ಕಲಬುರಗಿ ವಿಶ್ವವಿದ್ಯಾಲಯ ಪೊಲೀಸರು ಖೋಟಾ ನೋಟು ತಯಾರಿಸುತ್ತಿದ್ದ ಜಾಲವನ್ನು ಪತ್ತೆಹಚ್ಚಿದ್ದಾರೆ. ರಾಜರಾಜೇಶ್ವರಿ ನಗರದ ಬಾಡಿಗೆ ಮನೆಯಲ್ಲಿ ಕಲರ್ ಪ್ರಿಂಟರ್ ಬಳಸಿ ನಕಲಿ ನೋಟು ಮುದ್ರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕಲಬುರಗಿ (ಸೆ.6): ಒಂದು ಕಡೆ ರೌಡಿಶೀಟರ್‌ಗಳಿಂದಲೇ ಹಣ ವಸೂಲಿ ಮಾಡುವ ಲಂಚಬಾಕ ಪೊಲೀಸರು, ಇನ್ನೊಂದೆಡೆ ದಿನೇದಿನೆ ಹೆಚ್ಚುತ್ತಿರುವ ಕ್ರಿಮಿನಲ್‌ಗಳ ಉಪಟಳ ಇವೆಲ್ಲವುಗಳ ನಡುವೆ ಇದೀಗ ಖೋಟಾ ನೋಟು ಜಾಲ ಪತ್ತೆಯಾಗಿರುವುದು ಗೃಹಸಚಿವರ ತವರು ಜಿಲ್ಲೆಯಲ್ಲೇ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆಯಾ ಎಂಬ ಅನುಮಾನ ಮೂಡಿಸಿದೆ.
24
ಕಲಬುರಗಿ ಖೋಟಾ ನೋಟು ಜಾಲ: ವಿಶ್ವವಿದ್ಯಾಲಯ ಪೊಲೀಸರಿಂದ ದಾಳಿ
ಹೌದು ಕಲಬುರಗಿ ಜಿಲ್ಲೆಯಲ್ಲಿ ಖೋಟಾ ನೋಟು ತಯಾರಿಸಿ ಮಾರುತ್ತಿದ್ದ ಕಿಡಿಗೇಡಿಗಳ ಜಾಲವನ್ನು ವಿಶ್ವವಿದ್ಯಾಲಯ ಪೊಲೀಸರು ಪತ್ತೆಹಚ್ಚಿದ್ದಾರೆ. ಖಚಿತ ಮಾಹಿತಿ ಆಧಾರದ ಕಾರ್ಯಾಚರಣೆಗಿಳಿದ ಪೊಲೀಸರು ಕಲಬುರಗಿಯ ರಾಜರಾಜೇಶ್ವರಿ ನಗರದಲ್ಲಿ ಆರೋಪಿಗಳು ವಾಸವಿದ್ದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿ ಇಬ್ಬರು ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಓರ್ವ ಆರೋಪಿ ಎಸ್ಕೇಪ್ ಆಗಿದ್ದಾನೆ. ಪೊಲೀಸರು ದಾಳಿ ನಡೆಸಿದ ವೇಳೆ ಮನೆಯಲ್ಲಿ 500 ರೂಪಾಯಿ ಬೆಲೆಯ 28 ನೋಟು ಒಟ್ಟು 14 ಸಾವಿರ ಮೌಲ್ಯದ ಖೋಟಾ ನೋಟು ಜಪ್ತಿ ಮಾಡಲಾಗಿದೆ. ದಶರಥ್ ರಾಠೋಡ್, ಸಿದ್ರಾಮ್ ಬಂಧಿತ ಆರೋಪಿಗಳಾಗಿದ್ದು ,ಇನ್ನೋವ ಆರೋಪಿ ಅಶ್ವಿನ್ ಕುಮಾರ್ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದಾನೆ.
34
ಕಲರ್ ಪ್ರಿಂಟಿಂಗ್ ಮಷಿನ್‌ನಲ್ಲಿ ನಕಲಿ ನೋಟು!
ಮೈತುಂಬಾ ಸಾಲ ಮಾಡಿಕೊಂಡಿದ್ದ ಖದೀಮರು. ಸಾಲ ತೀರಿಸಲು ಖೋಟಾ ನೋಟು ತಯಾರಿಸಿ ಚಲಾವಣೆಗೆ ತರುವ ಸ್ಕೆಚ್ ಹಾಕಿದ್ದಾರೆ. ಕಳೆದ ಮಾರ್ಚ್‌ನಲ್ಲೇ ಖೋಟಾ ನೋಟು ಮುದ್ರಿಸುವ ಕಲರ್ ಪ್ರಿಂಟ್ ಮಷಿನ್ ಖರೀದಿಸಿ ತಂದಿದ್ದ ಆರೋಪಿಗಳು ಆದರೆ ಕೆಲಸ ಪರ್ಫೆಕ್ಟ್ ಆಗದ ಕಾರಣ ಮುದ್ರಿಸಿದ ನೋಟುಗಳು ಚಲಾವಣೆ ಮಾಡಲು ವಿಫಲರಾಗಿದ್ದರು. ಮನೆಯಲ್ಲೇ ಇಟ್ಟುಕೊಂಡರೆ ಅಪಾಯ ಎಂದರಿತ ಕಿಡಿಗೇಡಿಗಳು ಮೊದಲಿಗೆ ಪ್ರಿಂಟ್ ಮಾಡಿದ್ದ ಖೋಟಾನೋಟುಗಳನ್ನ ಸುಟ್ಟುಹಾಕಿದ್ದಾರೆಂದು ಹೇಳಲಾಗಿದೆ.
ಕಲಬುರಗಿಯಲ್ಲಿ ಖೋಟಾನೋಟು: ಒಂದು ಲಕ್ಷ ಕೊಟ್ರೆ ಎರಡು ಲಕ್ಷ ಆಫರ್!
ಬಾಡಿಗೆ ಮನೆಯಲ್ಲಿದ್ದುಕೊಂಡು ಕಲರ್ ಪ್ರಿಂಟರ್ ಮಷಿನ್‌ನಿಂದ ಖೋಟಾ ನೋಟು ತಯಾರಿಸಿ ಒಂದು ಲಕ್ಷಕ್ಕೆ ಎರಡು ಲಕ್ಷ ಕೊಡುವ ಆಫರ್ ಕೊಟ್ಟಿದ್ದ ಕಿಡಿಗೇಡಿಗಳು. ಕೆಲವು ವ್ಯಕ್ತಿಗಳಿಗೆ ಒಂದು ಲಕ್ಷ ಕೊಟ್ಟರೆ ಎರಡು ಲಕ್ಷ ವಾಪಸ್ ಕೊಡುವುದಾಗಿ ಆಫರ್ ತೋರಿಸಿದ್ದ ಖದೀಮರು. ಖೋಟಾ ನೋಟು ಚಲಾವಣೆಗೆ ತರಲು ಸಂಚು ರೂಪಿಸಿದ್ದಾಗಲೇ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ತಡಮಾಡದೇ ಎಚ್ಚೆತ್ತ ವಿಶ್ವವಿದ್ಯಾಲಯ ಪೊಲೀಸರು ಖಚಿತವಾದ ಮಾಹಿತಿ ಆಧಾರಿಸಿ ಆರೋಪಿಗಳಿದ್ದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿ ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಸದ್ಯ ಓರ್ವ ಎಸ್ಕೇಪ್ ಆಗಿದ್ದು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.