ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎನ್ನುವುದು ಬಹುತೇಕ ಖಚಿತವಾಗಿದ್ದರೂ, ಅವರು ಮೌನಕ್ಕೆ ಶರಣಾಗಿದ್ದಾರೆ. ಅವರ ಈ ಮೌನದ ಹಿಂದೆ, ಅವರು ನಂಬುವ ನೊಣವಿನಕೆರೆ ಅಜ್ಜಯ್ಯನವರ ಸಲಹೆಯಿದ್ದು, ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾತನಾಡದಂತೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
ಕಳೆದೊಂದು ವರ್ಷಗಳಿಂದ ಮುಖ್ಯಮಂತ್ರಿ ಖುರ್ಚಿಗಾಗಿ ನಡೆಯುತ್ತಿದ್ದ ಜಟಾಪಟಿ ಒಂದು ಹಂತದವರೆಗೆ ಬಂದು ನಿಂತಿದೆ. ನಿನ್ನೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿಯಾಗಿದೆ. ಇದೀಗ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಇನ್ನು ಕುತೂಹಲ, ಊಹಾಪೋಹಗಳು ಇದ್ದರೂ ಡಿ.ಕೆ.ಶಿವಕುಮಾರ್ ಅವರೇ ಎನ್ನುವುದು ಪಕ್ಕಾ ಆಗಿದೆ. ಇದರ ಹೊರತಾಗಿಯೂ ಡಿಕೆಶಿ ಅವರು ಯಾರ ಪ್ರಶ್ನೆಗೂ ಉತ್ತರಿಸದೇ, ಮೌನಕ್ಕೆ ಜಾರಿದ್ದು ಆಶ್ಚರ್ಯಕ್ಕೆ ಕಾರಣವಾಗಿತ್ತು. ಅದಕ್ಕೆ ಇದೀಗ ಉತ್ತರ ಸಿಕ್ಕಿದೆ.
26
ಮೌನದಿಂದ ಇರಲಿ ಸಲಹೆ
ಅಷ್ಟಕ್ಕೂ ಡಿಕೆಶಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಮೌನದಿಂದ ಇರುವಂತೆ ಅವರು ಹಲವು ವರ್ಷಗಳಿಂದ ನಂಬಿರುವ ನೊಣವಿನಕೆರೆ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು (ನೊಣವೆಕೆರೆ ಅಜ್ಜಯ್ಯ -Nonavinakere Ajjayya) ಅವರೇ ಹೇಳಿರುವುದಾಗಿ ತಿಳಿದುಬಂದಿದೆ. ಈ ಹಿಂದೆಯೇ ಅಜ್ಜಯ್ಯ ಅವರು ಡಿಕೆಶಿ ಮುಖ್ಯಮಂತ್ರಿಯಾಗುವ ಸೂಚನೆ ಕೊಟ್ಟಿದ್ದರು. ಇದೀಗ ಅವರು ಮೌನವೇ ಲೇಸು ಎಂದು ಹೇಳಿದ್ದಾರೆ ಎನ್ನಲಾಗಿದೆ.
36
ಮಠದ ಭಕ್ತರಾಗಿದ್ದಾರೆ
ನೊಣವಿನಕೆರೆ ಮಠದ ಆಶೀರ್ವಾದ ಡಿಕೆ ಶಿವಕುಮಾರ್ ಅವರ ಮೇಲಿದೆ, ಅವರು ಮಠದ ಭಕ್ತರಾಗಿದ್ದಾರೆ. ಡಿಕೆ ಶಿವಕುಮಾರ್ ಅವರು, ಮುಖ್ಯಮಂತ್ರಿ ಆಗೇ ಆಗುತ್ತಾರೆ. ಅವರು, ಉತ್ತಮ ಸಂಘಟನಾಕಾರರು ಎಂದು ಶ್ರೀಗಳು, ಕಳೆದ ವಾರ ಹೇಳಿದ್ದರು. ಚುನಾವಣೆಯ ವೇಳೆ, ನಾಮಪತ್ರ ಸಲ್ಲಿಸುವಾಗ, ಬಿ- ಫಾರಂ ವಿತರಿಸುವಾಗ, ಈ ಎಲ್ಲಾ ಕೆಲಸವನ್ನು ಆರಂಭಿಸುವ ಮುನ್ನಾ ಅಜ್ಜಯ್ಯನ ಆಶೀರ್ವಾದವನ್ನು ಪಡೆದೇ ಮುಂದಕ್ಕೆ ಹೋಗುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.
ಮಾತು ಆಡಿದರೆ ಮುತ್ತು ಒಡೆದು ಹೋಗಲಿದೆ ಎಂದು ಡಿ. ಕೆ ಶಿವಕುಮಾರ್‌ಗೆ (DK Shivakumar) ಅವರು ನೊಣವಿನಕೆರೆ ಅಜ್ಜಯ್ಯ ಸಲಹೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಯಾವುದೇ ಮಾತನಾಡದಂತೆ ಅಜ್ಜಯ್ಯ ಎಚ್ಚರಿಕೆ ಕೊಟ್ಟಿದ್ದಾರೆ. ಮಾತನಾಡಿದರೆ ಕೆಲಸ ಕೆಡಲಿದೆ ಎಂದಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.
56
ಧರ್ಮದ ಧ್ವಜ ಕೊಟ್ಟಿದ್ದೇವೆ
ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನೊಣವಿನಕೆರೆ ಅಜ್ಜಯ್ಯ, ಅವರಿಗೆ ಶ್ರೀಮಠದ ಆಶೀರ್ವಾದ ಇದೆ. ಮುಂದೆ ಅವರು ರಾಜನಾಗಿ ಒಳಿತು ಮಾಡಲಿದ್ದಾರೆ ಎನ್ನುವ ನಂಬಿಕೆ ಇದೆ. ಅವರು ಯಾವಾಗ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವುದು ಅವರ ರಾಜಕೀಯದ ಮಾತುಕತೆಗೆ ಬಿಟ್ಟಿರುವ ವಿಷಯ. ನಾನು ಹೇಳುವಷ್ಟು ಹೇಳಿದ್ದೇನೆ. ಧರ್ಮದ ಧ್ವಜ ಕೊಟ್ಟಿದ್ದೇವೆ. ಮುಂದಿನ ದಿನ ಒಳಿತಾಗಲಿ, ಕಾದು ನೋಡೋಣ ಎಂದು ಅಜ್ಜಯ್ಯ ಹೇಳಿದ್ದಾರೆ.
66
ತೋಡಿದ ಬಾವಿಗೆ ಜಲವೇ ಸಾಕ್ಷಿ
ಉತ್ತಮ ರಾಜ ಪ್ರತ್ಯಕ್ಷ ದೇವತಾ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಮಾತನ್ನು ಅವರು ಪಾಲಿಸಲಿ ಎನ್ನುವುದು ನಮ್ಮ ಹಾರೈಕೆ. "ಮಾಡಿದ ಪಾಪಕ್ಕೆ ಮನವೇ ಸಾಕ್ಷಿ, ತೋಡಿದ ಬಾವಿಗೆ ಜಲವೇ ಸಾಕ್ಷಿ ಎಂಬಂತೆ ಮುಂದೆ ಏನಾಗುತ್ತದೆಯೋ ನೋಡೋಣ ಎಂದು ಅಜ್ಜಯ್ಯ ಹೇಳಿದ್ದಾರೆ. (ಈ ಗಾದೆ ಮಾತಿನ ಅರ್ಥ, ಮನುಷ್ಯ ತಾನು ಮಾಡಿದ ತಪ್ಪು ಅಥವಾ ಪಾಪದ ಕೆಲಸಗಳಿಗೆ ಬೇರೆ ಯಾರೂ ಸಾಕ್ಷಿ ಬೇಕಾಗಿಲ್ಲ; ಅವನ ಒಳಮನಸ್ಸಿಗೇ ತಾನು ಮಾಡಿದ್ದು ಸರಿ ಅಥವಾ ತಪ್ಪು ಎಂಬುದು ಚೆನ್ನಾಗಿ ತಿಳಿದಿರುತ್ತದೆ ಎನ್ನುವುದು)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.