ಬೆಳೆದದ್ದು ಅಶ್ರಮದಲ್ಲಿ, ಸಹ ನಟಿ ಮೇಲೆ ಲವ್, ಮದುವೆ… ಮೇರು ನಟ ಅನಂತ್ ನಾಗ್ ಕುರಿತು ಇಂಟ್ರೆಸ್ಟಿಂಗ್ ವಿಷ್ಯಗಳು

First Published | Sep 4, 2024, 12:28 PM IST

ನಾಯಕ ನಟ, ಪೋಷಕ ನಟನಾಗಿ ಕಳೆದ ಐವತ್ತು ವರ್ಷಗಳಿಂದ ಸಿನಿಮಾರಂಗದಲ್ಲಿ ಮಿಂಚುತ್ತಿರುವ ಕನ್ನಡದ ಮೇರು ನಟ ಅನಂತ್ ನಾಗ್ ಅವರಿಗೆ ಇಂದು 76 ವರ್ಷದ ಸಂಭ್ರಮ. ಮೇರು ನಟನ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ. 
 

ಅನಂತ್ ನಾಗ್ (Anant Nag) ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ, ಹಲವು ಪಾತ್ರಗಳಲ್ಲಿ, ಹಲವು ರೀತಿಯಲ್ಲಿ ಗುರುತಿಸಿಕೊಂಡ ಮೇರು ನಟ. ಕನ್ನಡದ ಜೊತೆಗೆ ಹಿಂದಿ, ಮರಾಠಿ, ತೆಲುಗು, ತಮಿಳು, ಮಲಯಾಲಂ ಸಿನಿಮಾದಲ್ಲೂ ನಟಿಸಿದ ಬಹುಮುಖ ಪ್ರತಿಭೆ ಅನಂತ್ ನಾಗ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 

1948ರ ಸೆಪ್ಟಂಬರ್ 4ರಂದು ಮುಂಬೈನಲ್ಲಿ ಜನಿಸಿದ ಅನಂತ್ ನಾಗ್ ಇಂದು 76ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅನಂತ್‌ ನಾಗ್ ಕುರಿತು ತುಂಬಾನೆ ವಿಶೇಷವಾದ, ಆಸಕ್ತಿಕರ ವಿಷಯಗಳನ್ನು ತಿಳಿಯೋಣ. ಜೀವನದ ಆರಂಭದಿಂದ ಹಿಡಿದು, ಇಂದಿನವರೆಗೂ ಅನಂತ್ ನಾಗ್ ಬದುಕೇ ಸೋಜಿಗ. 

Tap to resize

ಅನಂತ್ ಅವರ ಊರು ಹೊನ್ನಾವರದ ನಾಗರಕಟ್ಟೆ (Nagarakatte), ಆ ನಾಗರಕಟ್ಟೆಯೇ ಅನಂತ್ ಹೆಸರಿನೊಂದಿಗೆ ಸೇರಿ ಅನಂತ್ ನಾಗ್ ಆಗಿದ್ದಾರೆ.  ಇವರು ತಮ್ಮ ಜೀವನದ ಮೊದಲ ಆರು ವರ್ಷಗಳನ್ನು ಕಾಸರಗೋಡಿನ ಸಮೀಪದ ಆನಂದಾಶ್ರಮದಲ್ಲಿ ಕಳೆದರು. ನಂತರ ಹೊನ್ನಾವರದಲ್ಲಿ 5ನೇ, ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಅನಂತ್ ನಾಗ್, ಮುಂದಿನ ವಿಧ್ಯಾಭ್ಯಾಸವನ್ನು ಮುಂಬೈನಲ್ಲಿ ಪಡೆದರು.  ಅಲ್ಲಿಂದಲೇ ಅನಂತ್ ನಾಗ್ ನಾಟಕಗಳಲ್ಲಿ ನಟಿಸೋಕೆ ಆರಂಭಿಸಿದರು. 

Anant Nag

ಮೊದಲಿಗೆ ಹಿಂದಿ ಮತ್ತು ಮರಾಠಿಯಲ್ಲಿ ನಾಟಕಗಳನ್ನು ಮಾಡುತ್ತಾ ಬಂದ ಅನಂತ್ ನಾಗ್, ಬಳಿಕ ಕನ್ನಡ, ಕೊಂಕಣಿಯಲ್ಲೂ ಸುಮಾರು 50ಕ್ಕೂ ಹೆಚ್ಚು ನಾಟಕಗಳನ್ನು ಮಾಡಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ತಮ್ಮ ಸಹೋದರ ಶಂಕರ್ ನಾಗ್ (Shankar Nag) ಜೊತೆ ನಾಟಕ ಕಂಪನಿಗಳಲ್ಲಿ ಸೇರಿಕೊಂಡು ನಾಟಕ ಮಾಡಲು ಆರಂಭಿಸಿದರು. 

1972ರಲ್ಲಿ ಕನ್ನಡದ `ಸಂಕಲ್ಪ' (Sankalpa) ಮತ್ತು ಶ್ಯಾಮ ಬೆನಗಲ್ ಅವರ ಹಿಂದಿಯ `ಅಂಕುರ್' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಅನಂತ್ ನಾಗ್, ಆಮೇಲೆ ಸೃಷ್ಟಿಸಿದ್ದು ಇತಿಹಾಸ. ಬಯಲು ದಾರಿ ಸಿನಿಮಾ ಮೂಲಕ ಕನ್ನಡಿಗರ ಮನಸ್ಸು ಗೆದ್ದ ಅನಂತ್ ನಾಗ್, ಬೆಳದಿಂಗಳ ಬಾಲೆ ಸಿನಿಮಾ ಮೂಲಕ ಹೊಸ ಅಲೆ ಸೃಷ್ಟಿಸಿದರು. ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, ಮಿಂಚಿನ ಓಟ, ನಾರದ ವಿಜಯ, ಬೆಂಕಿಯ ಬಲೆ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಇವರು ನಟಿಸಿದ ಕೆಲವು ಸೂಪರ್ ಹಿಟ್ ಸಿನಿಮಾಗಳು, ಇವುಗಳನ್ನು ಸೇರಿ ಅನಂತ್ ನಾಗ್ ಸುಮಾರು 300ರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 

 ಕನ್ನಡ ಸಿನಿಮಾ, ನಾಟಕಗಳ ಜೊತೆಗೆ ಅನಂತ್ ನಾಗ್ ಕನ್ನಡ ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದರು. ತಮ್ಮ ಅಮೋಘ ಅಭಿನಯದಿಂದ ಕನ್ನಡಿಗರ ಮನ ಗೆದ್ದ ಅನಂತ್ ನಾಗ್ ಅವರಿಗೆ ಇದುವರೆಗೆ 6 ಫಿಲ್ಂ ಫೇರ್ ಪ್ರಶಸ್ತಿಗಳು (film fare aawards) ಲಭ್ಯವಾಗಿವೆ. ಅಷ್ಟೇ ಅಲ್ಲ ನಾಲ್ಕು ಕರ್ನಾಟಕ ರಾಜ್ಯ ಪ್ರಶಸ್ತಿಗಳೂ ಸಹ ದೊರೆತಿವೆ. 

ಸಿನಿಮಾಗಳಲ್ಲಿ ಮಾತ್ರವಲ್ಲ ಅನಂತ್ ನಾಗ್ ರಾಜಕೀಯದಲ್ಲೂ ಗುರುತಿಸಿ ಸೈ ಎನಿಸಿಕೊಂಡಿದ್ದರು. ಸಮಾಜದ ಏಳ್ಗೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅನಂತ್ ನಾಗ್, 1983ರಿಂದ ಜನತಾದಳ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲ ಇವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಚಿವರೂ ಆಗಿದ್ದರು. 

ಅನಂತ್ ನಾಗ್ ಮದುವೆಯಾಗಿರೋದು ತಮ್ಮ ಸಹ ನಟಿಯಾಗಿದ್ದ ಗಾಯತ್ರಿ (Gayathri) ಅವರನ್ನೇ. ಗಾಯತ್ರಿ ಅನಂತ್ ನಾಗ್ ಅವರಿಗಿಂತ 14 ವರ್ಷ ಚಿಕ್ಕವರಂತೆ. ಒಂದು ಬಾರಿ ನಂದಿ ಬೆಟ್ಟದಲ್ಲಿ ಶೂಟಿಂಗ್ ಇದ್ದ ಸಂದರ್ಭದಲ್ಲಿ ಗಾಯತ್ರಿ ಅವರನ್ನ ತಾವೇ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ, ದಾರಿಯಲ್ಲೇ ನಾವಿಬ್ಬರು ಮದ್ವೆಯಾದರೆ ಹೇಗೆ ಅಂತ ಪ್ರಶ್ನಿಸಿದ್ದರಂತೆ, ಲವ್ ಪ್ರಪೋಸ್ ಮಾಡದೇ ನೇರವಾಗಿ ಮದುವೆ ಪ್ರಸ್ತಾಪವನ್ನೆ ಮಾಡಿದ್ದ ಅನಂತ್ ನಾಗ್ ಅವರನ್ನು ಗಾಯತ್ರಿ ಒಪ್ಪಿಕೊಂಡಿದ್ದು ಆಯಿತು, ಮದ್ವೆಯಾಗಿದ್ದು ಆಯ್ತು. ಆದ್ರೆ ಮದ್ವೆ ದಿನವೇ ಗಾಯತ್ರಿ ತಾನು ಇನ್ನು ಮುಂದೆ ಸಿನಿಮಾದಲ್ಲಿ ನಟಿಸೋದಿಲ್ಲ, ನನಗೆ ಒತ್ತಾಯ ಕೂಡ ಮಾಡಬಾರದು ಎಂದು ಷರತ್ತು ಹಾಕಿದ್ದರಂತೆ. ಇವರ ಮುದ್ದಿನ ಮಗಳ ಅದಿತಿ ನಾಗ್. 

ಅನಂತ್ ನಾಗ್ ಅವರ ಪ್ರೀತಿಯ ತಮ್ಮ ಶಂಕರ್ ನಾಗ್ (Shankar Nag). ಶಂಕರ್ ಅವರು ಅನಂತ್ ನಾಗ್ ಅವರಿಗೆ ಕೇವಲ ತಮ್ಮ ಆಗಿರದೇ ಮಗನಂತಿದ್ದರು, ತಮ್ಮನ್ನು ತಾವು ಸಾಕು ತಂದೆ ಅಂತಾನೇ ಹೇಳ್ತಾರೆ ಅನಂತ್ ನಾಗ್. ಇಬ್ಬರದು ತದ್ವಿರುದ್ಧ ಗುಣ ಆದರೂ, ಅಣ್ಣ ತಮ್ಮಂದಿರ ಬಾಂಧವ್ಯ ಮಾತ್ರ ಅನ್ನೋನ್ಯವಾಗಿತ್ತಂತೆ. ಅಪಘಾತದಲ್ಲಿ ಶಂಕರ್ ನಾಗ್ ಅವರನ್ನು ಕಳೆದುಕೊಂಡ ನಂತರ, ಆ ಆಘಾತದಿಂದ ಹೊರ ಬರೋದಕ್ಕೆ ಅನಂತ್ ನಾಗ್ ಅವರಿಗೆ ಬರೋಬ್ಬರಿ 10 ವರ್ಷಗಳು ಬೇಕಾಗಿತ್ತಂತೆ. 

Latest Videos

click me!