ಸಿನಿಮಾದ ಐಟಂ ಸಾಂಗ್ ಮಕ್ಕಳಿಗೆ ತೋರಿಸಬೇಡಿ: ಪೋಷಕರಿಗೆ ಎಚ್ಚರಿಕೆ ಕೊಟ್ಟ ಮನೋವಿಜ್ಞಾನಿಗಳು!

First Published Oct 2, 2024, 4:52 PM IST

ಮಕ್ಕಳ ಮೇಲೆ ಸಿನಿಮಾ ಹಾಡುಗಳು, ವಿಶೇಷವಾಗಿ ಐಟಂ ಸಾಂಗ್ಸ್‌ಗಳ ಪ್ರಭಾವ ಹೆಚ್ಚುತ್ತಿದ್ದು, ಇದು ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಮನೋವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಒಂದು ವೇಳೆ ಮಕ್ಕಳಿಗೆ ಇಂತಹ ಐಟಂ ಸಾಂಗ್ ತೋರಿಸುವುದರಿಂದ ಯಾವೆಲ್ಲಾ ದುಷ್ಪರಿಣಾಮ ಬೀರುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಮಕ್ಕಳ ಮೇಲೆ ಸಿನಿಮಾಗಳ ಪ್ರಭಾವ ಸಮಾಜದ ಮೇಲೆ ತುಂಬಾ ಹೆಚ್ಚಾಗುತ್ತಿದೆ. ಇಂದಿನ ಎಲ್ಲ ಮಕ್ಕಳಿಗೆ ಸುಲಭವಾಗಿ ಟಿವಿ ಹಾಗೂ ಮೊಬೈಲ್‌ಗಳು ಲಭ್ಯ ಇರುವುದರಿಂದ ಎಲ್ಲ ಸಿನಿಮಾ, ವೆಬ್ ಸ್ಟೋರೀಸ್ ಹಾಗೂ ಸೋಶಿಯಲ್ ಮೀಡಿಯಾ ರೀಲ್ಸ್ ನೋಡುವ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಯುವ ಜನತೆ ಮತ್ತು ಮಕ್ಕಳ ಮೇಲೆ ಈ ಪ್ರಭಾವ ಹೆಚ್ಚಿದೆ. ಸೆಲ್ ಫೋನ್ ಬಂದ ಮೇಲಂತೂ ಈ ಪ್ರಭಾವ ಇಮ್ಮಡಿಯಾಗಿದೆ. ಆದರೆ, ಮಕ್ಕಳಿಗೆ ಐಟಂ ಸಾಂಗ್ಸ್ ಪ್ರಭಾವ ಬೀರುತ್ತಿದ್ದು, ಅವುಗಳನ್ನು ತೋರಿಸಬೇಡಿ ಎಂದು ಮನೋವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಇನ್ನೂ ಮಕ್ಕಳಿಗೆ ಸಮಾಜದಲ್ಲಿ ತಾವು ಏನು ಮಾಡಿದರೆ ಸರಿ, ಏನು ಮಾಡಿದರೆ ತಪ್ಪು ಎಂಬ ಅರಿವು ಇರುವುದಿಲ್ಲ. ಹೀಗೆ ಸರಿ ತಪ್ಪುಗಳನ್ನು ಗುರುತಿಸುವ ಹಂತಕ್ಕೂ ಮೊದಲೇ ಯುವ ಜನತೆ ತಪ್ಪು ದಾರಿ ಹಿಡಿಯೋದಕ್ಕೆ ಸಿನಿಮಾಗಳ ಕೊಡುಗೆ ತುಂಬಾನೇ ಇದೆ. ಅಷ್ಟೇ ಅಲ್ಲ, ಚಿಕ್ಕ ಮಕ್ಕಳು ಸಹ ಸಿನಿಮಾಗಳಲ್ಲಿ ಬರುವ ಅಶ್ಲೀಲ ದೃಶ್ಯಗಳು, ಐಟಂ ಸಾಂಗ್ಸ್, ಮತ್ತು ಇನ್ನಿತರ ದೃಶ್ಯಗಳಿಂದ ಪ್ರಭಾವಿತರಾಗುತ್ತಿದ್ದಾರೆ. ಇವುಗಳ ಬಗ್ಗೆ ಅವರಿಗೆ ಅರ್ಥ ಆಗದಿದ್ದರೂ ಅವುಗಳನ್ನು ಅನುಕರಣೆ ಮಾಡುತ್ತಿದ್ದಾರೆ ಎಂದು ಮನೋವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ, ಮಕ್ಕಳ ಪಾಲನೆಯಲ್ಲಿ ಪೋಷಕರು ಜಾಗರೂಕರಾಗಿರಬೇಕು ಎಂದು ಎಚ್ಚರಿಸುತ್ತಿದ್ದಾರೆ.

Latest Videos


ಮಕ್ಕಳ ಮೇಲೆ ಐಟಂ ಸಾಂಗ್ಸ್ ಪ್ರಭಾವ ಹೇಗಿರುತ್ತದೆ ಗೊತ್ತಾ?

ಮಕ್ಕಳು ವಯಸ್ಸಿಗೆ ಮೀರಿದ ಕೆಲಸಗಳನ್ನು ಮಾಡುತ್ತಿದ್ದರೆ, ಅದನ್ನು ನೋಡುವ ಪೋಷಕರು ಖುಷಿ ಪಡುತ್ತಿದ್ದಾರೆ. ಅದರಲ್ಲೂ ಸಿನಿಮಾ ಹಾಡುಗಳನ್ನು ಹಾಡುವುದು, ಡ್ಯಾನ್ಸ್ ಮಾಡುವುದನ್ನು ನೋಡಿ ತಂದೆ ತಾಯಿಗಳು ಮಕ್ಕಳನ್ನು ಹೊಗಳಿ ಅವರನ್ನು ತುಸು ಹೆಚ್ಚಾಗಿಯೇ ಪ್ರೋತ್ಸಾಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮಕ್ಕಳಿಗೆ ಇದರಿಂದ ತುಂಬಾ ಉಪಯೋಗವಿದೆ ಎಂದು ಭಾವಿಸುತ್ತಿದ್ದಾರೆ. ಆದರೆ ಇದು ಸತ್ಯ ಅಲ್ಲ ಎಂದು ಮನೋ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಸಿನಿಮಾಗಳಲ್ಲಿ ಬರುವ ಐಟಂ ಸಾಂಗ್ಸ್, ಮತ್ತು ಅಶ್ಲೀಲ ಆಲ್ಬಮ್ ಹಾಡುಗಳು ಮಕ್ಕಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಮಕ್ಕಳ ಮನೋತಜ್ಞರು ಎಚ್ಚರಿಸುತ್ತಿದ್ದಾರೆ. ಮನೆಯಲ್ಲಿ, ಪಾರ್ಟಿಗಳಲ್ಲಿ ಕೇಳಿಬರುವ ಸಂಗೀತ ಮಕ್ಕಳನ್ನು ಸುಲಭವಾಗಿ ಆಕರ್ಷಿಸುತ್ತದೆ. ಹಾಗಾಗಿ, ಅವರು ಅವುಗಳನ್ನು ಅನುಕರಣೆ ಮಾಡುತ್ತಾರೆ. ಆ ಹಾಡುಗಳ ಅರ್ಥ ಅವರಿಗೆ ಗೊತ್ತಿಲ್ಲದಿದ್ದರೂ ಅದರಲ್ಲಿ ಬರುವ ಅಶ್ಲೀಲ ಪದಗಳನ್ನು ಅವರು ನೆನಪಿಟ್ಟುಕೊಳ್ಳುವ ಸಾಧ್ಯತೆ ಇರುತ್ತದೆ. ಅಥವಾ ಅದೇ ರೀತಿ ಅಶ್ಲೀಲವಾಗಿ ಡ್ಯಾನ್ಸ್ ಮಾಡುವ ಸಾಧ್ಯತೆ ಕೂಡ ಇರುತ್ತದೆ.

