ಕೆಜಿಎಫ್ ತಾತಾ ಎಂದೇ ಜನಪ್ರಿಯರಾಗಿರುವ ಕೃಷ್ಣಾಜಿ ರಾವ್ ನಟನೆಯ ‘ನ್ಯಾನೋ ನಾರಾಯಣಪ್ಪ’ ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು.
‘ಕೆಜಿಎಫ್’ ಚಿತ್ರದಲ್ಲಿ ನಟ ಯಶ್ ಅವರಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳುವ, ಅದೇ ಚಿತ್ರದ ಪಾರ್ಚ್ 2ನಲ್ಲಿ ಮಾಸ್ ಡೈಲಾಗ್ ಹೊಡೆದು ಕೆಜಿಎಫ್ ತಾತಾ ಎನಿಸಿಕೊಂಡವರು ಕೃಷ್ಣಾಜಿ ರಾವ್.
ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ಕಾಮಿಡಿ ಹಾಗೂ ಎಮೋಷನ್ ಇರುವ ಸಿನಿಮಾ. ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರ. ನನ್ನ ಈ ಹಿಂದಿನ ಚಿತ್ರಗಳಾದ ಕೆಮಿಸ್ಟ್ರಿ ಆಫ್ ಕರಿಯಪ್ಪ, ಕ್ರಿಟಿಕಲ್ ಕೀರ್ತನೆಗಳು ಮನರಂಜನೆ ಕೊಟ್ಟಿವೆ.
ಆ ಚಿತ್ರಗಳನ್ನು ಜನ ನೋಡಿ ಗೆಲ್ಲಿಸಿದ್ದಾರೆ. ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸುತ್ತಾರೆಂಬ ನಂಬಿಕೆ ಇದೆ. ಈ ಬಾರಿ ನಿರ್ದೇಶನದ ಜತೆಗೆ ನಿರ್ಮಾಣ ಕೂಡ ಮಾಡಿದ್ದೇನೆ. ಚಿತ್ರದ ಎಲ್ಲಾ ಕಲಾವಿದರು ತುಂಬಾ ಚೆನ್ನಾಗಿ ನಟಿಸಿದ್ದಾರೆ’ ಎಂದು ಕುಮಾರ್ ಹೇಳಿಕೊಂಡರು.
ಅಕ್ಟೋಬರ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ‘ಕೆಜಿಎಫ್ 2 ಚಿತ್ರದ ನಂತರ ನನ್ನ ಎಲ್ಲರೂ ಗುರುತಿಸುತ್ತಿದ್ದಾರೆ. ನ್ಯಾನೋ ನಾರಾಯಣಪ್ಪ ಚಿತ್ರದಲ್ಲಿ ತುಂಬಾ ಖುಷಿಯಿಂದ ನನ್ನ ಪಾತ್ರವನ್ನು ಮಾಡಿದ್ದೇನೆ.
ಒಳ್ಳೆಯ ಚಿತ್ರಕ್ಕೆ ನನ್ನ ಆಯ್ಕೆ ಮಾಡಿಕೊಂಡ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದಗಳು. ಹಾಸ್ಯದ ಕತೆ ಇಲ್ಲಿದೆ’ ಎಂದರು ಕೃಷ್ಣಾಜಿ ರಾವ್. ಚಿತ್ರಕ್ಕೆ ಶಿವಶಂಕರ ಕ್ಯಾಮೆರಾ, ಆಕಾಶ್ ಪರ್ವ ಸಂಗೀತ ಇದೆ. ಕಾಕ್ರೋಚ್ ಸುಧಿ, ಪ್ರಶಾಂತ್ ಸಿದ್ದಿ, ಅಕ್ಷತ ಕುಕ್ಕಿ, ಅಪೂರ್ವ ಚಿತ್ರದಲ್ಲಿ ನಟಿಸಿದ್ದಾರೆ.