ವಿಷ್ಣುವರ್ಧನ್‌ ಜೊತೆಗೆ ಬಿರುಕು ಮೂಡಿದ್ಯಾಕೆ? ದಾದಾ ಬಗ್ಗೆ ದ್ವಾರಕೀಶ್ ನಿಜವಾಗ್ಲೂ ಆ ಮಾತು ಹೇಳಿದ್ರಾ!

First Published | Apr 16, 2024, 7:13 PM IST

ಸಿನಿಮಾ ರಂಗದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ನಟ ದ್ವಾರಕೀಶ್ ಅವರ ಸ್ನೇಹ ಭಾರೀ ಹೆಸರು ಮಾಡಿತ್ತು. ಸ್ಯಾಂಡಲ್ವುಡ್ನಲ್ಲಿ ಕುಚಿಕು ಗೆಳೆಯರು ಯಾರು ಎಂದಾಗ ಥಟ್ಟನೇ ಅಂಬರೀಷ್ ವಿಷ್ಣುವರ್ಧನ್ ನೆನಪಿಗೆ ಬರುವಂತೆ, ವಿಷ್ಣುವರ್ಧನ್ ಮತ್ತು ನಟ ದ್ವಾರಕೀಶ್ ಸ್ನೇಹವೂ ಖ್ಯಾತಿ ಗಳಿಸಿತ್ತು.  ಹೀಗಿರುವಾಗ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರ ಸ್ನೇಹದಲ್ಲಿ ಬಿರುಕು ಮೂಡಿತ್ತು. 
 

ಕನ್ನಡದ ಕುಳ್ಳ, ಸ್ಯಾಂಡಲ್ವುಡ್ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ.  ಕನ್ನಡ ಸಿನಿಮಾ ರಂಗದಲ್ಲಿ ಕಳ್ಳ ಕುಳ್ಳ ಎಂದು ಪ್ರಖ್ಯಾತಿ ಪಡೆದಿದ್ದಂತಹ ಡಾಕ್ಟರ್ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಸ್ನೇಹ ಎಷ್ಟರ ಮಟ್ಟಿಗೆ ಬಲವಾಗಿತ್ತು ಎಂಬುದು ನಮ್ಮೆಲ್ಲರಿಗೂ ಗೊತ್ತೇ ಇದೆ. ವಿಷ್ಣುವರ್ಧನ್ ದ್ವಾರಕೀಶ್ ಜೊತೆ ಬಹಳ ಮಧುರವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಅಷ್ಟೆ ಅಲ್ದೆ  ಹೆಚ್ಚಿನ ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ಅಭಿನಯಿಸುತ್ತಿದ್ದರು.

ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರ ಚೊಚ್ಚಲ ಸಿನಿಮಾ ಕಳ್ಳ ಕುಳ್ಳ ಬರುವ ಹೊತ್ತಿಗೆ ದ್ವಾರಕೀಶ್ ಅವರು ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದರು.  ದ್ವಾರಕೀಶ್ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದ ದಿನಮಾನ ಶುರುವಾಗಿತ್ತು. ಅಂತಹ ವೇಳೆಯಲ್ಲಿ ವಿಷ್ಣುವರ್ಧನ್ ಜೊತೆ ಸಿನಿಮಾ ಮಾಡಬೇಕು ಎಂದು ಕನಸು ಕಂಡರು ಕನ್ನಡದ ಕುಳ್ಳ ದ್ವಾರಕೀಶ್. ತಮ್ಮ ಮನೆಯ ಬಾಗಿಲಿಗೆ ಬಂದ ಯಾರನ್ನೂ ವಿಷ್ಣು ನಿರಾಸೆಗೊಳಿಸುತ್ತಿರಲಿಲ್ಲ. ದ್ವಾರಕೀಶ್ರಂತಹ ಮೇರು ನಟ ಬಂದರೆ, ಖಾಲಿ ಕೈಯಲ್ಲಿ ಕಳುಹಿಸುವ ಮಾತೇ ಇಲ್ಲ ಅದ್ರಂತೆ ವಿಷ್ಣು.  ಅಲ್ಲಿಂದ ಶುರುವಾಯ್ತು ನೋಡಿ ಅವರ ಸ್ನೇಹ.

Latest Videos


1975 ರಲ್ಲಿ ತೆರೆಕಂಡ ಕಳ್ಳ ಕುಳ್ಳ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿತು. ಕನ್ನಡ ಸಿನಿಮಾ ರಂಗದ ಕಳ್ಳ ಕುಳ್ಳ ಜೋಡಿ ಎಂದೇ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರನ್ನು ಕರೆಯುವಂತೆ ಮಾಡಿತ್ತು. ಅಲ್ಲಿಂದ ಶುರುವಾದ ಈ ಜೋಡಿಯ ಪಯಣ 1986ರ ಹೊತ್ತಿಗೆ ಒಂದು ಡಜನ್‌ನಷ್ಟು ಸಿನಿಮಾಗಳನ್ನು ಮಾಡಿಸಿತು. ಕಳ್ಳ ಕುಳ್ಳ ನಂತರ ಕಿಟ್ಟು ಪುಟ್ಟು, ಭಲೇ ಹುಡುಗ, ಸಿಂಗಪುರ್ನಲ್ಲಿ ರಾಜಾಕುಳ್ಳ, ಅವಳ ಹೆಜ್ಜೆ, ಗುರು ಶಿಷ್ಯರು, ಪೆದ್ದಗೆದ್ದ, ಜಿಮ್ಮಿಗಲ್ಲು, ಇಂದಿನ ರಾಮಾಯಣ, ಮದುವೆ ಮಾಡು ತಮಾಷೆ ನೋಡು. ಹೀಗೆ ವಿಷ್ಟು ದ್ವಾರಕೀಶ್ ಕಾಂಬಿನೇಷನ್ನಲ್ಲಿ ಸಾಕಷ್ಟು ಚಿತ್ರಗಳು ಮೂಡಿಬಂದವು. ಅದ್ರಲ್ಲಿ ಹಲವು ಚಿತ್ರಗಳು ಸೆನ್ಸೇಷನ್ ಕ್ರಿಯೇಟ್ ಮಾಡಿತು.

ವಿಷ್ಣುವರ್ಧನ್ ಮೇಲೆ ದ್ವಾರಕೀಶ್ ಅವರಿಗೆ ಎಷ್ಟು ನಂಬಿಕೆ ಬಂತಂದ್ರೆ ವಿಷ್ಣುವಿದ್ದರೆ ಗಲ್ಲಾಪೆಟ್ಟಿಗೆ ತುಂಬುವುದರಲ್ಲಿ ಅನುಮಾನವಿಲ್ಲ ಎನ್ನುವಷ್ಟರ ಮಟ್ಟಿಗೆ ನಂಬಿದ್ದರು. ಅದು ಅಕ್ಷರಶಃ ನಿಜ ಕೂಡ ಆಗಿತ್ತು. ಈ ಧೈರ್ಯದಿಂದಲೇ ಅವರು ರಾಜಾ ಕುಳ್ಳ ಸಿನಿಮಾವನ್ನು ಸಿಂಗಾಪುರದಲ್ಲಿ ಚಿತ್ರೀಕರಣ ಮಾಡಲು ಮುಂದಾದರು. ಹೀಗೆ ದ್ವಾರಕೀಶ್ ವಿಷ್ಣು ಕಾಂಬಿನೇಷನ್ ಸಿನಿಮಾಗಳು ಪ್ರೇಕ್ಷಕರನ್ನು ಕಿಕ್ಕಿರಿಯುವಂತೆ ಮಾಡಿತ್ತು. ಹೀಗಾಗಿ ಪ್ರಪ್ರಥಮವಾಗಿ ತಮ್ಮ ಸಿನಿಮಾವನ್ನು ಸಿಂಗಾಪುರದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿದರು. ಕನ್ನಡ ಚಿತ್ರರಂಗದಲ್ಲೇ ಸಿಂಗಾಪುರದಲ್ಲಿ ಶೂಟಿಂಗ್ ಆದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ರಾಜಾ ಕುಳ್ಳ ಪಾತ್ರವಾಯ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೊಂದು ಮೈಲಿಗಲ್ಲಾಯಿತು. 

ನಿರ್ಮಾಪಕರಾಗಿ ಸಾಕಷ್ಟು ಹೆಸರು ಮಾಡಿದ ದ್ವಾರಕೀಶ್, 1985ರಲ್ಲಿ ತೆರೆಕಂಡ ವಿಷ್ಣುವರ್ಧನ್ ಮತ್ತು ಭವ್ಯ ಜೊತೆಯಾಗಿ ನಟಿಸಿದ್ದ ನೀ ಬರೆದ ಕಾದಂಬರಿ ಸಿನಿಮಾದ ಮೂಲಕ ನಿರ್ದೇಶಕರಾಗಿಯೂ ಯಶಸ್ಸಿನ ತುತ್ತ ತುದಿಯಲ್ಲಿ ಕೂತರು. ದ್ವಾರಕೀಶ್ ಗೆಲುವಿನ ಹಿಂದೆ ಶಕ್ತಿಯಾಗಿ ನಿಂತದ್ದು ಇದೇ ವಿಷ್ಣುವರ್ಧನ್. ಆದರೆ, ಈ ಆಪ್ತಮಿತ್ರರ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ. ಇವರಿಬ್ಬರ ಮಧ್ಯೆ ದೊಡ್ಡ ಬಿರುಕುಂಟಾಯ್ತು.  

ದ್ವಾರಕೀಶ್ ಹಾಗೂ ವಿಷ್ಣುವರ್ಷನ್ ಕಾಂಬಿನೇಷನ್ ಸಿನಿಮಾಗಳು ಗೆಲ್ಲುತ್ತಾ ಹೋದವು. ಹಣವೂ ಹಾಗೆಯೇ ಹರಿದು ಬಂತು. ವಿಷ್ಣು ಗೆಲ್ಲುವ ಕುದುರೆ ಎಂಬ ಮಾತಿತ್ತು. ಎಲ್ಲರಿಗೂ ಪ್ರಿಯವಾಗಿ ಹೋಗ್ತಾರೆ. ನಮಗೂ ಕಾಲ್ಶೀಟ್ ಕೊಡಿ ಅಂತ ನಿರ್ಮಾಪಕರು ಕೇಳಿಕೊಳ್ತಾರೆ. ಕಷ್ಟ ಅಂತ ಬಂದ್ರೆ ತಕ್ಷಣವೇ ಕರಗುತ್ತಿದ್ದ ವಿಷ್ಣು ನಿರ್ಮಾಪಕರಿಗೆ ಕಾಲ್ಶೀಟ್ ಕೊಡಲು ಶುರು ಮಾಡ್ತಾರೆ. ಇದ್ರಿಂದ ದ್ವಾರಕೀಶ್ ಕೊಂಚ ಕೋಪಗೊಳ್ತಾರೆ. ನನ್ನಿಂದ ಬೆಳೆದ ಹುಡುಗ, ನನ್ನ ವಿರುದ್ಧವೇ ಜಿದ್ದಿಗೆ ಬಿದ್ದನಲ್ಲ ಅಂತ ಅಪಾರ್ಥ ಮಾಡಿಕೊಳ್ತಾರೆ. ಗೆಳೆತನದ ವಿಷಯದಲ್ಲಿ ವ್ಯಾಪಾರವೂ ಬಂದು ಬಿಡುತ್ತೆ. ಪರಸ್ಪರ ಇಬ್ಬರ ಮಧ್ಯೆ ಬಿರುಕುಂಟಾಗಿ ಬಿಡುತ್ತೆ.

ಇದಾದ ಬಳಿಕ ವಿಷ್ಣು ಎದುರಿಗೆ ಹೊಸ ಹೀರೋಗಳನ್ನು ತಂದು ನಿಲ್ಲಿಸುತ್ತೇನೆ ಎಂದು ದ್ವಾರಕೀಶ್ ಶಪಥಃ  ಮಾಡ್ತಾರೆ. ಅದ್ರಂತೆ ಹೊಸಬರನ್ನು ಹಾಕಿಕೊಂಡು ಡಾನ್ಸ್ ರಾಜ ಡಾನ್ಸ್, ಶ್ರುತಿ ಹಾಕಿದ ಹೆಜ್ಜೆ ಹೀಗೆ ಅನೇಕ ಸಿನಿಮಾಗಳನ್ನು ಮಾಡ್ತಾರೆ. ಆದ್ರೆ, ಅವುಗಳಲ್ಲಿ ಗೆದ್ದದ್ದು ಮೂರು ಮತ್ತೊಂದು ಮಾತ್ರ. ಇದ್ರಿಂದ ದ್ವಾರಕೀಶ್ ಆರ್ಥಿಕವಾಗಿ ಕುಸಿಯುತ್ತಾರೆ. ದ್ವಾರಕೀಶ್ ಅಕ್ಷರಶಃ ಕಂಗಾಲಾಗ್ತಾರೆ. ವಿಷ್ಣುವರ್ಧನ್ ಜೊತೆ ದ್ವಾರಕೀಶ್ ಮಾತನಾಡದಿದ್ದರೂ,  ವಿಷ್ಣು ಮಾತ್ರ  ಹಿರಿಜೀವಕ್ಕೆ ಹೀಗಾಗುತ್ತಿದೆಯಲ್ಲ ಅಂತ ಒಳಗೊಳಗೆ ಸಂಕಟ ಪಡ್ತಾರೆ.

ಕನ್ನಡ ಸಿನಿಮಾ ರಂಗಕ್ಕೆ ದ್ವಾರಕೀಶ್ ಆಲದ ಮರವಿದ್ದಂತೆ. ಈಗ ಅವರು ಕುಸಿದಿದ್ದಾರೆ. ಬಸವಳಿದಿದ್ದಾರೆ. ಮತ್ತೆ ಅವರಿಗೆ ನಾವೆಲ್ಲ ಚೈತನ್ಯ ತುಂಬಬೇಕು. ಶಕ್ತಿಯಾಗಿ ನಿಲ್ಲಬೇಕು ಎಂದು ಪತ್ರಿಕೆಯೊಂದರ ಸಂದರ್ಶನದಲ್ಲೂ ವಿಷ್ಣು ಹೇಳಿದ್ದರು. ಹೀಗಾಗಿ ಮತ್ತೆ ದ್ವಾರಕೀಶ್ ಅವರ ಕೈ ಹಿಡಿದ್ರು ಮತ್ತೆ ಕಾಲ್ಶೀಟ್ ಕೊಟ್ಟರು. ಬೇರಾಗಿದ್ದ ಸ್ನೇಹಿತರು ಮತ್ತೆ ಒಂದಾಗಿದ್ದು ಆಪ್ತಮಿತ್ರ ಸಿನೆಮಾ ಮೂಲಕ. ವಿಷ್ಣು ಇಲ್ಲದೆ ಮಾಡಿದ ಹಲವು ಸಿನಿಮಾಗಳು ನೆಲಕಚ್ಚಿ ಆಸ್ತಿಯನ್ನೆಲ್ಲ ಮಾರಿಕೊಂಡಿದ್ದ ದ್ವಾರಕೀಶ್ ಅವ್ರಿಗೆ ಆಪ್ತಮಿತ್ರ ತಂದುಕೊಟ್ಟ ಸಂಪತ್ತು ಅಷ್ಟಿಷ್ಟಲ್ಲ. ದ್ವಾರಕೀಶ್ ಮಾಡಿದ್ದ ಅಷ್ಟೂ ಸಾಲವನ್ನು ಆಪ್ತಮಿತ್ರ ಸಿನಿಮಾ ತೀರಿಸಿತು. ಅದರ ಬಳಿಕ ಅವರಿಬ್ಬರ ಸಿನೆಮಾ ಬರಲೇ ಇಲ್ಲ.

ದ್ವಾರಕೀಶ್ ಕರ್ನಾಟಕದ ಕುಳ್ಳ ಅಂತಲೇ ಫೇಮಸ್ ಆಗಿದ್ದರು. ದುಡ್ಡು ಕಾಸು ಅಂತ ತಲೆನೆ ಕೆಡಿಸಿಕೊಳ್ಳದೇ ಕೋಟಿ ಕೋಟಿ ಹಾಕಿ ಸಿನಿಮಾ ಮಾಡ್ತಿದ್ದರು. ಅದು ಎಷ್ಟರಮಟ್ಟಿಗೆ ಅಂದ್ರೆ ಮನೆಯನ್ನೆ ಸಿನಿಮಾಗೋಸ್ಕರ ಮಾರಾಟ ಮಾಡಿದ್ದು ಇದೆ. ಅಷ್ಟು ಧೈರ್ಯವಂತ ನಿರ್ಮಾಪಕರು ಯಾರಾದ್ರೂ ಇದ್ರೆ ಅದು ದ್ವಾರಕೀಶ್ ಮಾತ್ರ ಅಂತಲೇ ಬಣ್ಣಿಸಬಹುದು. ಸಿನಿಮಾವನ್ನ  ಅಷ್ಟು ಜೀವಿಸುತ್ತಿದ್ದ ದ್ವಾರಕೀಶ್ ಅವರು ಈಗಿಲ್ಲ ಅನ್ನೋದು ಎಷ್ಟು ಸತ್ಯವೋ ಅವರ ಸಿನಿಮಾಗಳಲ್ಲಿ ಅವರು ಮಾಡಿರೋ ಅದ್ದೂರಿತನ ಪ್ರಯೋಗಳು ಅಷ್ಟೇ ಸತ್ಯ.
 

ಇನ್ನು ಆಪ್ತಮಿತ್ರ ಸಿನಿಮಾ ಭರ್ಜರಿ ಹಿಟ್ ಕಾಣುತ್ತೆ. ಆದ್ರೆ ವಿಷ್ಣುವರ್ಧನ್ ಗೆ ಒಂದು ಬ್ರೇಕ್ ಬೇಕಿತ್ತು. ಹಾಗಾಗಿ ಈ ಚಿತ್ರ ಮಾಡಿದೆ ಎನ್ನುವ ಹೇಳಿಕೆಯನ್ನ ದ್ವಾರಕೀಶ್ ನೀಡಿದ್ದರು. ಇದು ಅವರ ಮಧ್ಯೆ ಬಿರುಕು ಮತ್ತಷ್ಟು ಹೆಚ್ಚಾಗಲು ಕಾರಣ ಅಂತ ಊಹಾಪೋಹ ಸುದ್ದಿಯೂ ಇದೆ. ಆಪ್ತಮಿತ್ರ ಬಳಿಕ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಅವ್ರ ನಡುವಿನ ಸ್ನೇಹ ಮತ್ತಷ್ಟು ಗಟ್ಟಿ ಆಯ್ತು ಅಂತಲೂ ಬಲ್ಲವರು ಹೇಳ್ತಾರೆ. ಅದ್ರಲ್ಲೂ ವಿಷ್ಣು ಇದ್ದಿದ್ದರೆ ಇನ್ನು 4 ಸಿನಿಮಾ ಮಾಡ್ತಿದ್ದೆ ಅಂತ ಸ್ವತಃ ದ್ವಾರಕೀಶ್ ಅವ್ರೇ ಹೇಳಿಕೊಂಡಿದ್ರು. ಇನ್ನು ದ್ವಾರಕೀಶ್ ಅವ್ರಿಗೆ ಕೊರಗೊಂದು ಸದಾ ಕಾಡ್ತಿತ್ತು. ಅದೇನಂದ್ರೆ ವಿಷ್ಣುಯಿಂದ ದೂರ ಆಗಿ ಅವರಿಲ್ಲದೇ ಸಿನಿಮಾ ಮಾಡಿದ್ದು ದೊಡ್ಡ ತಪ್ಪಾಯ್ತು ಅಂತ ಹೇಳಿಕೊಂಡಿದ್ರು. 

ಹೀಗೆ ದ್ವಾರಕೀಶ್  5 ವರ್ಷಗಳ ಕಾಲ ವಿಷ್ಣುವಿಂದ ದೂರವಿದ್ದೆನಲ್ಲಾ ಅಂತ ಪಶ್ಚಾತಾಪ ಪಟ್ಟಿದ್ದೂ ಇದೆ. ಯಾಕಂದ್ರೆ ಆಪ್ತಮಿತ್ರನಿಂದ ದೂರ ಆದಾಗ ಆಗುವ ನೋವು ಅದನ್ನ ಅನುಭವಿಸಿದವರಿಗೇ ಗೊತ್ತು. ದ್ವಾರಕೀಶ್  ನಿರ್ಮಾಣ ಮಾಡಿದ 53 ಸಿನಿಮಾಗಳ ಪೈಕಿ 14 ಸಿನಿಮಾಗಳಲ್ಲಿ ವಿಷ್ಣು ನಟಿಸಿದ್ದಾರೆ. ಅವುಗಳಲ್ಲಿ ಬಹುತೇಕ ಸಿನಿಮಾಗಳು ಈ ಆಪ್ತಮಿತ್ರರಿಗೆ ಸಕ್ಸಸ್ ತಂದು ಕೊಟ್ಟಿವೆ.  ಇವರಿಬ್ಬರ ಕಾಂಬಿನೇಷನ್ ಸಿನಿಮಾಗಳು ಈಗಲೂ ರಂಜಿಸುವುದರಲ್ಲಿ ಎರಡು ಮಾತಿಲ್ಲ. ಆಪ್ತಮಿತ್ರರ ಸಿನಿಮಾಗಳು ಹಾಗೂ ದ್ವಾರಕೀಶ್ ವಿಷ್ಣುವರ್ಧನ್ ಅವ್ರ ಸ್ನೇಹವನ್ನ ಯಾರು ಮರೆಯುವಂತಿಲ್ಲ. ಅದಕ್ಕೆ ನೋಡಿ ಇವರಿಬ್ಬರು ನಟಿಸಿದ ಕೊನೇ ಸಿನಿಮಾದಲ್ಲಿ ನನ್ನಿಂದ ನಿನ್ನ ನಿನ್ನಿಂದ ನನ್ನ ದೂರ ಮಾಡಲು ಎಂದೂ ಆಗಲ್ಲ ಅಂತ ಹಾಡಿದ್ದು.

click me!