ನಮ್ಮ ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಚರಟೆ ಹುಳು, ಚಕ್ಲಿ ಹುಳು, ಸಾವಿರಕಾಲು, ಸಹಸ್ರಪದಿ, ಬೆಂಡೆಹುಳು ಎಂದು ಕರೆಯುವ ಈ ಹುಳಗಳನ್ನ ನೀವು ಮನೆ ಸುತ್ತಮುತ್ತ ನೋಡಿರುತ್ತೀರಿ. ಈ ಹುಳ ಅಪಾಯಕಾರಿನಾ? ಮನುಷ್ಯರಿಗೆ ಕಚ್ಚುತ್ತಾ? ಎಷ್ಟು ವಿಷಕಾರಿ ಎನ್ನೋದನ್ನ ತಿಳ್ಕೊಳ್ಳೋಣ.
ಈ ಹುಳ ನೋಡಿದ ತಕ್ಷಣ ನಮಗೆ ನೆನಪಾಗೋದೇ ಅದರ ಕಾಲುಗಳು. ದೇಹದ ಎರಡು ಕಡೆ ಸಾಲಾಗಿ ಕಾಣಿಸೋ ಕಾಲುಗಳಿಂದಲೇ ಇದಕ್ಕೆ ಈ ವಿಶೇಷ ರೂಪ ಸಿಕ್ಕಿದೆ. ಇಂಗ್ಲಿಷ್‌ನಲ್ಲಿ ಇದನ್ನ 'cyanide millipede' ಅಂತ ಕರೀತಾರೆ. ಹೆಸರಲ್ಲೇ 'ಸಾವಿರ' ಇರೋದ್ರಿಂದ ಇದಕ್ಕೆ ಸಾವಿರ ಕಾಲು ಇರುತ್ತೆ ಅಂತ ನಾವು ಅನ್ಕೋತೀವಿ. ಆದ್ರೆ ಅದು ಸುಳ್ಳು.
ಮಿಲಿಪೀಡ್‌ಗಳ ಜಾತಿ ಮೇಲೆ ಅವುಗಳ ಕಾಲುಗಳ ಸಂಖ್ಯೆ ನಿರ್ಧಾರ ಆಗುತ್ತೆ. ಕೆಲವಕ್ಕೆ ನೂರಾರು ಕಾಲುಗಳಿದ್ರೆ, ಇನ್ನು ಕೆಲವಕ್ಕೆ ಅದಕ್ಕಿಂತ ಕಮ್ಮಿ ಇರುತ್ತೆ. ಪ್ರಪಂಚದಲ್ಲೇ ಅತಿ ಹೆಚ್ಚು ಕಾಲುಗಳಿರೋ ಕೆಲವು ಜಾತಿಯ ಮಿಲಿಪೀಡ್‌ಗಳಿಗೆ ಮಾತ್ರ ಸಾವಿರಕ್ಕೂ ಹೆಚ್ಚು ಕಾಲುಗಳಿರುತ್ತವೆ.
ಅಂದ್ರೆ 'ಸಾವಿರಕಾಲು ಹುಳ' ಅನ್ನೋದು ಸುಳ್ಳು ಹೆಸರಲ್ಲ, ಆದ್ರೆ ಎಲ್ಲಾ ಹುಳಗಳಿಗೂ ಸಾವಿರ ಕಾಲು ಇರುತ್ತೆ ಅನ್ನೋದು ತಪ್ಪು. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಅಂದ್ರೆ, ಇವು ಬೆಳೆದಂತೆಲ್ಲಾ ಹೊಸ ದೇಹದ ಭಾಗಗಳು ಮತ್ತು ಹೊಸ ಕಾಲುಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ಚಿಕ್ಕದಾಗಿದ್ದಾಗ ಕಾಲುಗಳ ಸಂಖ್ಯೆ ಕಮ್ಮಿ ಇರಬಹುದು.
25
ಮನುಷ್ಯರ ಮೇಲೆ ದಾಳಿ ಮಾಡಲ್ಲ, ಆದ್ರೆ...
ಈ ಹುಳ ಮನುಷ್ಯರನ್ನ ಬೆನ್ನಟ್ಟಿ ಬಂದು ಕಚ್ಚಲ್ಲ. ನೆಲದ ಮೇಲೆ ಬಿದ್ದಿರೋ ಒಣಗಿದ ಎಲೆಗಳು, ಕೊಳೆತ ಸಸ್ಯಗಳು ಮತ್ತು ಇತರ ಸಾವಯವ ವಸ್ತುಗಳನ್ನ ಇವು ತಿನ್ನುತ್ತವೆ. ಆದ್ರೆ ತಮಗೆ ಅಪಾಯ ಎದುರಾಗಿದೆ ಅಂತ ಅನ್ನಿಸಿದಾಗ ಮಾತ್ರ ತಮ್ಮನ್ನ ತಾವು ರಕ್ಷಿಸಿಕೊಳ್ಳೋಕೆ ಒಂದು ವಿಶೇಷ ತಂತ್ರ ಬಳಸುತ್ತವೆ.
ಕೆಲವು ಜಾತಿಯ ಮಿಲಿಪೀಡ್‌ಗಳು ತಮ್ಮ ದೇಹದಿಂದ ಕೆಟ್ಟ ವಾಸನೆ ಬರೋ ರಾಸಾಯನಿಕಗಳನ್ನ ಬಿಡುಗಡೆ ಮಾಡುತ್ತವೆ. ಶತ್ರುಗಳನ್ನ ದೂರ ಇಡೋಕೆ ಇದು ಸಹಾಯ ಮಾಡುತ್ತೆ. ಕೆಲವು ಜಾತಿಯ ರಾಸಾಯನಿಕಗಳು ನಮ್ಮ ಚರ್ಮಕ್ಕೆ ತಾಗಿದ್ರೆ ಉರಿ, ಕೆಂಪಾಗೋದು ಅಥವಾ ತುರಿಕೆ ಬರಬಹುದು. ಕಣ್ಣಿಗೆ ಬಿದ್ರೆ ಇನ್ನಷ್ಟು ಸಮಸ್ಯೆ ಆಗುತ್ತೆ. ಹಾಗಾಗಿ ಇವುಗಳನ್ನ ಕೈಯಿಂದ ಮುಟ್ಟದೇ ಇರೋದೇ ಸೇಫ್.
35
ಇದರಲ್ಲಿ ವಿಷ ಇರುತ್ತಾ?
ಈ ಹುಳ ಮುಟ್ಟಿದ್ರೆ ಪ್ರಾಣ ಹೋಗುತ್ತೆ, ಊಟದ ಮೇಲೆ ಬಿದ್ರೆ ಊಟವೆಲ್ಲಾ ವಿಷ ಆಗುತ್ತೆ ಅಂತ ಕೆಲವರು ಅನ್ಕೊಂಡಿದ್ದಾರೆ. ಆದ್ರೆ ವೈಜ್ಞಾನಿಕವಾಗಿ ನೋಡಿದ್ರೆ ಇದು ಸುಳ್ಳು. ಹಾವು, ಚೇಳುಗಳ ತರಹ ಇವು ಕಚ್ಚಿ ದೇಹಕ್ಕೆ ವಿಷ ಸೇರಿಸುವ ಜೀವಿಗಳಲ್ಲ. ಹಾಗಂತ ಇವು ಬಿಡುಗಡೆ ಮಾಡೋ ರಾಸಾಯನಿಕಗಳು ಸಂಪೂರ್ಣ ಸೇಫ್ ಅಂತಲೂ ಹೇಳೋಕಾಗಲ್ಲ. ಅಂದರೆ ಇವುಗಳು ವಿಷಕಾರಿ ಪ್ರಾಣಿಗಳಲ್ಲ, ಆದರೆ ಅವು ಬಿಡುಗಡೆ ಮಾಡುವ ರಾಸಾಯನಿಕ ಮನುಷ್ಯರ ದೇಹಕ್ಕೆ ಹಾನಿಯನ್ನುಂಟು ಮಾಡುತ್ತವೆ.
ಈ ಹುಳಗಳಲ್ಲಿ ಅವುಗಳ ಜಾತಿಯ ಆಧಾರದ ಮೇಲೆ ಇದರ ಪ್ರಭಾವ ಬದಲಾಗಬಹುದು. ಸೂಕ್ಷ್ಮ ಚರ್ಮ ಇರೋರಿಗೆ ಅಥವಾ ಕಣ್ಣಿಗೆ ತಾಗಿದ್ರೆ ತೊಂದರೆ ಆಗಬಹುದು. ಈ ಹುಳ ಮುಟ್ಟಿದ ತಕ್ಷಣ ಕೈಗಳನ್ನ ಸೋಪು ಹಾಕಿ ಚೆನ್ನಾಗಿ ತೊಳೆಯಬೇಕು. ಮಕ್ಕಳು ಮತ್ತು ಸಾಕುಪ್ರಾಣಿಗಳನ್ನ ಇವುಗಳಿಂದ ದೂರ ಇಡಬೇಕು. ಕಣ್ಣಿಗೆ ತಾಗಿದ್ರೆ ತಕ್ಷಣ ನೀರಿನಿಂದ ತೊಳೆದು, ಸಮಸ್ಯೆ ಇದ್ರೆ ಡಾಕ್ಟರ್ ಹತ್ರ ಹೋಗಬೇಕು.
'ಈ ಹುಳನ ಯಾವ ಪಕ್ಷಿಯೂ ತಿನ್ನಲ್ಲ', 'ಯಾವ ಪ್ರಾಣಿಯೂ ಮುಟ್ಟಲ್ಲ' ಅನ್ನೋ ಮಾತುಗಳನ್ನ ನೀವು ಕೇಳಿರ್ತೀರಾ. ಆದ್ರೆ ಪ್ರಕೃತಿಯಲ್ಲಿ ಆ ತರಹದ ಯಾವುದೇ ನಿಯಮ ಇಲ್ಲ. ಇವು ಬಿಡುಗಡೆ ಮಾಡೋ ರಾಸಾಯನಿಕದ ವಾಸನೆಗೆ ಹೆದರಿ ಕೆಲವು ಪ್ರಾಣಿಗಳು ದೂರ ಉಳಿಯುತ್ತವೆ ಅಷ್ಟೇ.
ಆದ್ರೆ ಕೆಲವು ಪಕ್ಷಿಗಳು, ಕಪ್ಪೆಗಳು, ಹಲ್ಲಿಗಳು, ಜೇಡಗಳು ಮತ್ತು ಇರುವೆಗಳು ಈ ಮಿಲಿಪೀಡ್‌ಗಳನ್ನ ತಿನ್ನುತ್ತವೆ. ಕೆಲವು ಜೀವಿಗಳಿಗೆ ಈ ರಾಸಾಯನಿಕಗಳನ್ನ ತಡೆದುಕೊಳ್ಳುವ ಶಕ್ತಿ ಇರುತ್ತೆ. ಇನ್ನು ಊಟದ ಮೇಲೆ ಈ ಹುಳ ಹರಿದರೆ ಊಟ ವಿಷ ಆಗುತ್ತೆ ಅನ್ನೋದಕ್ಕೆ ಯಾವುದೇ ಬಲವಾದ ಸಾಕ್ಷಿಗಳಿಲ್ಲ. ಆದರೂ ಸ್ವಚ್ಛತೆಯ ದೃಷ್ಟಿಯಿಂದ ಆ ಊಟನ ತಿನ್ನದೇ ಇರೋದೇ ಒಳ್ಳೇದು. ಇದನ್ನ ವಿಷ ಅನ್ನೋದಕ್ಕಿಂತ, ಸ್ವಚ್ಛತೆಗೆ ಸಂಬಂಧಿಸಿದ ವಿಚಾರ ಅಂತ ನೋಡಬೇಕು.
55
ಪ್ರಕೃತಿಗೆ ಇವುಗಳಿಂದ ತುಂಬಾನೇ ಲಾಭ
ಮನೆಯಲ್ಲಿ ಈ ಹುಳ ಕಂಡ ತಕ್ಷಣ ನಾವು ಸಾಯಿಸಿಬಿಡ್ತೀವಿ. ಆದ್ರೆ ಪ್ರಕೃತಿಯಲ್ಲಿ ಇವುಗಳ ಪಾತ್ರ ತುಂಬಾನೇ ಮುಖ್ಯ. ಉದುರಿದ ಎಲೆಗಳು, ಕೊಳೆತ ಮರ ಮತ್ತು ಸಸ್ಯಗಳ ತ್ಯಾಜ್ಯಗಳನ್ನ ಇವು ತಿನ್ನುತ್ತವೆ. ಇದರಿಂದ ಸಸ್ಯಗಳ ತ್ಯಾಜ್ಯಗಳು ಬೇಗನೆ ಮಣ್ಣಿನಲ್ಲಿ ಕರಗುತ್ತವೆ. ಆಮೇಲೆ ಸೂಕ್ಷ್ಮಾಣುಜೀವಿಗಳು ಅದನ್ನ ಇನ್ನಷ್ಟು ಒಡೆದು, ಮಣ್ಣಿಗೆ ಪೋಷಕಾಂಶಗಳು ಮರಳಿ ಸಿಗುವಂತೆ ಮಾಡುತ್ತವೆ. ಇವು ಭೂಮಿಯ ಮೇಲಿರುವ ಅತ್ಯಂತ ಹಳೆಯ ಜೀವಿಗಳಲ್ಲಿ ಒಂದು. ಮಿಲಿಪೀಡ್‌ಗಳ ಪಳೆಯುಳಿಕೆಗಳು ಕೋಟ್ಯಂತರ ವರ್ಷಗಳಷ್ಟು ಹಳೆಯವು. ಅಂದ್ರೆ ಮನುಷ್ಯ ಭೂಮಿಯ ಮೇಲೆ ಬರೋದಕ್ಕೂ ಮುಂಚೆಯೇ ಇವು ಭೂಮಿಯ ಮೇಲಿದ್ದವು.
ಮನೆಗೆ ಬರದಂತೆ ತಡೆಯೋದು ಹೇಗೆ?
ತೇವಾಂಶ ಇರೋ ಜಾಗಗಳು, ಒಣಗಿದ ಎಲೆಗಳು ಮತ್ತು ಕಸದ ರಾಶಿಗಳು ಇವುಗಳಿಗೆ ಇಷ್ಟ. ಹಾಗಾಗಿ ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಒಣಗಿದ ಎಲೆಗಳು ಮತ್ತು ಕಸದ ರಾಶಿಗಳನ್ನ ಕ್ಲೀನ್ ಮಾಡಿ. ಬಾಗಿಲು, ಕಿಟಕಿಗಳ ಹತ್ತಿರ ಇರೋ ಸಣ್ಣ ರಂಧ್ರಗಳನ್ನ ಮುಚ್ಚಿ. ಮನೆಗೆ ಒಂದೆರಡು ಹುಳ ಬಂದ್ರೆ ಭಯಪಡೋ ಅಗತ್ಯ ಇಲ್ಲ. ಆದಷ್ಟು ಕೈಯಿಂದ ಮುಟ್ಟದೆ ಹೊರಗೆ ಹಾಕಿ. ಮಕ್ಕಳಿಗೆ ಈ ಹುಳಗಳನ್ನ ಮುಟ್ಟದಂತೆ ಬುದ್ಧಿ ಹೇಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.