ಕನ್ನಡ ಸೇರಿ ದಕ್ಷಿಣ ಭಾರತೀಯ ಚಿತ್ರಗಳಲ್ಲಿ ಜನಪ್ರಿಯರಾಗಿರುವ ನಟಿ ಶ್ರುತಿ ಹರಿಹರನ್, ನಾಲ್ಕು ವರ್ಷಗಳ ಹಿಂದೆ ತಮಗೆ ಆದ ಅಹಿತಕರ ಅನುಭವವವೊಂದನ್ನು ಇದೀಗ ಬಹಿರಂಗಪಡಿಸಿದ್ದಾರೆ, ಇದು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿದೆ.
ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿರುವ ಶ್ರುತಿ ಹರಿಹರನ್, ಮೀ ಟೂ ವಿವಾದದ ಸಂದರ್ಭದಲ್ಲಿ, ನಟ ಅರ್ಜುನ್ ಸರ್ಜಾ 'ವಿಸ್ಮಯ' ಚಿತ್ರದಲ್ಲಿ ನಟಿಸುವಾಗ ತಬ್ಬಿಕೊಂಡಿದ್ದಾರೆಂದು ಆರೋಪಿಸಿದ್ದರು. ಈ ಸಂಬಂಧ ಪೊಲೀಸರಿಗೂ ದೂರು ನೀಡಲಾಗಿತ್ತು. ನ್ಯಾಯಾಲಯದ ಮೆಟ್ಟಿಲೇರಿದ್ದ ಈ ಪ್ರಕರಣ ನಂತರ ಅರ್ಜುನ್ ಸರ್ಜಾ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ವಜಾಗೊಂಡಿತು. ಇದಾದ ನಂತರ ಈಗ ಐವರು ತಮಿಳು ಚಿತ್ರ ನಿರ್ಮಾಪಕರು ತಮ್ಮ ಮೇಲೆ ಬಲೆ ಬೀಸಿದ್ದರೆಂದು ಹೇಳುವ ಮೂಲಕ ಕಾಲಿವುಡ್‌ನಲ್ಲೂ ತಲ್ಲಣ ಸೃಷ್ಟಿಸಿದ್ದಾರೆ ಲೂಸಿಯಾ ನಟಿ.
ನಾಲ್ಕು ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು ಎಂದು ಹೇಳಿರುವ ಶ್ರುತಿ, ತಮಿಳು ಚಿತ್ರವೊಂದರ ನಿರ್ದೇಶಕರ ತಮಗೆ ಅವರ ಚಿತ್ರದಲ್ಲಿ ನಟಿಸಲು ಆಫರ್ ಕೊಟ್ಟಿದ್ದರು. ಇದರಿಂದ ಫುಲ್ ಎಕ್ಸೈಟ್ ಆಗಿದ್ದೆ. ಆದರೆ, ಚಿತ್ರಕ್ಕೆ ಐವರು ನಿರ್ಮಾಪಕರಿದ್ದು, ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಬಹುದು ಎಂದು ಹೇಳಿದ್ದು ಶಾಕ್ ಆಗಿತ್ತು. ಅದೆಲ್ಲಿತ್ತೋ ಸಿಟ್ಟು. ಇಂಥದ್ದೊಂದು ದುರುದ್ದೇಶವಿದ್ದರೆ, ಕಾಲಲ್ಲಿರೋದು ಕೈಯಿಗೆ ಬರಬೇಕಾಗುತ್ತದೆ ಎಂದೆ, ಎಂದಿದ್ದಾರೆ ನಾತಚರಾಮಿ ನಟಿ ಶ್ರುತಿ. ಆಮೇಲೆ ಬಹುತೇಕ ಕನ್ನಡದಲ್ಲಿ ಆದಂತೆ, ತಮಿಳಿನಲ್ಲಿಯೂ ಅವಕಾಶಗಳು ಪೂರ್ತಿ ಕಡಿಮೆಯಾಯಿತು. ಏನೇ ಆಗಲಿ 'ಇಲ್ಲ' ಎಂದು ಹೇಳುವ ಧೈರ್ಯ ಮಹಿಳೆಯರಿಗೆ ಇರಬೇಕು ಎಂದೂ ಶ್ರುತಿ ಹೇಳಿದ್ದಾರೆ.
ಕೇರಳದಲ್ಲಿ ಹೇಮಾ ಸಮಿತಿ ವರದಿ ಹೊರಬಿದ್ದ ನಂತರ, ಅನೇಕ ನಟಿಯರು ಚಿತ್ರರಂಗದಲ್ಲಿ ತಮಗೆ ಆಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ನಟಿ ಶ್ರುತಿ ಹರಿಹರನ್ ಕೂಡ ಅಂಥ ಕುಕೃತ್ಯದ ವಿರುದ್ಧ ಧ್ವನಿ ಎತ್ತಿದ್ದು, ಕಾಲಿವಡ್‌ನಲ್ಲಿ ಚರ್ಚೆಯಾಗುವಂತೆ ಮಾಡಿದೆ.