ಡೆವಿಲ್ ಸಿನಿಮಾದ ರೀಲ್ ನಾಯಕನಾದ ದರ್ಶನ್ ತೂಗುದೀಪ ಹಾಗೂ ಇದೇ ಸಿನಿಮಾದ ಖಳನಾಯಕನಾಗಿರುವ ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಗೌಡ ಅವರಿಗೆ ನಿಜ ಜೀವನದಲ್ಲಿ ಬೆಂಗಳೂರು ನಗರದ ಎಸಿಪಿ ಚಂದನ್ ಅವರು ರಿಯಲ್ ಡೆವಿಲ್ ಆಗಿದ್ದಾರೆ.
ಡೆವಿಲ್ ಸಿನಿಮಾದ ಚಿತ್ರೀಕರಣದ ವೇಳೆ ಈ ಸಿನಿಮಾದ ನಾಯಕ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಕೇಸಿನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಎಸಿಪಿ ಚಂದನ್ ಅವರು ಮೈಸೂರಿಗೆ ಹೋಗಿ ಹೋಟೆಲ್‌ನಲ್ಲಿ ಜಿಮ್ ಮಾಡುತ್ತಿದ್ದ ನಟ ದರ್ಶನ್‌ನನ್ನು ಬಂಧಿಸಿ ಪೊಲೀಸ್ ಠಾಣೆಗೆ ಎತ್ತಾಕಿಕೊಂಡು ಬಂದಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಪ್ರಮುಖ ಆರೋಪಿ ಎಂಬುದು ಸಾಬೀತಾಗುತ್ತಿದ್ದಂತೆ ದರ್ಶನ್‌ನನ್ನು ವಿಚಾರಣೆ ಮಾಡಿ, ಹಲವು ಸ್ಥಳಗಳಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರ್ ಕೂಡ ಮಾಡಿಸಿದ್ದರು. ಇದಾದ ನಂತರ ದರ್ಶನ್ ತೂಗುದೀಪ ಹಲವು ತಿಂಗಳ ಕಾಲ ಜೈಲು ಪಾಲಾಗಿದ್ದು, ಇದೀಗ ಜಾಮೀನಿನ ಮೇಲೆ ಹೊರಗಿದ್ದಾರೆ. ಹೀಗಾಗಿ, ಡೆವಿಲ್ ಸಿನಿಮಾದ ನಾಯಕ ದರ್ಶನ್‌ಗೆ ನಿಜ ಜೀವನದಲ್ಲಿ ಎಸಿಪಿ ಚಂದನ್ ಡೆವಿಲ್ ಆಗಿ ಕಾಡಿದ್ದರು ಎಂದರೂ ತಪ್ಪಾಗಲಾರದು.
ಇದೀಗ ಇದೇ ಡೆವಿಲ್ ಸಿನಿಮಾದ ಖಳನಾಯಕನಾಗಿರುವ ವಿನಯ್ ಗೌಡ ಅವರನ್ನೂ ಎಸಿಪಿ ಚಂದನ್ ಅವರೇ ಬಂಧಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ರಜತ್ ಕಿಶನ್ ಜೊತೆಗೆ ಸೇರಿಕೊಂಡು ದರ್ಶನ್ ನಟನೆಯ ಕಾಟೇರ ಸಿನಿಮಾದ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು.
ಆದರೆ, ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದರಿಂದ ಅವರ ಮೇಲೆ ಎಫ್‌ಐಆರ್ ದಾಖಲಿಸಿ ವಿಚಾರಣೆಗೆ ಕರೆಸಲಾಗಿತ್ತು. ಎಸಿಪಿ ಚಂದನ್ ಅವರು ವಿಚಾರಣೆ ಮಾಡುವ ವೇಳೆ ಅದು ಪ್ಲಾಸ್ಟಿಕ್ ಮಚ್ಚು ಎಂದಿದ್ದರಿಂದ ವಿನಯ್ ಹಾಗೂ ರಜತ್‌ನಲ್ಲಿ ಬಂಧಿಸಿ ಸೆಲ್‌ನಲ್ಲಿ ಇಡಲಾಗಿತ್ತು.
ಇದಾದ ನಂತರ ರೀಲ್ಸ್ ಮಾಡಿದ ಮಚ್ಚು ತಂದು ಒಪ್ಪಿಸುವಂತೆ ಸೂಚನೆ ನೀಡಲಾಗಿತ್ತು. ರಾತ್ರಿ ವೇಳೆ ರೀಲ್ಸ್ ಮಾಡಿದ ಮಚ್ಚು ಎಂದು ಒಂದು ಪ್ಲಾಸ್ಟಿಕ್ ಮಚ್ಚನ್ನು ತಂದುಕೊಟ್ಟು ವಿನಯ್ ಗೌಡ ಹಾಗೂ ರಜತ್ ಕಿಶನ್ ಪೊಲೀಸರ ಬಂಧನದಿಂದ ಬಿಡುಗಡೆ ಆಗಿ ಮನೆಗೆ ಹೋಗಿದ್ದರು.
ಇದೀಗ ರೀಲ್ಸ್ ಮಾಡಿದ ಮಚ್ಚು ಹಾಗೂ ಅವರು ಒಪ್ಪಿಸಿದ ಮಚ್ಚು ಎರಡಕ್ಕೂ ತಾಳೆಯಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಇದೀಗ ಪುನಃ ಪೊಲೀಸರು ಈ ಇಬ್ಬರ ಮೇಲೆ ಸಾಕ್ಷ್ಯ ನಾಶದ ಕೇಸ್ ದಾಖಲಿಸಿ ವಿಚಾರಣೆಗೆ ಕರೆದು ಮತ್ತೆ ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ. ವಿಚಾರಣೆಗೆ ಹೋಗುವುದಾಗಿ ಮನೆಯಿಂದ ಹೊರಟ ರಜತ್ ಕಿಶನ್ ಪೊಲೀಸ್ ಠಾಣೆಗೆ ಹೋಗದೇ ಫೀನ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.