7 ವರ್ಷದ ಹುಡುಗಿ ಪೇಪ್ ಉಂಡೆ ಇಟ್ಟುಕೊಂಡಳು:

ಒಮ್ಮೆ ನಾನು ಒಂದು ಡ್ಯಾನ್ಸ್ ರಿಯಾಲಿಟಿ ಶೋ ಆಡಿಷನ್‌ಗೆ ಹೋಗಿದ್ದೆ. ಆ ಸಮಯದಲ್ಲಿ ಒಬ್ಬ 7 ವರ್ಷದ ಹುಡುಗಿ ತುಂಬಾ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ನಾನು ಗಮನಿಸಿದೆ. ಆ ಹುಡುಗಿ ಎರಡು ಪೇಪರ್ ಚೆಂಡುಗಳನ್ನು ಮಾಡಿಕೊಂಡು ಅದನ್ನು ತನ್ನ ಡ್ರೆಸ್ ಒಳಗೆ ಇಟ್ಟುಕೊಳ್ಳುತ್ತಿರುವುದನ್ನು ನಾನು ನೋಡಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಆ ಹುಡುಗಿ ಹೀಗೆ ಮಾಡುತ್ತಿರುವುದನ್ನು ನೋಡಿ ನನಗೆ ಆಘಾತ ಆಯಿತು ಎಂದು ಮುಂಬೈನ ಮಕ್ಕಳ ಮನೋತಜ್ಞೆ ಮತ್ತು ಪೇರೆಂಟಿಂಗ್ ಕೌನ್ಸಿಲರ್ ಒಬ್ಬರು ಹೇಳಿದ್ದಾರೆ.

ಪೀಡಕರ ಕೈಗೆ ಸಿಕ್ಕು ಬಲಿಪಶು ಆಗಬಹುದು:

ಕೆಲವು ಸಿನಿಮಾ ಹಾಡುಗಳು ಕೇಳುವುದಕ್ಕೆ ತುಂಬಾ ಚೆನ್ನಾಗಿರುತ್ತವೆ. ಆದರೆ ಅದರ ಸಾಹಿತ್ಯ ಮಾತ್ರ ತುಂಬಾ ಕೆಟ್ಟದಾಗಿರುತ್ತದೆ. ಅಷ್ಟೇ ಅಲ್ಲ, ಹಿಂಸೆ, ಡ್ರಗ್ಸ್, ಸೆಕ್ಸ್, ಅಶ್ಲೀಲ ದೃಶ್ಯಗಳು ಮಕ್ಕಳಿಗೆ ಅರ್ಥ ಆಗುವುದಿಲ್ಲ. ಆದರೆ, ಅವುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅವರಲ್ಲಿ ಇರುತ್ತದೆ. ಆ ಹಾಡಿನಲ್ಲಿ ಬರುವ ಪದಗಳ ಅರ್ಥವೇನು, ಅಥವಾ ಆ ದೃಶ್ಯದಲ್ಲಿ ಏಕೆ ಹಾಗೆ ಮಾಡಿದ್ದಾರೆ ಎಂದು ತಂದೆ ತಾಯಿಯರನ್ನು ಕೇಳುತ್ತಾರೆ. ಆದರೆ, ಮಕ್ಕಳು ಈ ರೀತಿ ಪ್ರಶ್ನೆ ಕೇಳಿದಾಗ ಪೋಷಕರು ಸರಿಯಾದ ಉತ್ತರ ನೀಡದೆ ಅವರ ಪ್ರಶ್ನೆಗಳನ್ನು ನಿರ್ಲಕ್ಷಿಸುತ್ತಾರೆ.

ಇದರಿಂದಾಗಿ ಆ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಮಕ್ಕಳಲ್ಲಿ ಇಮ್ಮಡಿಯಾಗುತ್ತದೆ. ತಮ್ಮ ಸ್ನೇಹಿತರನ್ನು ಅಥವಾ ಬೇರೆ ಯಾರನ್ನಾದರೂ ಕೇಳಿ ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿಯೇ ಅದರ ಬಗ್ಗೆ ಮೊಬೈಲ್‌ನಲ್ಲಿ ಹುಡುಕುತ್ತಾರೆ. ಅಲ್ಲಿಯೂ ಸಿಗದಿದ್ದಾಗ ಯಾರಾದರೂ ಕಿಡಿಗೇಡಿಗಳ ಬಳಿ ಈ ತರಹದ ಸುದ್ದಿಗಳನ್ನು ತಿಳಿದುಕೊಳ್ಳಲು ಹೋಗಿ ತಾವೇ ಬಲಿಪಶು ಆಗಬಹುದು.

