್ದಕ್ಕೋ ಗೊತ್ತಿಲ್ಲ. ಸೋಷಿಯಲ್ ಮೀಡಿಯಾ ಹೊರತುಪಡಿಸಿ, ಚಿತ್ರೋದ್ಯಮದಲ್ಲಿ ಹೆಸರು ಮಾಡುವಂಥ ಚಿತ್ರಗಳಲ್ಲಿ ನಟಿಸುವ ಅವಕಾಶವಂತೂ ಇವರಿಗೆ ಸಿಕ್ಕಿಲ್ಲ. 

ಆಶಾ ಭಟ್

ಸ್ಪೆಷಲ್ ಬ್ಯೂಟಿಯಿಂದ ರಾಬರ್ಟ್ ಚಿತ್ರದಲ್ಲಿ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡು ಭರವಸೆ ಮೂಡಿಸಿದ ನಟಿ ಆಶಾ ಭಟ್. ಉತ್ತಮ ಗಾಯಕಿಯೂ ಆಗಿರುವ ಇವರು ಸೋಷಿಯಲ್ ಮೀಡಿಯಾ ಮೂಲಕ ಆಗಾಗ ಸದ್ದು ಮಾಡುತ್ತಾರೆಯೇ ಹೊರತು, ಯಾವ ಚಿತ್ರದಲ್ಲಿಯೂ ಅವಕಾಶ ಸಿಗುತ್ತಿಲ್ಲ ಎನ್ನುವುದು ಕಟು ಸತ್ಯ. 

ರಚಿತಾ ರಾಮ್

2013ರಲ್ಲಿ ತೆರೆ ಕಂಡ ಬುಲ್ ಬುಲ್ ಚಿತ್ರದಲ್ಲಿ ಮೊದಲ ನಟಿಸಿ, ಇವತ್ತಿಗೂ ಭರಪೂರ ಅಂತ ಹೇಳಲಾಗದಿದ್ದಿರೂ ಕೆಲವು ಅವಕಾಶಗಳನ್ನು ಪಡೆಯುತ್ತಿರುವ ನಟಿಯರಲ್ಲಿ ಇವರೊಬ್ಬರೇ ಕಾಣಿಸುವುದು. ಇತ್ತೀಚೆಗೆ ನೀನಾಸಂ ಸತೀಶ್ ನಟಿಸಿದ ಮ್ಯಾಟ್ನಿ ಚಿತ್ರ ರಿಲೀಸ್ ಆಗಿ, ತಕ್ಕ ಮಟ್ಟಿಗೆ ಯಶಸ್ವಿಯೂ ಆಗಿದೆ. ಅಲ್ಲದೇ ಕನ್ನಡ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಪರಭಾಷೆಯಲ್ಲಿಯೂ ಅವಕಾಶ ಪಡೆದುಕೊಂಡಿದ್ದಾರೆ. 

ಆರಾಧನಾ

ಸ್ಯಾಂಡಲ್‌ವುಡ್‌ ಅನ್ನು ದಶಕಗಳ ಕಾಲ ಆಳಿದ ನಟಿಯರಲ್ಲಿ ಮಾಲಾಶ್ರೀ ಒಬ್ಬರು. ಮಾಸ್ ಚಿತ್ರಗಳಲ್ಲಿಯೂ ನಟಿಸಿ, ಅಭಿಮಾನಿಗಳನ್ನು ಉಳಿಸಿಕೊಂಡ ಸುರಸುಂದರಿ. ಒಳಗೆ ಸೇರಿದರೆ ಗುಂಡು ಎಂಬ ಹಾಡು ಕೇಳಿದರೆ ಸಾಕು, ಮಾಲಾಶ್ರೀಯೇ ಕಣ್ಣು ಮುಂದೆ ಬರುತ್ತಾರೆ. ಅಂಥ ಅದ್ಭುತ ನಟಿಯ ಮಗಳು ಆರಾಧನಾ ದರ್ಶನ್ ಜೊತೆ ‘ಕಾಟೇರ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಸೌಂದರ್ಯ, ನಟನೆ ಬಗ್ಗೆ ಎರಡು ಮಾತಿಲ್ಲ. ಆದರೆ, ಮುಂದಿನ ಚಿತ್ರದ ಬಗ್ಗೆ ಮಾತ್ರ ಯಾವುದೇ ಸುಳಿವೂ ಇಲ್ಲ.

