ಪ್ರತಿಯೊಬ್ಬ ಕಲಾವಿದ, ಸಿನಿಮಾ ಮೇಕರ್‌ಗೂ ಒಂದು ಮಹತ್ವಾಕಾಂಕ್ಷೆಯ ಸಿನಿಮಾ ಇರುತ್ತದೆ. ಈ ಸಿನಿಮಾ ತನ್ನ ಕೆರಿಯರ್‌ನಲ್ಲಿ ಬೆಸ್ಟ್ ಆಗುತ್ತದೆ ಎಂಬ ನಂಬಿಕೆ ಇರುತ್ತದೆ. ಹಾಗೆ ನೀನಾಸಂ ಸತೀಶ್ ಅವರು ತನ್ನ ಇದುವರೆಗಿನ ಸಿನಿಮಾಗಳಲ್ಲಿ ಬೆಸ್ಟ್ ಸಿನಿಮಾ ಆಗುತ್ತದೆ ಎಂದು ನಂಬಿಕೆ ಇಟ್ಟಿರುವ ಸಿನಿಮಾ ಹೆಸರು ‘ದ ಅಶೋಕ ರೈಸ್’. ಈ ಚಿತ್ರದ ಅದ್ದೂರಿ ಮೋಷನ್ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಸತೀಶ್ ನೀನಾಸಂ ರಗಡ್ ಪಾತ್ರದಲ್ಲಿ, ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ರೆಟ್ರೋ ಕಾಲದ ಕತೆಯೆಂಬಂತೆ ತೋರುವ ಮೋಷನ್ ಪೋಸ್ಟರ್‌ನಲ್ಲಿ ಸತೀಶ್ ಅವರು ಸಂಪೂರ್ಣ ಭಿನ್ನವಾಗಿ ಕಾಣುತ್ತಿದ್ದು, ಸಿನಿಮಾ ಕುರಿತು ಅಚ್ಚರಿಯಿಂದ ನೋಡುವಂತೆ ಮಾಡಿದ್ದಾರೆ. ಈ ಹಿಂದೆ ಈ ಚಿತ್ರಕ್ಕೆ ‘ಅಶೋಕ ಬ್ಲೇಡ್’ ಎಂಬ ಹೆಸರಿಡಲಾಗಿತ್ತು. ಇದೀಗ ಹೆಸರು ಬದಲಾಗಿದೆ. ಈ ಸಿನಿಮಾದ ನಿರ್ದೇಶಕರಾಗಿದ್ದ ವಿನೋದ್ ಧೋಂಡಾಳೆ ಅಗಲಿದ ಬಳಿಕ ಮನು ಶೇಡ್ಗಾರ್ ನಿರ್ದೇಶನ ಕಾರ್ಯ ಮುಂದುವರಿಸಲಿದ್ದಾರೆ.
ಇನ್ನೂ ಶೇ.20ರಷ್ಟು ಚಿತ್ರೀಕರಣ ಬಾಕಿ ಇದ್ದು, ಫೆ. 15ರಿಂದ ಚಿತ್ರೀಕರಣ ಶುರುವಾಗಲಿದೆ. ಈ ವರ್ಷದ ದ್ವಿತೀಯ ಭಾಗದಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಸೆ ತಂಡಕ್ಕಿದೆ. ನೀನಾಸಂ ಸತೀಶ್ ಅವರಂತೂ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾದ ಶೋರೀಲ್ ಅನ್ನೂ ಸಿದ್ಧಪಡಿಸಿದ್ದಾರೆ. ಶೋರೀಲ್ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿರುವ ನಂಬಿಕೆ ಹುಟ್ಟಿಸುವಂತಿದೆ.
ನೀನಾಸಂ ಸತೀಶ್, ‘ಕಂಟೆಂಟ್ ಆಧರಿತ ಕಮರ್ಷಿಯಲ್ ಸಿನಿಮಾ ಇದು. ಈ ಸಿನಿಮಾ ನನ್ನ ಸಿನಿಮಾ ಕೆರಿಯರ್‌ನಲ್ಲಿ ನನ್ನನ್ನು ಮತ್ತೊಂದು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಮಾಡುತ್ತೇವೆ. ಬೇರೆ ಭಾಷೆಯ ಸೆನ್ಸಿಬಲ್ ನಿರ್ದೇಶಕರಿಗೆ ಈ ಸಿನಿಮಾ ತೋರಿಸುತ್ತೇನೆ. ಕರ್ನಾಟಕದಾದ್ಯಂತ ಪ್ರವಾಸ ಮಾಡುತ್ತೇನೆ. ಪ್ರೇಕ್ಷಕರಿಗೆ ತಲುಪಿಸುತ್ತೇನೆ. ಈ ಸಿನಿಮಾ ಅಷ್ಟು ಚೆನ್ನಾಗಿದೆ ಮತ್ತು ನೋಡಿದವರೆಲ್ಲಾ ಮೆಚ್ಚಿಕೊಳ್ಳುತ್ತಾರೆಂಬ ನಂಬಿಕೆ ನನಗಿದೆ’ ಎನ್ನುತ್ತಾರೆ.
ಚಾಮರಾಜ ನಗರ ಭಾಗದಲ್ಲಿ ನಡೆದ ನಿಜ ಘಟನೆ ಆಧರಿತ ಸಿನಿಮಾವಾಗಿದ್ದು, ಟಿಕೆ ದಯಾನಂದ ಕತೆ ಬರೆದಿದ್ದಾರೆ. ಆ ಕತೆಯನ್ನು ಬಹಳ ಶ್ರೀಮಂತವಾಗಿ ಕಟ್ಟಿಕೊಡಲಾಗಿದೆ. ಅದಕ್ಕೆ ಪೂರಕವಾಗಿ ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಸಿನಿಮಾ ಚೆನ್ನಾಗಿ ಬಂದಿರುವುದರಿಂದ ನೀನಾಸಂ ಸತೀಶ್ ಕಟಿಬದ್ಧರಾಗಿ ಈ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಸಿದ್ಧರಾಗಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಲೂಸಿಯಾ ದೊಡ್ಡ ಹೆಸರು ಮಾಡಿರುವುದರಿಂದ ಮತ್ತು ದ ಅಶೋಕ ರೈಸ್ ಕಂಟೆಂಟ್ ಮೇಲೆ ನಂಬಿಕೆ ಇರುವುದರಿಂದ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.
ಸತೀಶ್ ಅವರ ಹುಮ್ಮಸ್ಸು, ಸಿದ್ಧಗೊಳಿಸಿರುವ ಶೋರೀಲ್, ಚಿತ್ರೀಕರಣಗೊಂಡ ದೃಶ್ಯಗಳು ಅಶೋಕ ರೈಸ್ ಮೇಲೆ ಕುತೂಹಲ ಹುಟ್ಟಿಸುವಂತಿವೆ. ಬಿ.ಸುರೇಶ್, ಅಚ್ಯುತ್ ಕುಮಾರ್, ಗೋಪಾಲ ಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೀಯಾ, ಯಶ್ ಶೆಟ್ಟಿ ತಾರಾಬಳಗದಲ್ಲಿದ್ದಾರೆ. ವರ್ಧನ್ ನರಹರಿ, ಜೈಷ್ಣವಿ, ನೀನಾಸಂ ಸತೀಶ್ ನಿರ್ಮಾಣ ಮಾಡುತ್ತಿದ್ದಾರೆ. ಲವಿತ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ.