
ದೆಹಲಿಯ ಲಾಜ್‌ಪತ್ ನಗರ, ಸರೋಜಿನಿ ನಗರದಂತಹ ಫೇಮಸ್ ಸ್ಟ್ರೀಟ್ ಮಾರ್ಕೆಟ್‌ಗಳಿಗೆ ಹೋಗಿದ್ರೆ ನಿಮಗೂ ಈ ಅನುಭವ ಆಗಿರುತ್ತೆ. ಅಲ್ಲಿ ಶಾಪಿಂಗ್ ಮಾಡೋದು ಎಷ್ಟು ಖುಷಿ ಕೊಡುತ್ತೋ, ಅಷ್ಟೇ ಸುಸ್ತು ಕೂಡ ಆಗುತ್ತೆ. ಜನಜಂಗುಳಿಯ ಮಧ್ಯೆ ನುಗ್ಗೋದು, ಬೆವರಿಳಿಸುತ್ತಾ ಬಾರ್ಗೇನ್ ಮಾಡೋದು, ಅದರ ಜೊತೆಗೆ ಭಾರವಾದ ಶಾಪಿಂಗ್ ಬ್ಯಾಗ್‌ಗಳನ್ನು ಹೊತ್ತುಕೊಂಡು ಓಡಾಡೋದು ಅಂದ್ರೆ ಸಾಕಪ್ಪಾ ಸಾಕು ಅನಿಸಿಬಿಡುತ್ತೆ. ದೆಹಲಿಯ ಬಿಸಿಲು, ಟ್ರಾಫಿಕ್, ಉದ್ದುದ್ದ ನಡಿಗೆ ಸೇರಿಕೊಂಡರೆ, ಒಂದು ಸಿಂಪಲ್ ಶಾಪಿಂಗ್ ಟ್ರಿಪ್ ದೊಡ್ಡ ಟಾಸ್ಕ್ ಆಗಿ ಬದಲಾಗುತ್ತೆ
ಈಗ, ದೆಹಲಿ ಮೂಲದ 'ಕ್ಯಾರಿಮೆನ್' (CarryMen) ಎಂಬ ಸ್ಟಾರ್ಟಪ್ ಈ ಸಮಸ್ಯೆಗೆ ಒಂದು ಸರಳ ಪರಿಹಾರ ನೀಡಲು ಮುಂದಾಗಿದೆ. 'ನೀವು ಶಾಪಿಂಗ್ ಮಾಡಿ, ನಾವು ಬ್ಯಾಗ್ ಹೊರುತ್ತೇವೆ' ಎಂಬ ಇವರ ಕಾನ್ಸೆಪ್ಟ್, ಆನ್‌ಲೈನ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆಗಳು ಕೂಡ ಶುರುವಾಗಿವೆ.
ಕ್ಯಾರಿಮೆನ್ ಸಂಸ್ಥಾಪಕರು ಹೇಳುವ ಪ್ರಕಾರ, ಈ ಐಡಿಯಾ ಹುಟ್ಟಿದ್ದೇ ಅವ್ರ ಸ್ವಂತ ಅನುಭವದಿಂದ. ದೆಹಲಿಯಲ್ಲೇ ಬೆಳೆದ ಅವರು, ತಮ್ಮ ಕುಟುಂಬದವರ ಜೊತೆ ಜನನಿಬಿಡ ಮಾರುಕಟ್ಟೆಗಳಿಗೆ ಹೋದಾಗ ಆಗುತ್ತಿದ್ದ ಕಷ್ಟಗಳೇ ಈ ಹೊಸ ಸೇವೆಗೆ ಪ್ರೇರಣೆಯಾಯ್ತು.
ಇಂಡಿಯಾ ಟುಡೇ ವರದಿಯ ಪ್ರಕಾರ, ಜನರಿಗೆ ಶಾಪಿಂಗ್ ಮಾಡುವುದು ಇಷ್ಟ, ಆದರೆ ಅದರ ಜೊತೆ ಬರುವ ದೈಹಿಕ ಶ್ರಮ ಇಷ್ಟವಾಗುವುದಿಲ್ಲ. ಭಾರವಾದ ಬ್ಯಾಗ್‌ಗಳನ್ನು ಹೊರುವುದು, ಕ್ಯೂನಲ್ಲಿ ನಿಲ್ಲುವುದು, ಕೂರಲು ಜಾಗ ಹುಡುಕುವುದು, ಜನನಿಬಿಡ ಗಲ್ಲಿಗಳಲ್ಲಿ ನಡೆಯುವುದು ಬೇಗನೆ ಸುಸ್ತು ತರಿಸುತ್ತದೆ.
ಈ ಸಮಸ್ಯೆಯನ್ನು ಬಗೆಹರಿಸಲು, ಕಂಪನಿಯು ತರಬೇತಿ ಪಡೆದ ಶಾಪಿಂಗ್ ಸಹಾಯಕರನ್ನು ಪರಿಚಯಿಸಿದೆ. ಇವರು ಗ್ರಾಹಕರ ಜೊತೆಯಲ್ಲೇ ಇದ್ದು, ಅವರಿಗೆ ಸಹಾಯ ಮಾಡುತ್ತಾರೆ.
ಗಂಟೆಗೆ 149 ರೂಪಾಯಿ ಮತ್ತು 30 ನಿಮಿಷಕ್ಕೆ 79 ರೂಪಾಯಿ ಶುಲ್ಕದಲ್ಲಿ, ಗ್ರಾಹಕರು ಎರಡು, ಮೂರು ಅಥವಾ ನಾಲ್ಕು ಗಂಟೆಗಳ ಪ್ಯಾಕೇಜ್‌ಗೆ ಸಹಾಯಕನನ್ನು ನೇಮಿಸಿಕೊಳ್ಳಬಹುದು. ಈ ಸಹಾಯಕರು ಶಾಪಿಂಗ್ ಬ್ಯಾಗ್‌ಗಳನ್ನು ಹೊರುವುದು, ಜನಜಂಗುಳಿಯಲ್ಲಿ ದಾರಿ ಮಾಡಿಕೊಡುವುದು, ಫುಡ್ ಕ್ಯೂನಲ್ಲಿ ನಿಲ್ಲುವುದು, ಪಾರ್ಕಿಂಗ್ ಅಥವಾ ಮೆಟ್ರೋ ಸ್ಟೇಷನ್‌ಗೆ ದಾರಿ ತೋರಿಸುವುದು ಹೀಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಾರೆ.
ಸದ್ಯಕ್ಕೆ ಕಂಪನಿಯು ಲಾಜ್‌ಪತ್ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಚಾಂದಿನಿ ಚೌಕ್‌ಗೂ ವಿಸ್ತರಿಸುವ ಯೋಜನೆ ಹೊಂದಿದೆ.
ಈ ಸೇವೆಯನ್ನು ಹೆಚ್ಚಾಗಿ ಬಳಸುತ್ತಿರುವವರು ಬಟ್ಟೆ, ಕರ್ಟನ್, ಬೆಡ್‌ಶೀಟ್ ಮತ್ತು ಮನೆಬಳಕೆಯ ವಸ್ತುಗಳನ್ನು ಖರೀದಿಸಲು ಬರುವ ವಯಸ್ಸಾದ ಮಹಿಳೆಯರು ಎಂದು ಸ್ಟಾರ್ಟಪ್ ಹೇಳಿದೆ.
ಸಂಸ್ಥಾಪಕರ ಪ್ರಕಾರ, ಹಿರಿಯ ಗ್ರಾಹಕರಿಗೆ ಐಷಾರಾಮಿ ಸೇವೆಗಿಂತ ಹೆಚ್ಚಾಗಿ ಸರಳ ಬೆಂಬಲ ಬೇಕಾಗುತ್ತದೆ. ಕೆಲವರಿಗೆ ಬ್ಯಾಗ್ ಹೊರುವವರು, ಊಟ ಆರ್ಡರ್ ಮಾಡಲು ಸಹಾಯ ಮಾಡುವವರು ಅಥವಾ ಶಾಪಿಂಗ್ ಮಧ್ಯೆ ಕೂರಲು ಆರಾಮದಾಯಕ ಜಾಗ ಹುಡುಕಿಕೊಡುವವರು ಬೇಕು.
ಪರಿಶೀಲಿಸಿದ ಶಾಪಿಂಗ್ ಸಹಾಯಕರು
ಹಲವಾರು ಅಂಗಡಿಗಳಲ್ಲಿ ಸಹಾಯ
ಸುರಕ್ಷಿತ ಮತ್ತು ಆರಾಮದಾಯಕ ಮಾರುಕಟ್ಟೆ ಶಾಪಿಂಗ್
ಗ್ರಾಹಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲು, ಕಂಪನಿಯು ಮಡಚಬಹುದಾದ ಪೋರ್ಟಬಲ್ ಚೇರ್‌ಗಳನ್ನು ಸಹ ಪರಿಚಯಿಸಿದೆ. ಗ್ರಾಹಕರಿಗೆ ಸುಸ್ತಾದರೆ, ಸಹಾಯಕರು ಮಾರುಕಟ್ಟೆಯ ಮಧ್ಯದಲ್ಲೇ ಚೇರ್ ಹಾಕಿ ಕೊಡುತ್ತಾರೆ, ಆಗ ಅವರು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬಹುದು.
ಬಿಸಿಲು ಮತ್ತು ಮಳೆಯಿಂದ ರಕ್ಷಿಸಲು ಛತ್ರಿ, ಮೊಬೈಲ್ ಚಾರ್ಜಿಂಗ್ ಸಪೋರ್ಟ್, ಪವರ್ ಬ್ಯಾಂಕ್ ಮತ್ತು ನೀರಿನ ವ್ಯವಸ್ಥೆಯನ್ನೂ ಈ ಸೇವೆ ಒಳಗೊಂಡಿದೆ.
ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳೊಂದಿಗೆ ಬರುವ ಪೋಷಕರು ಕೂಡ ಕ್ಯಾರಿಮೆನ್ ಸೇವೆಯನ್ನು ಬುಕ್ ಮಾಡುತ್ತಿದ್ದಾರೆ. ಹೆಚ್ಚುವರಿ ಗಂಟೆಯ ಶುಲ್ಕದ ಮೇಲೆ ಕಂಪನಿಯು ಸ್ಟ್ರಾಲರ್ (ಮಕ್ಕಳ ಗಾಡಿ) ಬಾಡಿಗೆಗೆ ನೀಡುತ್ತದೆ. ಇದರಿಂದ ಕುಟುಂಬಗಳು ಜನನಿಬಿಡ ಮಾರುಕಟ್ಟೆಗಳಲ್ಲಿ ಹೆಚ್ಚು ಆರಾಮವಾಗಿ ಓಡಾಡಬಹುದು.
ಸದ್ಯಕ್ಕೆ ಒಬ್ಬ ಸಹಾಯಕ 12 ಕೆ.ಜಿ ವರೆಗೆ ತೂಕವನ್ನು ಹೊರಬಲ್ಲ. ಗ್ರಾಹಕರು ಹೆಚ್ಚು ಭಾರವಾದ ವಸ್ತುಗಳನ್ನು ಹೊಂದಿದ್ದರೆ, ಹೆಚ್ಚುವರಿ ಸಹಾಯಕನನ್ನು ನೇಮಿಸಿಕೊಳ್ಳಬಹುದು.
ಆರಂಭದಲ್ಲೇ ಭರ್ಜರಿ ಬೆಳವಣಿಗೆ ಕಂಡ ಸ್ಟಾರ್ಟಪ್
ಏಪ್ರಿಲ್‌ನಲ್ಲಿ ಅಧಿಕೃತವಾಗಿ ಪ್ರಾರಂಭವಾದ ಈ ಕಂಪನಿ, ಮೊದಲ ತಿಂಗಳಲ್ಲೇ 50ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪೂರ್ಣಗೊಳಿಸಿದೆ ಎಂದು ಹೇಳಿಕೊಂಡಿದೆ.
