‘ನನ್ನ ಅಭಿನಯದ ‘ಮಾರ್ಟಿನ್’ ಚಿತ್ರದ ಮುಂದುವರಿದ ಭಾಗ ಖಂಡಿತಾ ಬರಲಿದೆ. ಪಾರ್ಟ್ 2 ಕತೆಗೆ ‘ರೈನೊ’ ಹೆಸರೇ ಇರುತ್ತದೆ. ‘ರೈನೊ’ ಯಾವಾಗ ಬರುತ್ತದೆ ಎಂಬುದನ್ನು ಮುಂದೆ ಹೇಳುತ್ತೇವೆ.’ಹೀಗೆ ಹೇಳಿಕೊಂಡಿದ್ದು ನಟ ಧ್ರುವ ಸರ್ಜಾ ಅವರದು. ‘ಕೆಡಿ’ ಚಿತ್ರದ ಪ್ರಚಾರ ಕಾರ್ಯದ ಭಾಗವಾಗಿ ಮಾಧ್ಯಮಗಳ ಮುಂದೆ ಬಂದ ಧ್ರುವ ಸರ್ಜಾ ಹೇಳಿದ ಮಾತುಗಳು ಇಲ್ಲಿವೆ.
1. ‘ಮಾರ್ಟಿನ್’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನನ್ನ ಪಾತ್ರ ರೈನೊ ಎನ್ನುವ ಹೆಸರಿನೊಂದಿಗೆ ಮುಗಿಯುತ್ತದೆ. ಈಗ ಅದೇ ಹೆಸರಿನಲ್ಲಿ ‘ಮಾರ್ಟಿನ್’ ಪಾರ್ಟ್ 2 ಕತೆ ಬರಲಿದೆ. ‘ರೈನೊ’ ಎನ್ನುವ ಹೆಸರು ಕೊಟ್ಟಿದ್ದೇ ನಿರ್ಮಾಪಕ ಉದಯ್ ಮೆಹ್ತಾ ಅವರು. ಅವರದ್ದೇ ಬ್ಯಾನರ್‌ನಲ್ಲಿ ಈ ಚಿತ್ರ ಬರಲಿದೆ.
2. ‘ರೈನೊ’ ಸಿನಿಮಾ ಯಾವಾಗ ಬರಲಿದೆ ಎಂಬುದಕ್ಕೆ ನೀವು ನಿರ್ದೇಶಕರನ್ನು ಕೇಳಬೇಕು. ಆದರೆ, ಈಗ ನಾನು ಒಪ್ಪಿಕೊಂಡಿರುವ ಸಿನಿಮಾಗಳು ಮುಗಿದ ಕೂಡಲೇ ‘ರೈನೊ’ಗೆ ಚಾಲನೆ ಕೊಡಲಿದ್ದೇವೆ.
3. ನನ್ನ ಚಿತ್ರಗಳಲ್ಲಿ ಅಥವಾ ನನ್ನಿಂದ ಹೆಚ್ಚಾಗಿ ಡೈಲಾಗ್ ಇಷ್ಟಪಡುತ್ತಾರೆ, ಕೌಟುಂಬಿಕ ಕತೆ ಇರಬೇಕು ಅಂತ ಬಯಸುತ್ತಾರೆ. ‘ಮಾರ್ಟಿನ್’ ಹೊಸ ಪ್ರಯೋಗ ಅಂತ ಮಾಡಿದ್ವಿ. ಇಷ್ಟಪಡದೆ ಇರುವವರು ನಮ್ಮನ್ನು ಇಷ್ಟಪಡಬೇಕು ಅಂತಲೇ ನಾವು ಸಿನಿಮಾ ಮಾಡಬೇಕು.
4. ತುಂಬಾ ನಿರ್ದೇಶಕರ ಬಳಿ ಕತೆ ಕೇಳುತ್ತಿದ್ದೇನೆ. ಅದೇ ರೀತಿ ‘ಕೆರೆಬೇಟೆ’ ಚಿತ್ರದ ನಿರ್ದೇಶಕ ರಾಜ್ ಗುರು ಅವರ ಬಳಿಯೂ ಕತೆ ಕೇಳಿದ್ದೇನೆ. ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
5. ಇನ್ನು ಮುಂದೆ ವರ್ಷಕ್ಕೆ ನನ್ನ ನಟನೆಯಲ್ಲಿ ಎರಡ್ಮೂರು ಸಿನಿಮಾಗಳು ಬರಲಿವೆ. ‘ಕೆಡಿ’ ನಂತರ ಮತ್ತೊಂದು ಸಿನಿಮಾ ಕೂಡಲೇ ಶುರುವಾಗಲಿದೆ.
6. ನಾನು ಕತೆ ಕೇಳಿದ ಮೇಲೆಯೇ ಅರ್ಜುನ್ ಸರ್ಜಾ ಅವರು ಕತೆ ಕೇಳುತ್ತಾರೆ. ಒಂದು ವೇಳೆ ನನಗೆ ಗೊತ್ತಾಗುತ್ತಿಲ್ಲ ಎಂದಾಗ ಮಾತ್ರ ಮೊದಲು ಅವರು ಕತೆ ಕೇಳುತ್ತಾರೆ.
7. ನನ್ನ ಮತ್ತು ಅರ್ಜುನ್ ಸರ್ಜಾ ಅವರ ಕಾಂಬಿನೇಶನ್‌ನಲ್ಲಿ ಸಿನಿಮಾ ಬರೋದು ಪಕ್ಕಾ. ಈ ಸಿನಿಮಾ ನಮ್ಮದೇ ಬ್ಯಾನರ್‌ನಲ್ಲಿ ಬರಲಿದೆ. ಸದ್ಯದಲ್ಲೇ ಆ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ.