ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಉತ್ತಮ ಗಳಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಬುಧವಾರ ಕ್ರಿಸ್‌ಮಸ್ ರಜಾದಿನದಂದು ರಿಲೀಸ್ ಕಂಡ ಈ ಚಿತ್ರ ಮೊದಲ ದಿನವೇ ಉತ್ತಮ ಪ್ರದರ್ಶನ ಕಂಡು ಅಂದಾಜು 8.40 ಕೋಟಿ ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ.
ಗುರುವಾರ ರಜೆ ಇಲ್ಲದಿದ್ದರೂ ಸಿನಿಮಾ 4 ಕೋಟಿ ರು.ಗೂ ಅಧಿಕ ಗಳಿಗೆ ಮಾಡುವ ಮೂಲಕ ಯಶಸ್ಸಿನತ್ತ ದಾಪುಗಾಲು ಹಾಕುತ್ತಿದ್ದು, ಈ ಎರಡು ದಿನಗಳಲ್ಲಿ ಈ ಸಿನಿಮಾದ ಗಳಿಕೆ 12.50 ಕೋಟಿಗೂ ಅಧಿಕವಾಗಿದೆ ಎಂದು ಬಾಕ್ಸಾಫೀಸ್ ತಜ್ಞರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಮತ್ತು ಅವರ ಆಪ್ತರು ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಮ್ಯಾಕ್ಸ್ ಸ್ಟೋರಿಲೈನ್: ಅಮಾನತ್ತಿನಲ್ಲಿದ್ದ ಪೊಲೀಸ್ ಆಫೀಸರ್ ಅರ್ಜುನ್ ಮಹಾಕ್ಷಯ್ ನಾಳೆ ಡ್ಯೂಟಿಗೆ ಹಾಜರಾಗಬೇಕು. ಆದ್ರೆ ಹಿಂದಿನ ರಾತ್ರಿಯೇ ಒಂದು ದೊಡ್ಡ ಅಚಾತುರ್ಯ ಸಂಭವಿಸುತ್ತೆ. ರಸ್ತೆಯಲ್ಲಿ ಕುಡಿತ ಮತ್ತಿನಲ್ಲಿ ಕಾರ್ ಚಲಾಯಿಸಿ ಮಹಿಳಾ ಪೇದೆಯ ಮೇಲೆ ಕೈ ಹಾಕೋ ಮಂತ್ರಿಗಳ ಮಕ್ಕಳನ್ನ ಮಹಾಕ್ಷಯ್ ಸ್ಟೇಷನ್ಗೆ ತಂದು ಕೂಡಿಹಾಕ್ತಾನೆ.
ಅವರನ್ನ ಬಿಡಿಸಿಕೊಳ್ಳೋದಕ್ಕೆ ದೊಡ್ಡ ರೌಡಿ ಪಡೆ.. ಮಂತ್ರಿಗಳ ಸಹಚರರು.. ಪೊಲೀಸ್ ಠಾಣೆಯಲ್ಲೇ ಇರೋ ಖಾಕಿ ವೇಷದ ದೂರ್ತರು ಎಲ್ಲರೂ ಹೊಂಚು ಹಾಕ್ತಾರೆ. ಆದ್ರೆ ಮ್ಯಾಕ್ಸ್ ಮಹಾಕೋಟೆಯಿಂದ ಅವರನ್ನ ಬಿಡಿಸಿಕೊಂಡು ಹೋಗೋದಕ್ಕೆ ಆಗುತ್ತಾ..? ಅಷ್ಟಕ್ಕೂ ಅರೆಸ್ಟ್ ಆದ ಆ ಹುಡುಗರು ಏನಾಗಿದ್ದಾರೆ.. ಎಲ್ಲಿದ್ದಾರೆ.. ಅನ್ನೋದರ ಸುತ್ತ ಸುತ್ತೋ ಥ್ರಿಲ್ಲಿಂಗ್ ಕಹಾನಿ ಇದು.
ಮ್ಯಾಕ್ಸ್ ಪ್ಲಸ್ ಪಾಯಿಂಟ್ಸ್: ಮ್ಯಾಕ್ಸ್ ಸಿನಿಮಾದ ಮೊದಲ ಪ್ಲಸ್ ಪಾಯಿಂಟ್ ಅಂದ್ರೆ ಹೆಜ್ಜೆ ಹೆಜ್ಜೆಗೂ ತಿರುವು ತೆಗೆದುಕೊಳ್ಳೊ ರೋಚಕ ಸ್ಕ್ರೀನ್ ಪ್ಲೇ. ನಿರ್ದೇಶಕ ವಿಜಯ್ ಕಾರ್ತಿಕೇಯನ್ ಪಕ್ಕಾ ಥ್ರಿಲ್ಲಿಂಗ್ ಸ್ಕ್ರೀನ್ ಪ್ಲೇ ಹೆಣೆದು ಅಷ್ಟೇ ರೋಚಕವಾಗಿ ತೆರೆಗೆ ತಂದಿದ್ದಾರೆ.
ಕಿಚ್ಚನ ಸುದೀಪ್ ಸ್ಟೈಲಿಶ್ ಲುಕ್, ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್, ಪಾತ್ರಕ್ಕೆ ತಕ್ಕ ಕಲಾವಿದರ ಆಯ್ಕೆ, ಶೇಖರ್ ಚಂದ್ರ ಸಿನಿಮಾಟೋಗ್ರಫಿ, ಅಜನೀಶ್ ಹಿನ್ನೆಲೆ ಸಂಗೀತ ಎಲ್ಲವೂ ಸಿನಿಮಾದ ಪ್ಲಸ್ ಪಾಯಿಂಟ್ಸ್ ಎನ್ನಬಹುದು.
ಮ್ಯಾಕ್ಸ್ ಮೈನಸ್ ಪಾಯಿಂಟ್ಸ್: ಚಿತ್ರದ ಆರಂಭಿಕ ಸನ್ನಿವೇಶಗಳು ಕೊಂಚ ನೀರಸವಾಗಿವೆ. ಮೊದಲ ಹಾಡು ಕೂಡ ಕಿಕ್ಕೇರಿಸಲ್ಲ. ಇವುಗಳನ್ನ ರಿಪೇರಿ ಮಾಡಿದ್ರೆ ಸಿನಿಮಾ ಮತ್ತಷ್ಟು ಥ್ರಿಲ್ಲಿಂಗ್ ಆಗಿರೋದು.