1928-1931ರ ಅವಧಿಯಲ್ಲಿ ನಿರ್ಮಾಣವಾದ ಐತಿಹಾಸಿಕ ಸುರಂಗ ಕಾಲುವೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸರ್. ಎಂ. ವಿಶ್ವೇಶರಯ್ಯನವರಿಂದ ನಿರ್ಮಿಸಲ್ಪಟ್ಟ ಈ ಸುರಂಗವು ಇಂದಿಗೂ ಕೃಷಿ ಭೂಮಿಗೆ ನೀರುಣಿಸುತ್ತಾ, ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತಿದೆ.
ಮಂಡ್ಯ ಜಿಲ್ಲೆಯಲ್ಲೊಂದು ಸುರಂಗ ಕಾಲುವೆಯನ್ನು ನೋಡಲು ಜನರು ಆಗಮಿಸುತ್ತಾರೆ. ಯಾವುದೇ ಅತ್ಯಾಧುನಿಕ ಯಂತ್ರೋಪಕರಣಗಳು ಇಲ್ಲದ ಸಮಯದಲ್ಲಿ ನಿರ್ಮಾಣವಾದ ಅದ್ಭುತವಾದ ಸುರಂಗ ಕಾಲುವೆ, ಇಂದಿಗೂ ಇಲ್ಲಿಯ ಕೃಷಿ ಜಮೀನುಗಳಿಗೆ ನೀರೂಣಿಸುತ್ತಿದೆ. ಇಂದು ಕಾಲುವೆಗಳು ಉದ್ಘಾಟನೆಗೂ ಮುಂಚೆಯೇ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಉದಾಹರಣೆಗಳ ನಡುವೆ 1928-1931ರ ಅವಧಿಯಲ್ಲಿ ನಿರ್ಮಾಣವಾದ ಸುರಂಗ ಕೂತಹಲ ಮೂಡಿಸುತ್ತದೆ.
25
ಎಲ್ಲಿದೆ ಈ ಸುರಂಗ?
ಮಂಡ್ಯ ಜಿಲ್ಲೆಯ ಹುಲಿಕೆರೆ ಗ್ರಾಮದಲ್ಲಿ (ಕಳೆನಹಳ್ಳಿ ಹತ್ತಿರ) ಅಪರೂಪದ ನೀರಾವರಿ ಕಾಲುವೆ ಸುರಂಗವನ್ನು ಕಾಣಬಹುದು. ಬೆಂಗಳೂರಿನಿಂದ 139 ಕಿ.ಮೀ. ದೂರದಲ್ಲಿರುವ ಈ ಸುರಂಗ ತಲುಪಲು ಎರಡೂವರೆ ಗಂಟೆ ಸಮಯ ಬೇಕಾಗುತ್ತದೆ. ರಜಾದಿನಗಳಲ್ಲಿ ಮಕ್ಕಳನ್ನು ಸಿನಿಮಾ, ಮಾಲ್ ಅಂತ ಕರೆದುಕೊಂಡು ಹೋಗದೇ ಹುಲಿಕೆರೆಗೆ ಕರೆದುಕೊಂಡು ಹೋಗಿ. ಅಪರೂಪ ಮತ್ತು ವಿಶೇಷ ವಿನ್ಯಾಸವುಳ್ಳ ಸುರಂಗವನ್ನು ಮಕ್ಕಳಿಗೆ ತೋರಿಸಬಹುದು. ಮಂಡ್ಯ ನಗರದಿಂದ 14 ಕಿಮೀ ದೂರದಲ್ಲಿ ಹುಲಿಕೆರೆ ಗ್ರಾಮ ಸಿಗುತ್ತದೆ.
35
ಈ ಸುರಂಗ ನಿರ್ಮಿಸಿದ್ಯಾರು?
ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸುರಂಗ ನಿರ್ಮಾಣಕ್ಕೆ ಆದೇಶ ನೀಡುತ್ತಾರೆ. ಅಂದಿನ ಮಂತ್ರಿಗಳಾಗಿದ್ದ ಸರ್ ಮಿರ್ಜಾ ಇಸ್ಮೈಲ್ ಅವರು ಖ್ಯಾತ ಇಂಜಿನೀಯರ್ ಸರ್ ಎಂ.ವಿಶ್ವೇಶರಯ್ಯ ಜೊತೆಗೂಡಿ 1928ರಲ್ಲಿ ಸುರಂಗ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಾರೆ. ಯೋಜನೆಯಂತೆ 1931ರಲ್ಲಿ ಸುರಂಗ ಕಾಲುವೆ ಉದ್ಘಾಟನೆಯಾಗುತ್ತದೆ.
ಹುಲಿಕೆರೆ ಸುರಂಗ ನಿರ್ಮಾಣಗೊಂಡು 95 ವರ್ಷ ಪೂರ್ಣಗೊಂಡಿದ್ದು, ಇಂದಿಗೂ ಕೃಷಿಭೂಮಿ ನೀರು ಒದಗಿಸುವ ಕೆಲಸವನ್ನು ಮಾಡುತ್ತಿದೆ. ಈ ಸುರಂಗವು ಸುಮಾರು 2,800 ಮೀಟರ್ ಉದ್ದ, 3.75 ಮೀಟರ್ ಅಗಲ ಹಾಗೂ 4.5 ಮೀಟರ್ ಎತ್ತರವಿದೆ. ಇದನ್ನು ಏಷ್ಯಾದ ಮೊದಲ ಭೂಗತ ನೀರಾವರಿ ಸುರಂಗ ಎಂದು ಪರಿಗಣಿಸಲಾಗುತ್ತದೆ. ಅಂದಿನ ಕಾಲಘಟ್ಟದಲ್ಲಿ ಈ ಸುರಂಗವು 4,56,000 ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದಕ್ಕಾಗಿ ಕೇರಳ, ಮಹಾರಾಷ್ಟ್ರ, ಪಂಜಾಬ್ ರಾಜ್ಯಗಳಿಂದಲೂ ತಜ್ಞ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿತ್ತು.
55
20 ಅಡಿ ಕಮಾನಿನ ಪ್ರವೇಶದ್ವಾರ
ಸುರಂಗ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕಾರ್ಮಿಕರಿಗೆ ಒಂದು ದಿನಕ್ಕೆ 1.50 ರಿಂದ 4 ಆಣೆವರೆಗೆ ಸಂಬಳವನ್ನು ನೀಡಲಾಗುತ್ತಿತ್ತು. ಇದು 20 ಅಡಿ ಕಮಾನಿನ ಪ್ರವೇಶದ್ವಾರ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಪ್ರವಾಸಿತ ತಾಣವಾಗಿ ಬದಲಾಗುತ್ತಿದೆ. ಇದು ವಿಶ್ವೇಶರಯ್ಯ ನಾಲೆಯ ಭಾಗವಾಗಿದ್ದು, ಎರಡು ಬದಿಯಲ್ಲಿ ಭೂಮಿಯನ್ನು ಅಗೆದು ಸುರಂಗ ನಿರ್ಮಿಸಲಾಗಿದೆ. ಈ ಸುರಂಗ ನೋಡಲು ಮಂಡ್ಯದಿಂದ ಶಿರಳ್ಳಿ ಮಾರ್ಗವಾಗಿ 14 ಕಿ.ಮೀ. ಪ್ರಯಾಣಿಸಿದ್ರೆ ಹುಲಿಕೆರೆ ಗ್ರಾಮ ಸಿಗುತ್ತದೆ.