ಪುನೀತ್ ರಾಜ್‌ಕುಮಾರ್ ನಟಿಸಿದ್ದಾರೆಂಬ ಕಾರಣಕ್ಕೆ ಸದ್ಯಕ್ಕೆ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ‘ಲಕ್ಕಿ ಮ್ಯಾನ್’. ಡಾರ್ಲಿಂಗ್ ಕೃಷ್ಣ ಚಿತ್ರದ ನಾಯಕ.
ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರ ಸೆ. 9ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಪುನೀತ್ ರಾಜ್‌ಕುಮಾರ್ ಮತ್ತು ಪ್ರಭುದೇವ ಡಾನ್ಸ್ ಮಾಡಿರುವ ಹಾಡು ಎಂಆರ್‌ಟಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದ್ದು, ಸಿನಿಮಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ದೇಶಕ ನಾಗೇಂದ್ರ ಪ್ರಸಾದ್, ‘ನನ್ನ ಮಾತೃಭಾಷೆ ಕನ್ನಡದಲ್ಲಿ ನಾನು ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಇದು.
ತಮಿಳಿನ ‘ಓ ಮೈ ಕಡವುಳೆ’ ಚಿತ್ರದ ರೀಮೇಕ್. ಈ ಚಿತ್ರಕ್ಕೆ ‘ಲಕ್ಕಿಮ್ಯಾನ್’ ಹೆಸರು ಕೊಟ್ಟಾಗ ಪುನೀತ್ ತುಂಬಾ ಖುಷಿ ಪಟ್ಟರು. ಕತೆ ಕೇಳಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು.
ಅಪ್ಪು ಅವರ ಜೊತೆ ಕೆಲಸಮಾಡಿದ್ದು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅವರು ತೋರಿಸಿದ ಪ್ರೀತಿಗೆ ನಾನು ಋುಣಿ. ಅಪ್ಪು ತುಂಬಾ ಅರ್ಥಗರ್ಭಿತವಾದ ಪಾತ್ರವನ್ನು ಮಾಡಿದ್ದಾರೆ’ ಎಂದು ಹೇಳಿದ್ದಾರೆ.
ಸಿನಿಮಾ ನಾಯಕ ಡಾರ್ಲಿಂಗ್ ಕೃಷ್ಣ, ‘ನನ್ನ ಸಿನಿಮಾ ಜರ್ನಿ ಶುರುವಾಗಿದ್ದೇ ಅಪ್ಪುಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುವ ಮೂಲಕ. ಅಪ್ಪು ಅವರ ಜತೆಗೆ ನಟಿಸಿದ್ದು ನನ್ನ ಪುಣ್ಯ.
ನಾನು ಅವರ ಅಭಿಮಾನಿ. ಪುನೀತ್ ಇಲ್ಲಿ ದೇವರ ಪಾತ್ರ ಮಾಡಿದ್ದಾರೆ’ ಎಂದು ಹೇಳಿದ್ದಾರೆ. 777 ಚಾರ್ಲಿ ಸಿನಿಮಾ ಮೂಲಕ ಜನಪ್ರೀತಿ ಗಳಿಸಿರುವ ಸಂಗೀತಾ ಶೃಂಗೇರಿ ಚಿತ್ರದ ನಾಯಕಿ.
ರೋಶಿನಿ ಪ್ರಕಾಶ್ ಚಿತ್ರದ ಮತ್ತೊಬ್ಬ ನಾಯಕಿ. ರಂಗಾಯಣ ರಘು, ಸಾಧುಕೋಕಿಲ ಮುಖ್ಯ ಪಾತ್ರಧಾರಿಗಳು. ಪಿ ಆರ್ ಮೀನಾಕ್ಷಿ ಸುಂದರಮ… ಹಾಗೂ ಸುಂದರ ಕಾಮರಾಜ್ ಚಿತ್ರದ ನಿರ್ಮಾಪಕರು.