Gold: ಬೆಂಗಳೂರಿನಿಂದ 532 ಕಿ.ಮೀ ದೂರದಲ್ಲೇ ಇದೆ ‘ಚಿನ್ನದ ಗುಹೆ’, ಕಬ್ಬಿಣ ಚಿನ್ನವಾಗಿತ್ತಂತೆ ಇಲ್ಲಿ

Published : Sep 04, 2026, 03:59 PM IST

ಕಬ್ಬಿಣವನ್ನು ಚಿನ್ನವನ್ನಾಗಿ ಪರಿವರ್ತಿಸುವ ರಸವಿದ್ಯೆಯ ಬಗ್ಗೆ ಹಲವು ಕಥೆಗಳು ಪ್ರಚಲಿತದಲ್ಲಿವೆ. ಮಧ್ಯಯುಗದಲ್ಲಿ ಶ್ರೀಶೈಲವನ್ನು ಕೇಂದ್ರವಾಗಿಟ್ಟುಕೊಂಡು ಆಚಾರ್ಯ ನಾಗಾರ್ಜುನರು ನಡೆಸಿದರೆನ್ನಲಾದ ಪ್ರಯೋಗ ಮತ್ತು ಪಾದರಸ ಬಳಸಿ ಕಬ್ಬಿಣವನ್ನು ಚಿನ್ನವನ್ನಾಗಿ ಪರಿವರ್ತಿಸಲಾಗುತ್ತಿತ್ತು.

PREV
15
ನಲ್ಲಮಲ ಕಾಡಿನಲ್ಲಿ ಚಿನ್ನದ ತಯಾರಿಕೆ.. ಆಚಾರ್ಯ ನಾಗಾರ್ಜುನರ ರಸವಿದ್ಯೆಯ ರಹಸ್ಯ
ಶ್ರೀಶೈಲ ಅಂದ ತಕ್ಷಣ ನಮಗೆಲ್ಲ ನೆನಪಾಗೋದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರ. ಆದರೆ ಈ ಪವಿತ್ರ ಭೂಮಿ ಕೇವಲ ಆಧ್ಯಾತ್ಮಕ್ಕೆ ಮಾತ್ರವಲ್ಲ, ಮಧ್ಯಯುಗದ ಭಾರತದಲ್ಲಿ ರಸವಿದ್ಯೆಯ ಪ್ರಮುಖ ಕೇಂದ್ರವೂ ಆಗಿತ್ತು. ಇಲ್ಲೇ ಆಚಾರ್ಯ ಸಿದ್ಧ ನಾಗಾರ್ಜುನರು ಕಬ್ಬಿಣದಂತಹ ಸಾಮಾನ್ಯ ಲೋಹಗಳನ್ನು ಚಿನ್ನವನ್ನಾಗಿ ಪರಿವರ್ತಿಸುವ ಪ್ರಯೋಗಗಳನ್ನು ಮಾಡಿದ್ದರು. ಅವರು ಪಾದರಸದ ಮೇಲೆ ವ್ಯಾಪಕ ಸಂಶೋಧನೆ ನಡೆಸಿದ್ದರು ಎಂದು ಇತಿಹಾಸ ಮತ್ತು ಐತಿಹ್ಯಗಳು ಹೇಳುತ್ತವೆ. ಕೃಷ್ಣಾ ನದಿ ತೀರದಲ್ಲಿ, ದಟ್ಟವಾದ ನಲ್ಲಮಲ ಕಾಡಿನ ನಡುವೆ ಇರುವ ಶ್ರೀಶೈಲ, ನಾಗಾರ್ಜುನರ ಪ್ರಯೋಗಗಳಿಗೆ ಹೇಳಿ ಮಾಡಿಸಿದಂತಿತ್ತು. ನಾಗಾರ್ಜುನರ ಪ್ರಯೋಗಾಲಯವಿದ್ದ ಪ್ರದೇಶವನ್ನು 'ದರ್ದಾ' ಅಂತಲೂ ಕರೆಯುತ್ತಿದ್ದರು. ಪಾದರಸಕ್ಕೆ 'ದರದ' ಎಂಬ ಇನ್ನೊಂದು ಹೆಸರಿದ್ದುದರಿಂದ ಈ ಪ್ರದೇಶಕ್ಕೆ ಆ ಹೆಸರು ಬಂತು ಎಂದು ಸ್ಥಳೀಯರು ನಂಬುತ್ತಾರೆ. ಶ್ರೀಶೈಲದ ಸುತ್ತಮುತ್ತಲಿನ ನಲ್ಲಮಲ ಕಾಡುಗಳಲ್ಲಿ ಇಂದಿಗೂ ಅನೇಕ ಅಪರೂಪದ ಔಷಧೀಯ ಸಸ್ಯಗಳು ಮತ್ತು ಖನಿಜಗಳು ಸಿಗುತ್ತವೆ. ಇದೇ ಪರಿಸರ ಅಂದು ರಸವಿದ್ಯೆಯ ಸಿದ್ಧರಿಗೆ ಬಹಳಷ್ಟು ಸಹಾಯ ಮಾಡಿತ್ತು.
25
ನಾಗಾರ್ಜುನ – ರಸವಿದ್ಯೆಯ ಗುರುವಾಗಿ ಪಯಣ
ಆಚಾರ್ಯ ನಾಗಾರ್ಜುನರು 84 ಸಿದ್ಧರಲ್ಲಿ ಒಬ್ಬರಾಗಿ, ಬೌದ್ಧ ಸನ್ಯಾಸಿಯಾಗಿ, ತಾಂತ್ರಿಕ ಗುರುವಿವಾಗಿ ಮತ್ತು ರಸವಿದ್ಯಾ ನಿಪುಣರಾಗಿ ಪ್ರಸಿದ್ಧಿ ಪಡೆದಿದ್ದರು. ಅವರು ರಚಿಸಿದ 'ರಸರತ್ನಾಕರ' ಎಂಬ ಗ್ರಂಥ, ಸಂಸ್ಕೃತದಲ್ಲಿ ಲಭ್ಯವಿರುವ ಅತ್ಯಂತ ಹಳೆಯ ರಸವಿದ್ಯೆಯ ಗ್ರಂಥಗಳಲ್ಲಿ ಒಂದಾಗಿದೆ. ನಾಗಾರ್ಜುನರ ಪ್ರಯೋಗಾಲಯವು ಶ್ರೀ ಪರ್ವತ ಅಂದರೆ ಶ್ರೀಶೈಲದ ಮೇಲೆ ಇತ್ತು ಎಂದು ಐತಿಹಾಸಿಕ ಕಥೆಗಳು ವಿವರಿಸುತ್ತವೆ. ಇಲ್ಲೇ ಅವರು ಪಾದರಸ, ಕಬ್ಬಿಣ, ತಾಮ್ರ, ಸೀಸ, ಬೆಳ್ಳಿಯಂತಹ ಲೋಹಗಳೊಂದಿಗೆ ಸುದೀರ್ಘ ಪ್ರಯೋಗಗಳನ್ನು ನಡೆಸಿದರು. ಅವರು ಕೇವಲ ಲೋಹಗಳನ್ನು ಪರಿವರ್ತಿಸುವುದು ಮಾತ್ರವಲ್ಲದೆ, ಮಾನವ ದೇಹವನ್ನು ರೋಗಮುಕ್ತವಾಗಿಡುವ ಸಂಶೋಧನೆಗಳ ಮೇಲೂ ಗಮನ ಹರಿಸಿದ್ದರು.
35
ಕಬ್ಬಿಣವನ್ನು ಚಿನ್ನವನ್ನಾಗಿ ಪರಿವರ್ತಿಸುವ ವಿಧಾನಗಳು
ರಸವಿದ್ಯೆಯ ಗ್ರಂಥಗಳ ಪ್ರಕಾರ, ನಾಗಾರ್ಜುನರು ಲೋಹಗಳನ್ನು ಚಿನ್ನವನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗಳನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಅವರು ಪಾದರಸವನ್ನು 'ಲೋಹರಾಜ' ಎಂದು ಪರಿಗಣಿಸಿದ್ದರು. ಎಲ್ಲಾ ಲೋಹಗಳನ್ನು ತನ್ನಲ್ಲಿ ಕರಗಿಸಿಕೊಳ್ಳುವ ಶಕ್ತಿ ದ್ರವರೂಪದಲ್ಲಿರುವ ಪಾದರಸಕ್ಕೆ ಮಾತ್ರ ಇದೆ ಎಂದು ಅವರು ಹೇಳಿದ್ದರು. ಪಾದರಸಕ್ಕೆ 18 ಬಗೆಯ ಶುದ್ಧೀಕರಣ ಪ್ರಕ್ರಿಯೆಗಳನ್ನು ಮಾಡಿ, ಅದರಲ್ಲಿರುವ ವಿಷಕಾರಿ ಗುಣಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ, ಅದನ್ನು ಔಷಧ ಯೋಗ್ಯವನ್ನಾಗಿ ಮಾಡುವ ವಿಧಾನಗಳನ್ನು ಅವರು ಕಂಡುಹಿಡಿದರು. ಈ ಶುದ್ಧೀಕರಿಸಿದ ಪಾದರಸವನ್ನು ಕಬ್ಬಿಣ, ತಾಮ್ರ, ಸೀಸ, ಬೆಳ್ಳಿಯಂತಹ ಲೋಹಗಳೊಂದಿಗೆ ಬೆರೆಸಿ, ನಿರ್ದಿಷ್ಟ ತಾಪಮಾನದಲ್ಲಿ ಬಿಸಿ ಮಾಡಿದರೆ, ಆ ಲೋಹಗಳು ಚಿನ್ನವಾಗಿ ಬದಲಾಗುತ್ತವೆ ಎಂದು ರಸವಿದ್ಯೆಯ ಗ್ರಂಥಗಳು ಹೇಳುತ್ತವೆ. 'ರಸಜಲ ನಿಧಿ' ಮತ್ತು 'ರಸರತ್ನಾಕರ' ಗ್ರಂಥಗಳಲ್ಲಿ, ಕಬ್ಬಿಣದ ಪುಡಿ, ಪಾದರಸ, ಗಂಧಕ, ಮಾಕ್ಷಿಕ, ಸೀಸ, ತಾಮ್ರ, ಬೆಳ್ಳಿಯಂತಹ ವಸ್ತುಗಳನ್ನು ಬಳಸಿ ಚಿನ್ನ ತಯಾರಿಸುವ ವಿಧಾನಗಳಿವೆ ಎಂದು ಆ ಗ್ರಂಥಗಳು ಉಲ್ಲೇಖಿಸುತ್ತವೆ.
45
ಪ್ರಾಣ ರಕ್ಷಣೆಗಾಗಿ ರಸೌಷಧಿಗಳ ತಯಾರಿಕೆ
ನಾಗಾರ್ಜುನರ ರಸವಿದ್ಯೆ ಕೇವಲ ಚಿನ್ನ ತಯಾರಿಕೆಗೆ ಸೀಮಿತವಾಗಿರಲಿಲ್ಲ. ಅದು ಪ್ರಾಣ ಉಳಿಸುವ 'ರಸೌಷಧಿ'ಗಳ ತಯಾರಿಕೆಗೆ ಬಹಳಷ್ಟು ಉಪಯೋಗವಾಯಿತು. ಪಾದರಸ, ಗಂಧಕ, ಕಬ್ಬಿಣ, ತಾಮ್ರ, ಸೀಸ, ಬೆಳ್ಳಿ, ಇತರ ಖನಿಜಗಳು ಮತ್ತು ಮೂಲಿಕೆಗಳನ್ನು ಬೆರೆಸಿ ತಯಾರಿಸಿದ ಈ ರಸೌಷಧಿಗಳು ಅನೇಕ ರೋಗಗಳನ್ನು ಗುಣಪಡಿಸುತ್ತಿದ್ದವು ಎಂದು ಗ್ರಂಥಗಳು ಹೇಳುತ್ತವೆ. ಜೀರ್ಣಶಕ್ತಿ ಕೊರತೆ, ತೀವ್ರ ಜ್ವರ, ಚರ್ಮ ರೋಗಗಳು, ನರ ದೌರ್ಬಲ್ಯ, ಕೀಲು ನೋವು, ಉಸಿರಾಟದ ಸಮಸ್ಯೆಗಳಂತಹ ಅನೇಕ ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆಗೆ ಈ ಔಷಧಿಗಳನ್ನು ಬಳಸುತ್ತಿದ್ದರು. ನಾಗಾರ್ಜುನರೇ ಮೊದಲ ಬಾರಿಗೆ ಪಾದರಸ, ಖರ್ಪರ ಮುಂತಾದವುಗಳನ್ನು ಔಷಧಿಯಾಗಿ ಬಳಸಿದರು ಮತ್ತು ಅವುಗಳನ್ನು ವಿಷಮುಕ್ತಗೊಳಿಸುವ ವಿಧಾನಗಳನ್ನು ಕಂಡುಹಿಡಿದರು ಎಂದು ಇತಿಹಾಸ ಹೇಳುತ್ತದೆ.
55
ಐತಿಹಾಸಿಕ ಸತ್ಯ vs ಆಧುನಿಕ ನಂಬಿಕೆ
ಆಧುನಿಕ ವಿಜ್ಞಾನದ ದೃಷ್ಟಿಯಲ್ಲಿ ನೋಡಿದರೆ, ಸಾಮಾನ್ಯ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಕಬ್ಬಿಣವನ್ನು ಚಿನ್ನವನ್ನಾಗಿ ಪರಿವರ್ತಿಸುವುದು ಸಾಧ್ಯವಿಲ್ಲ. ಏಕೆಂದರೆ ಕಬ್ಬಿಣ ಮತ್ತು ಚಿನ್ನ ಬೇರೆ ಬೇರೆ ಮೂಲಧಾತುಗಳು. ಒಂದು ಮೂಲಧಾತುವನ್ನು ಇನ್ನೊಂದು ಮೂಲಧಾತುವಾಗಿ ಬದಲಾಯಿಸಬೇಕೆಂದರೆ, ಅಣು ಮಟ್ಟದಲ್ಲಿ ಬದಲಾವಣೆಗಳಾಗಬೇಕು. ಆದರೆ, ರಸವಿದ್ಯೆಯ ಗ್ರಂಥಗಳು, ಸ್ಥಳೀಯ ಐತಿಹ್ಯಗಳು ಮತ್ತು ಸಿದ್ಧ ಸಂಪ್ರದಾಯದ ದೃಷ್ಟಿಯಲ್ಲಿ ನಾಗಾರ್ಜುನರ ಪ್ರಯೋಗಗಳು ಕೇವಲ ಲೋಹಗಳ ಪರಿವರ್ತನೆ ಮಾತ್ರವಲ್ಲ. ಅವು ಆರೋಗ್ಯ, ಆಧ್ಯಾತ್ಮಿಕತೆ ಮತ್ತು ಪರಿಸರವನ್ನು ಒಳಗೊಂಡ ಒಂದು ಸಮಗ್ರ ಜ್ಞಾನ ವ್ಯವಸ್ಥೆಯಾಗಿತ್ತು. ನಲ್ಲಮಲ ಗುಹೆಗಳಲ್ಲಿ ಪ್ರಾಚೀನ ಕಾಲದಲ್ಲಿ ನಡೆದ ಈ ಸಂಶೋಧನೆಗಳು ಭಾರತೀಯ ರಸಾಯನಶಾಸ್ತ್ರದ ಅಡಿಪಾಯಕ್ಕೆ ಸಾಕ್ಷಿಯಾಗಿ ನಿಂತಿವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories