ಉಪೇಂದ್ರ ಅವರ ಯುಐ ಪಾತ್ರದಿಂದ ನನ್ನ ಸಿನಿಮಾ ಕೆರಿಯರ್‌ಗೆ ಹಿನ್ನಡೆಯಾಗುವ ಭಯವಿತ್ತು: ನಟಿ ಮೇದಿನಿ ಕೆಳಮನೆ

First Published | Dec 29, 2024, 2:12 PM IST

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಯುಐ ಸಿನಿಮಾದ ವಿಶೇಷ ಪಾತ್ರದಲ್ಲಿ ಗಮನ ಸೆಳೆದ ನಟಿ ಮೇದಿನಿ ಕೆಳಮನೆ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

ಉಪೇಂದ್ರ ಅವರ ‘ಯುಐ’ ಸಿನಿಮಾ ಟೀಮ್‌ಗೆ ಆಯ್ಕೆ ಆದಾಗ, ಇದು ಹೀರೋ ತಾಯಿ ಪಾತ್ರ ಅಂದಿದ್ದರು. ತಾಯಿಯ ಗ್ಯಾಂಗ್‌ ರೇಪ್ ಆಗಿರುತ್ತೆ. ಅದರಿಂದ ಹುಟ್ಟೋನೇ ನಾನು ಅಂತ ಉಪ್ಪಿ ಸರ್‌ ನೇರವಾಗಿಯೇ ಹೇಳಿದ್ದರು. ಆಮೇಲೆ ಅದನ್ನು ಸಿನಿಮಾದಲ್ಲಿ ಸಾಂಕೇತಿಕವಾಗಿ ತೆಗೆದುಕೊಂಡು ಹೋದರು. ಪ್ರಕೃತಿಯ ಮೇಲೆ ಅವ್ಯಾಹತವಾಗಿ ನಡೆಯುವ ದಾಳಿಯನ್ನು ನನ್ನ ಪಾತ್ರ ಸಂಕೇತಿಸುತ್ತದೆ, ಪ್ರಕೃತಿ ಮಾತೆಯನ್ನು ಮನಸ್ಸಲ್ಲಿಟ್ಟು ಹೆಣೆದ ಪಾತ್ರ ನನ್ನದು ಅಂತ ಆಮೇಲೆ ಗೊತ್ತಾಯ್ತು.

ಮೊದಲಿನಿಂದಲೂ ನಾನು ಉಪ್ಪಿ ಅವರ ದೊಡ್ಡ ಫ್ಯಾನ್‌. ‘ಯುಐ’ ನನ್ನ ಕನಸು ನನಸಾಗಿಸಿದ ಸಿನಿಮಾ. ಈ ಸಿನಿಮಾದಲ್ಲಿ ನಟಿಸುವಾಗ ಉಪ್ಪಿ ಅವರಿಗೆ ಪ್ರತಿಯೊಂದು ವಿಚಾರದ ಬಗೆಗೂ ಇದ್ದ ಕ್ಲಾರಿಟಿ ಅಚ್ಚರಿ ಮೂಡಿಸುತ್ತಿತ್ತು. ಅವರಿಗೆ ಅವರದೇ ಸ್ಪೀಡ್‌ ಇದೆ. ಆ ಸ್ಪೀಡ್‌ಗೆ ಮ್ಯಾಚ್‌ ಮಾಡೋದೆ ಚಾಲೆಂಜಿಂಗ್‌. ಏಕ ಕಾಲಕ್ಕೆ 500 - 600 ಜನರನ್ನು ಸಂಭಾಳಿಸುತ್ತಾ, ಬೇರೆ ಬೇರೆ ವಿಭಾಗಗಳಲ್ಲೂ ಕೆಲಸ ಮಾಡುತ್ತಿರುತ್ತಾರೆ. ಸೆಟ್‌ನಲ್ಲಿ ಜಾದೂ ಮಾಡುವವರಂತೆ ಅವರ ಕೈಚಳಕ ನೋಡೋದೇ ರೋಮಾಂಚನ.

Tap to resize

ನಾನು ಕ್ಯಾಮರಾ ಮುಂದೆ ನಿಂತಾಗ, ‘ನಿಮ್ಮ ಮುಖದಲ್ಲೊಂದು ಆತ್ಮವಿಶ್ವಾಸ ಇದೆ. ಒಂದು ಬಗೆಯ ಹಠಮಾರಿತನದ ಆ್ಯಟಿಟ್ಯೂಡ್‌ ಇದೆ. ಅದನ್ನು ಈ ಪಾತ್ರಕ್ಕೂ ಎಳೆದು ತನ್ನಿ’ ಅಂದಿದ್ದರು. ಅದೊಂದು ಅನಿರೀಕ್ಷಿತ ರಿಯಾಕ್ಷನ್‌. ನನ್ನನ್ನು ನೋಡಿದ ಒಂದೆರಡು ಸಲದಲ್ಲೇ ಇವರು ನನ್ನ ಈ ಸ್ವಭಾವವನ್ನೇ ಗ್ರಹಿಸಿಬಿಟ್ಟರಲ್ಲಾ ಅನಿಸಿತು.

ಉಪ್ಪಿ ಅವರ ಸಿನಿಮಾಗಳಲ್ಲಿ ಡೈಲಾಗ್‌ಗಳದ್ದೇ ಹಬ್ಬ. ಅವರಿಗೆ ಎಲ್ಲ ಜೋರು ಜೋರಾಗಿ ನಡೀಬೇಕು. ಅದಕ್ಕೆ ಸರೀ ತದ್ವಿರುದ್ಧ ನನ್ನ ಪಾತ್ರ. ಅವರು ಎತ್ತರಿಸಿದ ದನಿಯಲ್ಲಿ ಮಾತನಾಡುವಾಗ ಬಹುತಣ್ಣಗೆ ಕೂರುವ ನನ್ನ ಪಾತ್ರದಲ್ಲೊಂದು ಅನನ್ಯತೆ ಇದೆ.

ಏನೂ ಮಾತನಾಡಬಾರದು. ಕಣ್ಣೂ ಮಿಟುಕಿಸಬಾರದು. ಸುಮ್ಮನೇ ಕೂತಿರಬೇಕು ಅಂದಿದ್ದರು. ನಾನೇನೋ ಅವರು ಹೇಳಿದಂತೆ ನಟಿಸುವ ಪ್ರಯತ್ನದಲ್ಲಿದ್ದೆ. ಆದರೆ ಅವರು ನನ್ನ ಪಕ್ಕದಲ್ಲೇ ಜೋರು ಜೋರಾಗಿ ಡೈಲಾಗ್‌ ಹೊಡೆಯುವಾಗ ಕಕ್ಕಾಬಿಕ್ಕಿಯಾಗಿ ಇದೇನು ಅಂತಲೇ ಗೊತ್ತಾಗದೇ ನಗು ತಡೆಯಲಾಗುತ್ತಿರಲಿಲ್ಲ.

ಸೆಟ್‌ನಲ್ಲಿ ಯಾರಿಗೂ ಕಥೆ ಗೊತ್ತಿರಲಿಲ್ಲ. ಉಪ್ಪಿ ಅವರ ಪಾತ್ರ ಆರಂಭದಿಂದಲೂ ನನ್ನ ಪಾತ್ರದ ಜೊತೆಗೇ ಮಾತನಾಡೋದಲ್ವಾ, ಹೀಗಾಗಿ ನಂಗೆ ಪ್ರತಿಯೊಂದು ಸಂಗತಿಯೂ ಗೊತ್ತಾಗ್ತಿತ್ತು. ಒಂದು ಮೀಟರ್ ಆ ಕಡೆ ಇದ್ದವರಿಗೂ ಅವರ ಮಾತು ಕೇಳ್ತಿರಲಿಲ್ಲ. ಅವ್ರೆಲ್ಲ ಬಂದು ಡೈಲಾಗ್‌ ಏನಿತ್ತು ಅಂತ ನನ್ನ ಹತ್ರ ಕೇಳುತ್ತಿದ್ದರು.

ಇಷ್ಟೆಲ್ಲ ಆದಮೇಲೂ ಒಂದು ಭಯ ನನ್ನನ್ನು ಕಾಡುತ್ತಿತ್ತು. ಈ ಪಾತ್ರ ವಯಸ್ಸಾಗಿರುವ ಥರ ಇದೆ. ನಂಗೆ ಈ ಪಾತ್ರದಿಂದ ಹಿನ್ನಡೆ ಆಗಬಹುದಾ ಅನ್ನುವ ಆತಂಕವದು. ಆದರೆ ಇದನ್ನೂ ಮೀರಿ ಉಪೇಂದ್ರ ಅವರ ಜೊತೆಗೆ ನಟನೆ ಮಾಡಲೇ ಬೇಕು ಅನ್ನುವುದಿತ್ತು. ಹೀಗಾಗಿ ಆ ಭಯವನ್ನೆಲ್ಲ ಹಿಂದಕ್ಕೆ ಸರಿಸಿ ನಟಿಸಿದೆ. ಆಮೇಲೆ ನೋಡಿದರೆ ಪಾತ್ರದ ರೀತಿಯೇ ಭಿನ್ನವಾಗಿದೆ. ಜನರೂ ಮೆಚ್ಚುಗೆಯಿಂದ ಈ ಪಾತ್ರವನ್ನು ನೋಡುತ್ತಿದ್ದಾರೆ. ಸದ್ಯ ಆ ಭಯದ ಜಾಗದಲ್ಲಿ ನಿರಾಳತೆ, ಖುಷಿ ಇದೆ.

Latest Videos

click me!