ತುಳುನಾಡಿನ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾದ ಮಂಗಳೂರಿನ ಕುತ್ತಾರಿನಲ್ಲಿರುವ ಕೊರಗಜ್ಜ (Kuttar Koragajja)ಕ್ಷೇತ್ರವು ದೇಶದೆಲ್ಲೆಡೆ ಪ್ರಸಿದ್ಧಿ ಪಡೆದಿರುವಂತಹ ದೈವೀಕ ತಾಣವಾಗಿದೆ. ಅಜ್ಜನಲ್ಲಿ ಬಂದು ಭಕ್ತಿಯಿಂದ ಬೇಡಿಕೊಂಡರೆ ಎಲ್ಲಾ ಕೋರಿಕೆಗಳನ್ನು ಅಜ್ಜ ಈಡೇರಿಸುತ್ತಾರೆ ಎನ್ನುವ ನಂಬಿಕೆ ಕೂಡ ಇದೆ. ಹಾಗಾಗಿ ಕರಾವಳಿಯ ಜನರು ಹೆಚ್ಚಾಗಿ ತಮ್ಮ ಎಲ್ಲಾ ಕಾರ್ಯಗಳಲ್ಲೂ ಕೊರಗಜ್ಜನನ್ನು ನೆನಪಿಸಿಕೊಂಡೆ ಕೆಲಸ ಮಾಡ್ತಾರೆ.
ಸ್ಯಾಂಡಲ್ವುಡ್ ನ ಅನೇಕ ನಟ, ನಟಿಯರು ಈಗಾಗಲೇ ಹಲವಾರು ಬಾರಿ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಮತ್ತು ಗೀತಾ ದಂಪತಿಗಳು ಮಂಗಳೂರಿನ ಹೊರವಲಯದಲ್ಲಿರುವ ಕುತ್ತಾರು ಕ್ಷೇತ್ರಕ್ಕೆ ಭೇಟಿ ನೀಡಿ, ಸೇವೆ ಸಲ್ಲಿಸಿ ಬಂದಿದ್ದಾರೆ.
ಕೊರಗಜ್ಜನ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿರುವ ಶಿವಣ್ಣ, ಮಂಗಳೂರಿಗೆ ಬಂದಾಗಲೆಲ್ಲಾ ಇಲ್ಲಿ ಬರುತ್ತಿರುತ್ತಾರಂತೆ. ಇದೀಗ ಕ್ಷೇತ್ರಕ್ಕೆ ಆಗಮಿಸಿರುವ ದಂಪತಿಗಳು, ಅಜ್ಜನಿಗೆ ವೀಳ್ಯದೆಲೆ, ಚಕ್ಕುಲಿ ಇಟ್ಟು ನಮಸ್ಕರಿಸಿದ್ದಾರೆ. ಈ ಕ್ಷೇತ್ರಕ್ಕೆ ಬಂದಾಗಲೆಲ್ಲಾ ಮನಸಿಗೆ ನೆಮ್ಮದಿ ಸಿಗುತ್ತೆ ಎಂದು ಹೆಳಿದ್ದಾರೆ ಶಿವಣ್ಣ.
ಅಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಕರಾವಳಿಯಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ. ಇಲ್ಲಿ ಭೇಟಿ ನೀಡಿದಾಗ ನನಗೆ ಏನೋ ಒಂದು ರೀತಿಯ ನೆಮ್ಮದಿ ಸಿಗುತ್ತೆ. ಕೊರಗಜ್ಜನಲ್ಲಿ ನನಗೆ ನಂಬಿಕೆ ಇದೆ. ಇಲ್ಲಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರೆ ಎಲ್ಲಾ ಒಳ್ಳೆದಾಗುತ್ತೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.
ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಗಳು ಶೃಂಗೇರಿ, ಉಡುಪಿ ಶ್ರೀಕೃಷ್ಣ ಮಠ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಕೊರಗಜ್ಜನ ಕ್ಷೇತ್ರಗಳಿಗೆ ಭೇಟಿ ನೀಡಿ, ಸದೃಢ ನಂಬಿಕೆಯೊಂದಿಗೆ ಎಲ್ಲರ ಜೀವನ ಚೆನ್ನಾಗಿರಲಿ ಎಂದು ಪ್ರಾರ್ಥನೆ ಮಾಡಿರೋದಾಗಿ ತಿಳಿಸಿದ್ದಾರೆ.
ಇನ್ನು ಶಿವರಾಜ್ ಕುಮಾರ್ ಸಿನಿಮಾಗಳ ಬಗ್ಗೆ ಹೇಳೋದಾದ್ರೆ ಶಿವಣ್ಣ ಸದ್ಯಕ್ಕಂತೂ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷಿತ ಭೈರಾತಿ ರಣಗಲ್ (Bhairathi Ranagal) ಸಿನಿಮಾ ನವಂಬರ್ 15ರಂದು ಬಿಡುಗಡೆಯಾಗಲಿದೆ. ಇದನ್ನ ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ. ಇನ್ನು ರಾಜ್ ಬಿ ಶೆಟ್ಟಿ, ಉಪೇಂದ್ರ ಜೊತೆ ನಟಿಸಲಿರುವ 45 ಸಿನಿಮಾ ಕೂಡ ಶೂಟಿಂಗ್ ಮುಗಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ.