Banana Peel Gardening hack Easy Homemade Natural Fertilizer for Plants ಬಾಳೆಹಣ್ಣಿನ ಸಿಪ್ಪೆಯಿಂದ ಮನೆಯ ಗಿಡಗಳಿಗೆ ನೈಸರ್ಗಿಕ ಗೊಬ್ಬರ ತಯಾರಿಸುವುದು ಹೇಗೆ? ಸಿಪ್ಪೆಯನ್ನು ನೇರವಾಗಿ ಮಣ್ಣಿಗೆ ಹಾಕಿದರೆ ಆಗುವ ಸಮಸ್ಯೆಗಳು ಮತ್ತು ಸುರಕ್ಷಿತವಾಗಿ ಬಳಸುವ ಸರಳ ವಿಧಾನ ಇಲ್ಲಿದೆ.
ಸಾಮಾನ್ಯವಾಗಿ ಜನರು ಬಾಳೆ ಹಣ್ಣು ತಿಂದ ಬಳಿಕ ಸಿಪ್ಪೆಯನ್ನ ಕಸವೆಂದೇ ಭಾವಿಸಿ ಎಸೆದುಬಿಡುತ್ತಾರೆ. ಬಾಳೆಯ ಸಿಪ್ಪೆಯ ಉಪಯೋಗ ಅವರಿಗೆ ಸರಿಯಾಗಿ ತಿಳಿದರೆ ತಾವು ಎಸೆದ ಅದೆಷ್ಟೋ ಬಾಳೆ ಸಿಪ್ಪೆ ನನೆದು ಅಯ್ಯೋ ಅನಿಸಬಹುದು. ಹೌದು ಬಾಳೆ ಸಿಪ್ಪೆ ಕಸವಲ್ಲ, ಗಿಡಗಳಿಗೆ, ಮನೆಯಂಗಳದಲ್ಲಿ ತೋಟಕ್ಕೆ ಉತ್ತಮ ಗೊಬ್ಬರ ಎಂಬುದು ಗೊತ್ತೇ? ಬಾಳೆಹಣ್ಣಿನ ಸಿಪ್ಪೆಯಿಂದ ಗಿಡಗಳಿಗೆ ನೈಸರ್ಗಿಕ ಗೊಬ್ಬರವಾಗಿ ಹೇಗೆ ಬಳಸಬಹುದ ಎಂಬುದನ್ನು ಇಲ್ಲಿ ತಿಳಿಯೋಣ.
27
ಬಾಳೆಹಣ್ಣಿನ ಸಿಪ್ಪೆ ಪೋಷಕಾಂಶಗಳ ಆಗರ:
ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟ್ಯಾಶಿಯಂ, ರಂಜಕ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ನೈಸರ್ಗಿಕವಾಗಿಯೇ ಇರುತ್ತವೆ. ಹಾಗಾಗಿ ಮನೆಯ ಕೈತೋಟದಲ್ಲಿರುವ ಗಿಡಗಳಿಗೆ ಇದನ್ನು ಗೊಬ್ಬರವಾಗಿ ಬಳಸಬಹುದು. ಹಾಗಂತ ಬಾಳೆಹಣ್ಣಿನ ಸಿಪ್ಪೆ ನೇರವಾಗಿ ಮಣ್ಣಿನ ಕುಂಡದಲ್ಲಿ ಹಾಕಬಾರದು. ಇದರಿಂದ ಗಿಡಗಳಿಗೆ ಹಾನಿಯಾಗುವುದಲ್ಲದೆ, ಬಾಳೆಹಣ್ಣಿನ ಸಿಪ್ಪೆಯಿಂದ ಕೀಟಗಳು ಹೆಚ್ಚಾಗಿ ಗಿಡಗಳಿಗೆ ಹಾನಿಯಾಗಹುದು, ಕೊಳೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಿಪ್ಪೆಯನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸಿ ಗೊಬ್ಬರವಾಗಿ ಬಳಸುವುದು ಮುಖ್ಯ.
37
ಬಾಳೆಹಣ್ಣಿನ ಸಿಪ್ಪೆಯನ್ನ ಗೊಬ್ಬರ ಮಾಡುವುದು ಹೇಗೆ?
ಹಸಿ ಬಾಳೆಹಣ್ಣಿನ ಸಿಪ್ಪೆಯನ್ನು ನೇರವಾಗಿ ಮಣ್ಣಿನ ಕುಂಡದಲ್ಲಿನ ಗಿಡಗಳ ಕೆಳಗೆ ಹೂಳುವುದರಿಂದಲೂ ಗಿಡಗಳಿಗೆ ಸಮಸ್ಯೆಯಾಗಬಹುದು. ಸಿಪ್ಪೆಯಲ್ಲಿರುವ ನೈಸರ್ಗಿಕ ಸಕ್ಕರೆ ಮತ್ತು ತೇವಾಂಶ ನಿಧಾನವಾಗಿ ಕೊಳೆಯುವುದರಿಂದ ಇರುವೆಗಳು, ಹಣ್ಣಿನ ನೊಣಗಳು ಹಾಗೂ ಗಿಡಗಳಿಗೆ ಹಾನಿ ಮಾಡುವ ಶಿಲೀಂಧ್ರಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಅಲ್ಲದೆ, ಸಂಸ್ಕರಿಸದ ಬಾಳೆಹಣ್ಣಿನ ಸಿಪ್ಪೆ ಸಂಪೂರ್ಣವಾಗಿ ಕೊಳೆಯಲು ಹಲವು ತಿಂಗಳುಗಳು ಬೇಕಾಗಬಹುದು. ಇದರಿಂದ ಅದರಲ್ಲಿರುವ ಪೋಷಕಾಂಶಗಳು ಗಿಡಗಳಿಗೆ ತಲುಪಲು ವಿಳಂಬವಾಗಬಹುದು.
ಮೂರು ಅಥವಾ ನಾಲ್ಕು ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಂದು ಲೀಟರ್ ನೀರಿನಲ್ಲಿ ಹಾಕಿ 2 ರಿಂದ 3 ದಿನ ನೆನೆಸಿಡಿ. ನಂತರ ನೀರನ್ನು ಸೋಸಿ ತೆಗೆದುಕೊಳ್ಳಿ. ಪೋಷಕಾಂಶಗಳು ಸೇರಿರುವ ಈ ನೀರನ್ನು ಗಿಡಗಳ ಬೇರುಗಳಿಗೆ ನೇರವಾಗಿ ಹಾಕಬಹುದು.
57
ಬಾಳೆಹಣ್ಣು ನೀರಲ್ಲಿ ನೆನೆಸುವುದರಿಂದ ಏನಾಗುತ್ತೆ?
ಬಾಳೆಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ನೆನೆಸುವುದರಿಂದ ಅದರಲ್ಲಿರುವ ಪೊಟ್ಯಾಶಿಯಂ ಸೇರಿದಂತೆ ಕೆಲವು ಖನಿಜಾಂಶಗಳು ನೀರಿನಲ್ಲಿ ಸೇರುತ್ತವೆ. ಈ ನೀರನ್ನು ಗಿಡಗಳ ಮಣ್ಣಿಗೆ ಹಾಕುವುದರಿಂದ ಹೂ ಬಿಡುವ ಗಿಡಗಳಿಗೆ ಮತ್ತು ಹಸಿರಾಗಿ ಬೆಳೆಯುವ ಎಲೆಗಳಿಗೆ ಪೋಷಕಾಂಶಗಳ ಪೂರೈಕೆ ಸಿಗುತ್ತದೆ. ಹಸಿ ಸಿಪ್ಪೆಯನ್ನು ನೇರವಾಗಿ ಮಣ್ಣಿನಲ್ಲಿ ಹಾಕುವುದಕ್ಕಿಂತ ಈ ವಿಧಾನದಲ್ಲಿ ನೊಣಗಳು ಮತ್ತು ಇತರ ಕೀಟಗಳನ್ನು ಆಕರ್ಷಿಸುವ ಸಾಧ್ಯತೆ ಕಡಿಮೆ.
67
ದ್ರವರೂಪದಲ್ಲಷ್ಟೇ ಅಲ್ಲ, ಒಣಗಿಸಿ ಪುಡಿಯಾಗಿ ಬಳಸಬಹುದು
ಬಾಳೆಹಣ್ಣಿನ ಸಿಪ್ಪೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಸಂಪೂರ್ಣವಾಗಿ ಗಟ್ಟಿಯಾಗುವವರೆಗೆ ಬಿಸಲಿಗೆ ಇಡಿ. ನಂತರ ಒಣಗಿದ ಸಿಪ್ಪೆಯನ್ನು ಮಿಕ್ಸರ್‌ನಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಸಾವಯವ ಗೊಬ್ಬರದ ಪುಡಿಯನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಬಹುದು. ತಿಂಗಳಿಗೊಮ್ಮೆ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ಗಿಡಗಳಿಗೆ ಬಳಸಬಹುದು.
77
ಮನೆಯಲ್ಲೇ ಕಾಂಪೋಸ್ಟ್ ಗೊಬ್ಬರ ತಯಾರಿಸಿ
ಮನೆಯಲ್ಲೇ ಕಾಂಪೋಸ್ಟ್ ತಯಾರಿಸುವ ವ್ಯವಸ್ಥೆ ಇದ್ದರೆ ಬಾಳೆಹಣ್ಣಿನ ಸಿಪ್ಪೆಯನ್ನು ಅದಕ್ಕೂ ಬಳಸಬಹುದು. ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಣಗಿದ ಎಲೆಗಳೊಂದಿಗೆ ಬೆರೆಸಿದರೆ ಅದು ಬೇಗನೆ ಕೊಳೆಯಲಾರಂಭಿಸುತ್ತದೆ. ಇದರಿಂದ ಮಣ್ಣಿನ ಕುಂಡದಲ್ಲಿನ ಗಿಡಗಳಿಗೆ ಕಾಂಪೋಸ್ಟ್ ಗೊಬ್ಬರವಾಗಿ ಬಳಸಬಹುದು.
ನೆನಪಿಡಿ:
ಮನೆಯಲ್ಲೇ ತಯಾರಿಸಿದ ಯಾವುದೇ ಗೊಬ್ಬರವನ್ನು ಹಾಕುವ ಮೊದಲು ಗಿಡದ ಮೇಲ್ಮಣ್ಣನ್ನು ನಿಧಾನವಾಗಿ ಸಡಿಲಗೊಳಿಸುವುದು ಉತ್ತಮ. ಇದರಿಂದ ಬೇರುಗಳಿಗೆ ಗಾಳಿಯ ಸಂಚಾರ ಸುಲಭವಾಗುತ್ತದೆ. ಆದರೆ ಸಾವಯವ ಗೊಬ್ಬರವನ್ನು ಅತಿಯಾಗಿ ಬಳಸಬಾರದು. ಹೆಚ್ಚು ಗೊಬ್ಬರ ಹಾಕುವುದರಿಂದ ಕುಂಡದಲ್ಲಿನ ಗಿಡಗಳಿಗೆ ಒತ್ತಡ ಉಂಟಾಗಿ ಅವುಗಳ ಸಹಜ ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.