ಕುತೂಹಲಕಾರಿ ಸಂಗತಿ ಎಂದರೆ, ಈ ಸ್ಟಾರ್ಟಪ್ ಯಾವುದೇ ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್ ಕ್ಯಾಂಪೇನ್‌ಗಳನ್ನು ಮಾಡಿಲ್ಲ. ಬದಲಾಗಿ, ಬಾಯಿ ಮಾತಿನ ಪ್ರಚಾರ ಮತ್ತು ಸೋಷಿಯಲ್ ಮೀಡಿಯಾ ಚರ್ಚೆಗಳಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿದೆ.
ಈ ಕಾನ್ಸೆಪ್ಟ್ ಆನ್‌ಲೈನ್‌ನಲ್ಲಿ ವೈರಲ್ ಆಗಲು ಕಾರಣ, ಅನೇಕರಿಗೆ ಈ ಐಡಿಯಾ ತಮಾಷೆಯಾಗಿ, ಆದರೆ ಅದೇ ಸಮಯದಲ್ಲಿ ಆಶ್ಚರ್ಯಕರವಾಗಿ ಉಪಯುಕ್ತವೆನಿಸಿದ್ದು.
ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ
ಇನ್‌ಸ್ಟಾಗ್ರಾಮ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸೇವೆಯ ಕುರಿತಾದ ವಿಡಿಯೋಗಳು ಮತ್ತು ಪೋಸ್ಟ್‌ಗಳು ಹರಿದಾಡಲು ಪ್ರಾರಂಭಿಸಿದ ನಂತರ, ಸ್ಟಾರ್ಟಪ್‌ಗೆ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಅನೇಕ ಬಳಕೆದಾರರು ಈ ಐಡಿಯಾವನ್ನು ಹೊಗಳಿದ್ದಾರೆ ಮತ್ತು ಭಾರತದ ಜನನಿಬಿಡ ಮಾರುಕಟ್ಟೆಗಳಿಗೆ ಇದು ಉಪಯುಕ್ತ ಪರಿಹಾರ ಎಂದು ಕರೆದಿದ್ದಾರೆ.
ಕೆಲವರು, "ತುಂಬಾ ಒಳ್ಳೆ ಕಾನ್ಸೆಪ್ಟ್," ಎಂದು ಕಾಮೆಂಟ್ ಮಾಡಿದರೆ, ಇನ್ನು ಕೆಲವರು, "ಅಬ್ಬಾ! ಕೊನೆಗೂ ಯಾರೋ ಇದರ ಬಗ್ಗೆ ಯೋಚಿಸಿದ್ರಲ್ಲ," ಮತ್ತು "ಇದೇ ತರಹ ಚಾಂದಿನಿ ಚೌಕ್‌ನಲ್ಲೂ ಬೇಕು," ಎಂದು ಬರೆದಿದ್ದಾರೆ.
ಹಲವರು ದೈಹಿಕ ಸಹಾಯದ ಬದಲು ಭಾವನಾತ್ಮಕ ಸಹಾಯದ ಬಗ್ಗೆ ತಮಾಷೆ ಮಾಡಿದ್ದಾರೆ. ಒಬ್ಬ ಬಳಕೆದಾರ, "ನನ್ನ ಎಮೋಷನಲ್ ಬ್ಯಾಗೇಜ್ ಕೂಡಾ ಹೊತ್ತಾರಾ?" ಎಂದು ಕೇಳಿದ್ದಾರೆ.
ಇನ್ನು ಕೆಲವರು, ಜನನಿಬಿಡ ಸ್ಥಳಗಳಲ್ಲಿ ಅಪರಿಚಿತರನ್ನು ದುಬಾರಿ ಶಾಪಿಂಗ್ ಬ್ಯಾಗ್‌ಗಳು, ಮಕ್ಕಳು ಅಥವಾ ವೈಯಕ್ತಿಕ ವಸ್ತುಗಳೊಂದಿಗೆ ನಂಬಬಹುದೇ ಎಂದು ಪ್ರಶ್ನಿಸಿದ್ದಾರೆ.
