ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ಇಂದು ಶೂಟಿಂಗ್ ಕ್ಯಾನ್ಸಲ್ ಮಾಡಿ ಕನಕಪುರದಿಂದ ನಾನು ಈ ಕಾರ್ಯಕ್ರಮಕ್ಕೆ ಓಡಿಬಂದೆ. ಎಲ್ಲಿಂದ ಮಾತು ಶುರು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ನೀವು ರಾಜು (ಹಂಸಲೇಖ). ಆದರೆ ನನ್ನನ್ನು ಪರದೆ ಮೇಲೆ ರಾಜನಾಗಿ ಮೆರವಣಿಗೆ ಮಾಡಿಸಿದ್ದು ನೀವೇ. ನಾನು ಪರದೆಯಲ್ಲಿ ಮೆರೆದಿದ್ದರೆ ಅದಕ್ಕೆ ನೀವು, ನಿಮ್ಮ ಹಾಡುಗಳು ಕಾರಣ. ಸಿನಿಮಾ ಓಡುತ್ತಿಲ್ಲ ಅಂತ ಜನ ಹೇಳ್ತಾರೆ. ಆದರೆ ಪ್ರತಿ ವಾರ ಎಲ್ಲರೂ ಸಕ್ಸಸ್ ಮೀಟ್ ಮಾಡುತ್ತಿದ್ದಾರೆ. ಅದೇ ಸಮಸ್ಯೆ ಆಗಿದೆ. 1986ರಲ್ಲಿ ನಾವು ಕೊಡಲು ಶುರು ಮಾಡಿದೆವಲ್ಲ ಅದು ಸಕ್ಸಸ್. ಒಂದು ದಿನವೂ ನಾವು ಸಕ್ಸಸ್ ಅನ್ನು ಹೆಗಲಮೇಲೆ ಹಾಕಿಕೊಳ್ಳಲಿಲ್ಲ" ಎಂದಿದ್ದಾರೆ.
"ಒಂದು ಸಿನಿಮಾ ಆಗುತ್ತಿದ್ದಂತೆಯೇ ಇನ್ನೊಂದು ಸಿನಿಮಾ ಶುರು ಮಾಡುತ್ತಿದ್ದೆವು. ಹಂಸಲೇಖ ನನಗೆ ಸಿಕ್ಕಿದ್ದು ವಿಧಿ ಬರಹದಿಂದ. ನನ್ನ ಮತ್ತು ಹಂಸಲೇಖ ಸ್ನೇಹದಲ್ಲಿ ಲೆಕ್ಕಾಚಾರ ಇರಲಿಲ್ಲ. ನನಗೆ ಲೆಕ್ಕಾಚಾರ ಗೊತ್ತಿಲ್ಲ. ಸಿನಿಮಾ ಮಾಡುವುದು ಮಾತ್ರ ನನಗೆ ಗೊತ್ತು. ಇಂದಿಗೂ ಯಾರಾದರೂ ಪ್ರೇಮಲೋಕ, ರಣಧೀರ ಸಿನಿಮಾಗಳ ಲಾಭ ಎಷ್ಟು ಅಂತ ಕೇಳಿದರೆ ನನಗೆ ಗೊತ್ತಿಲ್ಲ. ಎನ್.ಎಸ್. ರಾವ್ ಅವರು ನನಗೆ ಹಂಸಲೇಖ ಅವರ ಪರಿಚಯ ಮಾಡಿಕೊಟ್ಟರು. ನನ್ನ ಮತ್ತು ಹಂಸಲೇಖ ಸ್ನೇಹ ಕಲ್ಮಶ ಇಲ್ಲದ್ದು. ಹೆಗಲ ಮೇಲೆ ಕೈ ಹಾಕಿಕೊಂಡು ಹೋಗಿಲ್ಲ. ಬಾರಲ್ಲಿ ಕುಳಿತಿಲ್ಲ. ಒಟ್ಟಿಗೆ ಸಿನಿಮಾ ಮಾಡಿದೆವು ಅಷ್ಟೇ’ ಎಂದರು.