‘ಹೆಸರು ರಾಜ್ ಬಿ ಶೆಟ್ಟಿ ಅಂತ.. ಸೋಲ್ ಸ್ಟಾರ್!’ ಅರ್ಜುನ್ ಜನ್ಯ ನಿರ್ದೇಶನದ, ರಮೇಶ್ ರೆಡ್ಡಿ ನಿರ್ಮಾಣದ ‘45’ ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ಹೀಗೊಂದು ಘೋಷಣೆಯಾಯಿತು. ಅದಕ್ಕೂ ಮುನ್ನ ಅರ್ಜುನ್ ಜನ್ಯ, ‘ನಾನು ಟೀಸರ್‌ನಲ್ಲಿ ರಾಜ್ ಬಿ ಶೆಟ್ಟಿ ಅವರಿಗೆ ಒಂದು ಟೈಟಲ್ ಕೊಟ್ಟಿದ್ದೆ.
ಅದನ್ನು ನೋಡಿದ ರಾಜ್ ಶೆಟ್ಟಿ, ನೀವು ಅದನ್ನು ತೆಗೀಲಿಲ್ಲ ಅಂದರೆ ನಾನು ಟೀಸರ್ ಲಾಂಚ್‌ಗೆ ಬರಲ್ಲ ಅಂದು ಬಲವಂತದಿಂದ ತೆಗೆಸಿದರು’ ಎಂದರು. ಆಗ ಮೈಕ್ ಎಳೆದುಕೊಂಡ ಶಿವರಾಜ್ ಕುಮಾರ್, ‘ರಾಜ್ ಬಿ ಶೆಟ್ಟಿ ಸೋಲ್ ಸ್ಟಾರ್’ ಎಂದು ಘೋಷಿಸಿದರು.
ಶಿವಣ್ಣನ ಕಾಲಿಗೆ ನಮಸ್ಕರಿಸಿ ಈ ಬಿರುದನ್ನು ನಿರಾಕರಿಸಿದ ರಾಜ್ ಶೆಟ್ಟಿ, ‘ಶಿವಣ್ಣ ಹಾಗೂ ಉಪೇಂದ್ರ ಅವರಷ್ಟೇ ಸ್ಟಾರ್‌ಗಳು. ನಾನೊಬ್ಬ ಆಕ್ಟರ್ ಅಷ್ಟೇ. ಇಂಡಸ್ಟ್ರಿಗೆ ಬಂದು ಏಳೆಂಟು ವರ್ಷ ಆಗಿದೆ.
ಅಂಥಾ ಸ್ಟಾರ್‌ಗಳ ಸಿನಿಮಾದಲ್ಲಿ ನಟಿಸಬೇಕು ಎಂದು ಕರೆದಾಗ ಒಂಥರಾ ನಾಚಿಕೆಯಾಗಿ ತಪ್ಪಿಸಿಕೊಳ್ಳಲು ನೋಡಿದೆ. ಆದರೆ ಈಗ ಈ ಸಿನಿಮಾ ಬೆಳೆದಿರುವ ರೀತಿ ನೋಡಿ ನನಗೆ ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ಬಹಳ ಸಂತೋಷವಾಗುತ್ತಿದೆ’ ಎಂದರು.
ಶಿವರಾಜ್ ಕುಮಾರ್, ‘ಅರ್ಜುನ್ ಜನ್ಯ ಹೇಳಿದ ಕಥೆ ಕೇಳಿ ಥ್ರಿಲ್ ಆಗಿದ್ದೆ. ಕಥೆ ಕೊಟ್ಟು ಬಿಡುತ್ತೇನೆ ಯಾರಾದರೂ ನಿರ್ದೇಶನ ಮಾಡಲಿ ಎಂದು ಅರ್ಜುನ್ ಜನ್ಯ ಹೇಳಿದ್ದರು. ನೀವು ಕಥೆ ಚೆನ್ನಾಗಿ ಹೇಳಿದ್ದೀರಾ. ನೀವೇ ನಿರ್ದೇಶನ ಮಾಡಿ ಅಂದೆ. ನಿರ್ಮಾಣಕ್ಕೆ ರಮೇಶ್ ರೆಡ್ಡಿ ಮುಂದಾದರು.
‘45’ ಚಿತ್ರ ಭಾರತದಾದ್ಯಂತ ಹೆಸರು ಮಾಡುವ ವಿಶ್ವಾಸವಿದೆ’ ಎಂದರು. ಉಪೇಂದ್ರ, ‘ಈ ಸಿನಿಮಾ ಖಂಡಿತಾ ಯಶಸ್ವಿಯಾಗುತ್ತದೆ. ಮುಂದಿನ ಸಿನಿಮಾವನ್ನು ಅರ್ಜುನ್ ಜನ್ಯ ಕನ್ನಡ ಚಿತ್ರರಂಗದಲ್ಲೇ ನಿರ್ದೇಶನ ಮಾಡಬೇಕು’ ಎಂದರು.
ನಿರ್ದೇಶಕ ಅರ್ಜುನ್ ಜನ್ಯ, ‘ನಾವು ‘45’ ಎನ್ನುವ ಶೀರ್ಷಿಕೆಯನ್ನು ಸುಮ್ಮನೆ ಇಟ್ಟಿಲ್ಲ. ಚಿತ್ರದ ಟೀಸರ್‌ನಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದ್ದೇವೆ. ಅದು ಏನು ಎನ್ನುವುದನ್ನು ಪ್ರೇಕ್ಷಕರೇ ಗೆಸ್ ಮಾಡಲಿ’ ಎಂದರು.