"ಮದುವೆ ಲಹೆಂಗಾ ಅಥವಾ ದುಬಾರಿ ಸೀರೆಗಳನ್ನು ಕೊಂಡಾಗ, ಆ ವ್ಯಕ್ತಿ ಬ್ಯಾಗ್ ಸಮೇತ ಓಡಿಹೋದರೆ ಏನು ಗತಿ?" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರ, "ಇದು ರಿಸ್ಕ್ ಅಲ್ವಾ? ಆ ವ್ಯಕ್ತಿ ಬ್ಯಾಗ್, ಹೆಂಡತಿ, ಮಕ್ಕಳ ಸಮೇತ ಮಾಯವಾದರೆ?" ಎಂದು ಬರೆದಿದ್ದಾರೆ.
ಕೆಲವು ಸೋಷಿಯಲ್ ಮೀಡಿಯಾ ಬಳಕೆದಾರರು ಈ ಸ್ಟಾರ್ಟಪ್ ಅನ್ನು ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಕ್ಕೆ ಹೋಲಿಸಿದ್ದಾರೆ. ಆದಾಯಕ್ಕಾಗಿ ಜನರು ಈಗ ಯಾವುದೇ ರೀತಿಯ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.
ಅದೇ ಸಮಯದಲ್ಲಿ, ಅನೇಕರು ಈ ಸೇವೆಯನ್ನು ರೈಲ್ವೆ ಕೂಲಿಗಳು ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ಈಗಾಗಲೇ ಇರುವ ಸಹಾಯಕರಿಗೆ ಹೋಲಿಸಿದ್ದಾರೆ.
ಆಧುನಿಕ ಪರಿಹಾರ, ಭಾವನಾತ್ಮಕ ನೆನಪು
ಕ್ಯಾರಿಮೆನ್‌ನಂತಹ ಸ್ಟಾರ್ಟಪ್‌ಗಳು ಶಾಪಿಂಗ್‌ನ ದೈಹಿಕ ಶ್ರಮವನ್ನು ಕಡಿಮೆ ಮಾಡಬಹುದಾದರೂ, ಶಾಪಿಂಗ್ ನೆನಪುಗಳು ಹೆಚ್ಚಾಗಿ ನಮ್ಮೊಂದಿಗೆ ಬರುವ ಪ್ರೀತಿಪಾತ್ರರೊಂದಿಗೆ ಬೆಸೆದುಕೊಂಡಿರುತ್ತವೆ ಎಂಬುದನ್ನು ಅನೇಕರು ಆನ್‌ಲೈನ್‌ನಲ್ಲಿ ನೆನಪಿಸಿದ್ದಾರೆ.
ವರ್ಷಗಳಿಂದ, ತಂದೆಯಂದಿರು, ಸಹೋದರರು, ಗಂಡಂದಿರು ಮತ್ತು ಸ್ನೇಹಿತರು ಮೌನವಾಗಿ ಬ್ಯಾಗ್‌ಗಳನ್ನು ಹೊತ್ತು, ಟ್ರಯಲ್ ರೂಮ್‌ಗಳ ಹೊರಗೆ ಕಾದು, ಕೇವಲ ಒಟ್ಟಿಗೆ ಸಮಯ ಕಳೆಯಲು ಜನನಿಬಿಡ ಮಾರುಕಟ್ಟೆಗಳಲ್ಲಿ ಅಲೆದಾಡಿದ್ದಾರೆ.
ಒಂದು ವೇಳೆ, ನಿಮ್ಮ ಪ್ರೀತಿಪಾತ್ರರಿಗೆ ಅಂತ್ಯವಿಲ್ಲದ ಶಾಪಿಂಗ್ ಬ್ಯಾಗ್‌ಗಳನ್ನು ಹೊರುವ ಕಷ್ಟದಿಂದ ಬ್ರೇಕ್ ಕೊಡಿಸಬೇಕು ಅನ್ಸಿದ್ರೆ, 'ಕ್ಯಾರಿಮೆನ್' ಒಂದು ಒಳ್ಳೆ ಆಯ್ಕೆ ಆಗಬಹುದು. ಈ ಕ್ಯಾರಿಮೆನ್‌ಗಳು ನಿಮ್ಮ ಶಾಪಿಂಗ್ ಅನ್ನು ಹಗುರ ಮತ್ತು ಹೆಚ್ಚು ಆರಾಮದಾಯಕವಾಗಿಸಬಹುದು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.