ಮಕ್ಕಳ ಪಾಲನೆ ಬಗ್ಗೆ ನಿರ್ಲಕ್ಷ್ಯ ಬೇಡ:

ಮಕ್ಕಳ ಬೆಳವಣಿಗೆ ಹಂತವನ್ನು ಪೋಷಕರು ಹಗುರವಾಗಿ ತೆಗೆದುಕೊಳ್ಳಬಾರದು. ಈ ಸಮಯದಲ್ಲಿಯೇ ಮಕ್ಕಳಲ್ಲಿ ಸೃಜನಶೀಲತೆ, ಮತ್ತು ಇನ್ನಿತರ ಪ್ರತಿಭೆಗಳು ಹೊರಬರುತ್ತವೆ. ಈ ಸಮಯದಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ಅಗತ್ಯವಾಗಿರುತ್ತದೆ. ಯಾವ ದಾರಿಯಲ್ಲಿ ಸಾಗಬೇಕು ಎಂಬುದನ್ನು ಪೋಷಕರೇ ತೋರಿಸಿಕೊಡಬೇಕು.

ಇಂದಿನ ಆನ್ ಲೈನ್ ಯುಗದಲ್ಲಿ ಮಕ್ಕಳ ಮೇಲೆ ಪೋಷಕರು ನಿಗಾ ಇಡುವುದು ತುಂಬಾ ಮುಖ್ಯ. ಮಕ್ಕಳು ಮೊಬೈಲ್ ನಲ್ಲಿ, ಟಿವಿ ಯಲ್ಲಿ ಏನು ನೋಡುತ್ತಿದ್ದಾರೆ ಎಂಬುದರ ಮೇಲೆ ನಿಗಾ ಇಡಬೇಕು. ಒಂದು ವೇಳೆ ಮಕ್ಕಳು ಯಾವುದಾದರೂ ಕೆಟ್ಟ ವಿಷಯಗಳನ್ನು ನೋಡುತ್ತಿದ್ದರೆ ಅಥವಾ ಕೇಳುತ್ತಿದ್ದರೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಏನು ಸರಿ ಏನು ತಪ್ಪು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಇದರಿಂದಾಗಿ ಮಕ್ಕಳು ಮತ್ತೆ ತಪ್ಪು ದಾರಿ ಹಿಡಿಯುವುದಿಲ್ಲ.

ಮಕ್ಕಳಿಗೆ ಮೊಬೈಲ್ ಕೊಡುವುದನ್ನು ನಿಲ್ಲಿಸಿ:

ಮಕ್ಕಳು ಮೊಬೈಲ್ ಗೆ ದಾಸರಾಗದಂತೆ ನೋಡಿಕೊಳ್ಳುವುದು ಕೂಡ ಪೋಷಕರ ಜವಾಬ್ದಾರಿ. ಮಕ್ಕಳು ಹೀಗೆ ಕೇಳುತ್ತಾರೆ ಎಂದು ಅವರಿಗೆ ಮೊಬೈಲ್ ಕೊಟ್ಟರೆ ಮುಂದೆ ಅದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಹಾಗಾಗಿ, ಮಕ್ಕಳ ಜೊತೆ ಸಮಯ ಕಳೆಯುವುದು ತುಂಬಾ ಮುಖ್ಯ. ಅವರ ಜೊತೆ ಆಟ ಆಡುವುದು, ಪುಸ್ತಕ ಓದುವುದು ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರೆ ಮಕ್ಕಳನ್ನು ಮೊಬೈಲ್ ವ್ಯಸನದಿಂದ ದೂರ ಇಡಬಹುದು ಎಂದು ಮನೋವಿಜ್ಞಾನಿಗಳು ಸಲಹೆ ನೀಡಿದ್ದಾರೆ.

click me!