ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಸೀರಿಯಲ್ ನಾಯಕ ಮತ್ತು ನಿರ್ಮಾಪಕ ಆಗಿರುವ ರಕ್ಷ್ ರಾಮ್ (Raksh Ram) ಇದೀಗ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಮುಹೂರ್ತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.
ಬರ್ಮ ಚಿತ್ರವನ್ನು ಬಹದ್ದೂರ್, ಭರ್ಜರಿ, ಭರಾಟೆ, ಜೇಮ್ಸ್ ಮೊದಲಾದ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ, ಖ್ಯಾತ ಗೀತರಚನೆಕಾರ ಚೇತನ್ ಕುಮಾರ್ (Chethan Kumar) ನಿರ್ದೇಶನ ಮಾಡುತ್ತಿದ್ದು,' ಚಿತ್ರದ ಮುಹೂರ್ತ ಸಮಾರಂಭ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.
ಬರ್ಮ ಚಿತ್ರಕ್ಕೆ ಚಿತ್ರರಂಗದ ಗಣ್ಯರು ಆಗಮಿಸಿ ಶುಭ ಕೋರಿದ್ದು ಚಿತ್ರದ ಮೊದಲ ಸನ್ನಿವೇಶಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ (Ashwini Punith Rajkumar) ಕ್ಲ್ಯಾಪ್ ಮಾಡಿದರು. ರಾಘವೇಂದ್ರ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು ಹಾಗೂ ನಟ ಧ್ರುವ ಸರ್ಜಾ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದರು.
ನಿರ್ಮಾಪಕ ಕೆ ಪಿ ಶ್ರೀಕಾಂತ್, ನಿರ್ದೇಶಕ ಎ ಪಿ ಅರ್ಜುನ್, ನಟ ಧೀರನ್ ರಾಮ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಬರ್ಮ ಚಿತ್ರದ ಮೂಲಕ ರಕ್ಷ್ ರಾಮ್ ಪತ್ನಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅಂದರೆ ಗಟ್ಟಿಮೇಳ ಸೀರಿಯಲ್ ನಿರ್ಮಾಣದ ಬಳಿಕ ಇದೀಗ ರಕ್ಷ್ ಮತ್ತು ಪತ್ನಿ ಈ ದೊಡ್ಡ ಬಜೆಟ್ ನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸಿನಿಮಾ ಕುರಿತು ಮಾತನಾಡಿದ ನಿರ್ದೇಶಕರಾದ ಚೇತನ್ ಕುಮಾರ್ ಇದು ನನ್ನ ನಿರ್ದೇಶನದ ಐದನೇ ಚಿತ್ರ. ಬರ್ಮ ಅಂದರೆ ಬ್ರಹ್ಮ ನ ಜಾಗ ಮತ್ತು ಒಂದು ದೇಶದ ಹೆಸರು ಹೌದು. ಈ ಹೆಸರು ಸಿನಿಮಾಕ್ಕೆ ಸೂಕ್ತವಾಗಿದೆ. ಆದುದರಿಂದ ಸಿನಿಮಾಕ್ಕೆ ಈ ಹೆಸರನ್ನಿಡಲಾಗಿದೆ ಎಂದಿದ್ದಾರೆ.
ಅಷ್ಟೇ ಅಲ್ಲ ಈ ಸಿನಿಮಾ ಕನ್ನಡ ಸೇರಿದಂತೆ ಐದು ಇತರ ಭಾಷೆಗಳಲ್ಲೂ ಸಹ ಮೂಡಿ ಬರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಜೊತೆಗೆ ಈಗಾಗಲೇ ಐದು ಭಾಷೆಗಳ ಆಡಿಯೋ ರೈಟ್ಸ್ ನ್ನು ಬೀಟ್ಸ್ ಸಂಸ್ಥೆ ಪಡೆದುಕೊಂಡಿದೆ ಎನ್ನಲಾಗಿದೆ.
ಇನ್ನು ಈ ಚಿತ್ರಕ್ಕೆ ವಿ.ಹರಿಕೃಷ್ಣ (V Harikrishna) ಸಂಗೀತ ನೀಡುತ್ತಿದ್ದಾರೆ. ಸಂಕೇತ್ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಮಾಡಲಿದ್ದಾರೆ. ಮುಂದಿನ ತಿಂಗಳಿಂದ ಸಿನಿಮಾ ಆರಂಭವಾಗಲಿದೆ.
ಆಕ್ಷನ್ ಎಂಟರ್ ಟೈನರ್ (Action entertainer) ಚಿತ್ರ ಇದಾಗಿದ್ದು, ಅಕ್ಟೋಬರ್ 3 ರಿಂದ ಮಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಆದಿತ್ಯ ಮೆನನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಬೇರೆ ಭಾಷೆಯ ಜನಪ್ರಿಯ ನಟರು ಸಹ ನಟಿಸುತ್ತಿದ್ದಾರಂತೆ.
ಇನ್ನೂ ಇಲ್ಲಿವರೆಗೆ ಚಿತ್ರತಂಡ ಸಿನಿಮಾದ ನಾಯಕಿ ಯಾರು? ಎನ್ನುವ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ. ಯಾರಾಗಲಿದ್ದಾರೆ ಎಂದು ಕಾದು ನೋಡಬೇಕು. ಜೊತೆಗೆ ರಕ್ಷ್ ನಟನೆಯ ಸಿನಿಮಾ ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲ ಜನರಲ್ಲಿ ಮನೆ ಮಾಡಿದೆ.