ಬೆಂಗಾಲಿ ಭಾಷೆಯ ನಟ ವಿನಾಯಕ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಈಗಾಗಲೇ ‘ಯುಐ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಇವರು ಮುಂದೆ ಕನ್ನಡ ಸಿನಿಮಾಗಳಲ್ಲಿ ನಟಿಸುವ ಉದ್ದೇಶ ಹೊಂದಿದ್ದಾರೆ.
ಅಂದಹಾಗೆ ಇವರು ಪ್ರಿಯಾಂಕ ಉಪೇಂದ್ರ ಅವರ ಸಹೋದರ. ಬೆಂಗಾಲಿ ಭಾಷೆಯ 21 ಚಿತ್ರಗಳಲ್ಲಿ ವಿವೇಕ್ ತ್ರಿವೇದಿ ಹೆಸರಿನಲ್ಲಿ ನಾಯಕನಾಗಿ ನಟಿಸಿರುವ ಅವರು ಈಗ ಅಕ್ಕ ಪ್ರಿಯಾಂಕರಿಂದ ಕನ್ನಡ ಕಲಿಯುತ್ತಿದ್ದಾರೆ.
ಈ ಕುರಿತು ವಿನಾಯಕ್, ಅಕ್ಕನೇ ನನಗೆ ರೋಲ್ ಮಾಡೆಲ್. ಯುಐ ಚಿತ್ರದಲ್ಲಿ ನಟಿಸಿದ್ದು ಅವಿಸ್ಮರಣೀಯ ಅನುಭವ. ಆ್ಯಕ್ಷನ್ ಸಿನಿಮಾಗಳ ಕುರಿತು ಒಲವಿದೆ. ಮುಂದೆ ಒಳ್ಳೆ ಪಾತ್ರಗಳು ಸಿಗಬಹುದೆಂಬ ಭರವಸೆ ಇದೆ.
ನಾನು ಬಂಗಾಲಿ ಭಾಷೆಯಲ್ಲಿ ಹೀರೋ ಆಗಿ ಅಭಿನಯಿಸಿದ್ದೇನೆ. 21 ಚಿತ್ರಗಳಲ್ಲಿ ಈಗಾಗಲೇ ಅಭಿನಯಿಸಿದ್ದೇನೆ. 2 ಸೀರಿಯಲ್‌ಗಳಲ್ಲೂ ನಟಿಸಿದ್ದೇನೆ. ಆದರೂ ವಿಲನ್ ಆಗಿ ನಟಿಸೋಕೆ ಬೇಸರ ಏನೂ ಇಲ್ಲ. ಪಾತ್ರ ಮತ್ತು ಅಭಿನಯ ಅಂತ ಬಂದ್ರೆ, ಒಬ್ಬ ಕಲಾವಿದನಿಗೆ ಯಾವುದೇ ಬ್ಯಾರಿಯರ್ಸ್ ಇರೋದಿಲ್ಲ.
ಯುಐ ಚಿತ್ರದಲ್ಲಿ ನಾನು ನೆಗೆಟಿವ್ ರೋಲ್ ಮಾಡಿದ್ದೇನೆ ಅಂತ ಬೇಸರವಿಲ್ಲ. ತುಂಬಾನೆ ಎಂಜಾಯ್ ಮಾಡಿದ್ದೀನಿ. ಇಡೀ ಶೂಟಿಂಗ್ ಪ್ರೊಸೆಸ್ ತುಂಬಾ ಚೆನ್ನಾಗಿತ್ತು. ಪ್ರತಿದಿನ ಉಪೇಂದ್ರ ಸರ್ ಜೊತೆಗೆ ಶೂಟಿಂಗ್ ಹೋಗಿ, ಅವರ ಜೊತೆಗೇನೆ ವಾಪಾಸ್ ಬರ್ತಿದ್ದೆ.
ಪ್ರಿಯಾಂಕಾ ತಮ್ಮ ಎಂದು ಸ್ಪೆಷಲ್ ಟ್ರೀಟ್‌ಮೆಂಟ್ ಏನೂ ಇರಲಿಲ್ಲ. ಎಲ್ಲ ಕಲಾವಿದರಿಗೆ ಯಾವ ರೀತಿ ಟ್ರೀಟ್ ಮಾಡ್ತಾರೋ ಅದೇ ರೀತಿನೇ ನನ್ನಿಂದಲೂ ಕೆಲಸ ತೆಗೆಸಿಕೊಂಡಿದ್ದಾರೆ.
ಇನ್ನು ಉಪೇಂದ್ರ ತುಂಬಾನೆ ಡಿಫರಂಟ್. ಇವರ ಜೊತೆಗೆ ಕೆಲಸ ಮಾಡೊ ಖುಷಿನೇ ಬೇರೆ. ವಿಶೇಷವಾಗಿ ಉಪೇಂದ್ರ ಅವರ ಈ ಹಿಂದಿನ ಉಪ್ಪಿ-2 ಚಿತ್ರದಲ್ಲೂ ನಾನು ಅಭಿನಯಿಸಿದ್ದೇನೆ. ಸದ್ಯ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೀನಿ ಎನ್ನುತ್ತಾರೆ.