ಅಮೃತಾ ಪ್ರೇಮ್

‘ನೆನಪಿರಲಿ’ ಪ್ರೇಮ್‍ ಮಗಳ ಮೊದಲ ಚಿತ್ರ ‘ಟಗರು ಪಲ್ಯ’ ತಕ್ಕಮಟ್ಟಿಗೆ ಹೆಸರು ಮಾಡುವಲ್ಲಿ ಯಸಸ್ವಿಯಾಯಿತು. ಇವರ ಅಭಿನಯದ ಬಗ್ಗೆಯೂ ಎಲ್ಲರೂ ಪಾಸಿಟಿವ್ ಆಗಿಯೇ ಮಾತನಾಡಿದ್ದರು. ಆದರೆ, ಮುಂದೇನು ಎಂಬ ಪ್ರಶ್ನೆ ಬಂದಾಗ ಮಾತ್ರ ನಿರುತ್ತರ ಆಗೋದು ಅನಿವಾರ್ಯ. ದೊಡ್ಡ ದೊಡ್ಡ ಬ್ಯಾನರ್ ಅಡಿಯಲ್ಲೇ ತಮ್ಮ ಸಿನಿ ವೃತ್ತಿ ಜೀವನ ಆರಂಭಿಸಿದರೂ ಉತ್ತಮ ಅವಕಾಶಗಳು ಮಾತ್ರ ಹೊಸ ನಟಿಯರಿಗೆ ಯಾಕೆ ಸಿಗುತ್ತಿಲ್ಲವೋ ಗೊತ್ತಿಲ್ಲ. 
 

ರೀಷ್ಮಾ ನಾಣಯ್ಯ

ಸ್ಯಾಂಡಲ್‌ವುಡ್‌ನಲ್ಲಿ ರೀಷ್ಮಾ ನಾಣಯ್ಯ, ಡಾ.ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮ್‍ಕುಮಾರ್‍, ಸಂಜನಾ ಆನಂದ್‍, ರುಕ್ಮಿಣಿ ವಸಂತ್‍, ಚೈತ್ರಾ ಆಚಾರ್, ಮೇಘಾ ಶೆಟ್ಟಿ ಸೇರೆ ಕೆಲವೇ ಕೆಲವು ನಟಿಯರು ಹೆಸರು ಕೇಳಿ ಬರುತ್ತಿದೆ. ಒಟ್ಟೊಟ್ಟಿಗೆ ಎರಡ್ಮೂರು ಚಿತ್ರಗಳನ್ನು ಮಾಡುತ್ತಿದ್ದರೂ, ಮುಂದೆ ಇವರಿಗೂ ಅತ್ಯುತ್ತಮ ಅವಕಾಶಗಳು ಸಿಗುತ್ತವೆ ಎನ್ನೋದು ಗ್ಯಾರಂಟಿ ಇಲ್ಲ. ವಾರದಲ್ಲಿ ಮೂರ್ನಾಲ್ಕು ಕನ್ನಡ ಚಿತ್ರಗಳು ತೆರೆ ಕಾಣುತ್ತಿದ್ದರೆ, ಮನಸ್ಸಿನಲ್ಲಿ ಛಾಪು ಮೂಡಿಸುವಲ್ಲಿ ಈ ನಟಿಯರು ವಿಫಲರಾಗುತ್ತಿರುವುದೆಲ್ಲಿ ಎನ್ನುವುದನ್ನು ಚಿತ್ರ ಪ್ರೇಮಿಗಳು ಕಂಡು ಹಿಡಿಯಬೇಕಾಗಿದೆ. 

click me!