‘ಜಾಂಬೊಯ್ ಟುರ್ರೋಯ್ ಅಂತ ಒಂದೆರಡು ಅಸಂಗತ ಶಬ್ದಗಳನ್ನಷ್ಟೇ ಹೇಳುತ್ತಿದ್ದವನು ನಮ್ಮೂರ ಹುಚ್ಚ ಅಲೀಮ. ಅವನ ಈ ಸೌಂಡ್ ಬಂದ ಕೂಡಲೇ ಮಕ್ಕಳೆಲ್ಲ ಅವನ ಬಳಿ ಓಡುತ್ತಿದ್ದೆವು. ನಮ್ಮ ಸಿನಿಮಾದ ತುರ್ರಾ ಹಾಡು ಹುಟ್ಟಿಗೂ ಅವನೇ ಕಾರಣ. ಪ್ರತಿಯೊಬ್ಬರೊಳಗಿನ ಹುಚ್ಚನಿಗೆ ಈ ಹಾಡು ಅರ್ಪಣೆ’.
ಹೀಗಂದದ್ದು ನಿರ್ದೇಶಕ ಯೋಗರಾಜ ಭಟ್. ಅವರ ನಿರ್ದೇಶನದ ‘ಮನದ ಕಡಲು’ ಚಿತ್ರದ ‘ತುರ್ರಾ’ ಹಾಡಿನ ಬಿಡುಗಡೆ ವೇಳೆ ಈ ಹಾಡು ಹುಟ್ಟಿದ ಬಗೆಯನ್ನು ಯೋಗರಾಜ್ ಭಟ್ ತೆರೆದಿಟ್ಟರು.
ಆಷಾಢದ ಒಂದು ದಿನ ವಾಕಿಂಗ್ ಮಾಡುತ್ತಿರುವಾಗ ಸಂಗೀತ ನಿರ್ದೇಶಕ ಹರಿಕೃಷ್ಣ ಈ ಟ್ಯೂನ್ ಕೇಳಿಸಿದರು. ಬೀಸಿ ಬರ್ತಿದ್ದ ಗಾಳಿ ಜೊತೆಗೆ ಅವರು ಹಾಡುತ್ತಿದ್ದ ರೀತಿ ಬಹಳ ಸೊಗಸಾಗಿತ್ತು.
ಇದಕ್ಕೆ ಆ ಕ್ಷಣಕ್ಕೆ ತೋಚಿದ ಲಿರಿಕ್ಸ್ ಸೇರಿಸಿದೆ. ಅದನ್ನು ನಿರ್ಮಾಪಕ ಕೃಷ್ಣಪ್ಪರಿಗೆ ತೋರಿಸಿದೆ. ಅವರಿಗೆ ಆ ಅನರ್ಥ ಲಿರಿಕ್ಸೇ ಇಷ್ಟವಾಯ್ತು. ಅದೇ ಅಂತಿಮವೂ ಆಯಿತು. ಸದ್ಯ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ ಎಂದರು.
ನಿರ್ಮಾಪಕ ಇ ಕೃಷ್ಣಪ್ಪ, ‘ಭಟ್ಟರು ಹಾಡಿನ ಈ ಅರ್ಥರಹಿತ ಸಾಹಿತ್ಯ ವರ್ಕೌಟ್ ಆಗುತ್ತೋ ಇಲ್ವೋ ಅಂತ ಇನ್ನೊಂದು ಲಿರಿಕ್ಸ್ ರೆಡಿ ಮಾಡ್ಕೊಂಡು ಒಂದೂವರೆ ತಿಂಗಳು ಒದ್ದಾಡಿದರು. ನಾನು ಇದನ್ನೇ ಫೈನಲ್ ಮಾಡಿ ಅಂದೆ. ಈ ಹಾಡು ಆಮೇಲೆ ಎಲ್ಲರಿಗೂ ಇಷ್ಟ ಆಯ್ತು’ ಎಂದರು.
ನಾಯಕ ಸುಮುಖ, ‘ಶೂಟಿಂಗ್ ವೇಳೆ ಭಟ್ಟರು ಈ ಹಾಡಲ್ಲಿ ಬಂದಿರುವ ರೀತಿ ವಿಚಿತ್ರ ಉದ್ಗಾರ ಹೊಮ್ಮಿಸುತ್ತಿದ್ದರು. ಶುರುವಲ್ಲಿ ಏನೇನೂ ಅರ್ಥ ಆಗುತ್ತಿರಲಿಲ್ಲ. ಈಗೀಗ ಅವುಗಳೆಲ್ಲ ನನ್ನ ಹುಚ್ಚುತನಕ್ಕೂ ಬಳಕೆ ಆಗುತ್ತವೆ. ಈ ಹಾಡೂ ಟ್ರೆಂಡಿಂಗ್ ಆಗುವ ವಿಶ್ವಾಸ ಇದೆ’ ಎಂದರು. ನಾಯಕಿ ರಾಶಿಕಾ, ಸಂಗೀತ ನಿರ್ದೇಶಕ ಹರಿಕೃಷ್ಣ ಹಾಗೂ ತಂಡದವರು ಹಾಜರಿದ್ದರು. ಡಿ ಬೀಟ್ಸ್ ಮ್ಯೂಸಿಕ್ ವರ್ಲ್ಡ್ ಯೂಟ್ಯೂಬ್‌ನಲ್ಲಿ ಈ ಹಾಡು ಕೇಳಬಹುದು.